
ಬೆಂಗಳೂರು(ಏ.30): ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಅಸ್ವಸ್ಥರಾಗಿದ್ದ ತಾಯಿಯನ್ನು ಕೊಂದು ಬಳಿಕ ಮಗಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುನೇಶ್ವರ ನಗರದ ನಿವಾಸಿಗಳಾದ ರಜಿಯಾ ಸುಲ್ತಾನ (31) ಹಾಗೂ ಆಕೆಯ ತಾಯಿ ಜರೀನಾ ತಾಜ್ (55) ಮೃತ ದುರ್ದೈವಿಗಳು. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡು ಪೊಲೀಸರಿಗೆ ಶುಕ್ರವಾರ ಸಂಜೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯಲ್ಲಿ ತಾಯಿ ಕೊಲೆ ಹಾಗೂ ಮಗಳು ಆತ್ಮಹತ್ಯೆ ಕೃತ್ಯಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪ್ರಾಣ ಕಳೆದುಕೊಂಡ 9 ವಿದ್ಯಾರ್ಥಿಗಳು; ಮತ್ತಿಬ್ಬರಿಂದ ಆತ್ಮಹತ್ಯೆಗೆ ಯತ್ನ
ತಾಯಿ-ಮಗಳ ಪರಸ್ಪರ ಅವಲಂಬನೆ
ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ರಜಿಯಾ ಸುಲ್ತಾನ, ತನ್ನ ತಾಯಿ ಜತೆ ನೆಲೆಸಿದ್ದಳು. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ಆಕೆಗೆ ತಾಯಿಯೇ ಆಸರೆಯಾಗಿದ್ದಳು. ಆದರೆ ಹಲವು ದಿನಗಳಿಂದ ಜರೀನಾ ತಾಜ್ ಮಾನಸಿಕ ಅಸ್ವಸ್ಥೆಯಾಗಿದ್ದಳು. ಈ ಕಾಯಿಲೆ ಸಂಬಂಧ ವೈದ್ಯಕೀಯ ಚಿಕಿತ್ಸೆಯನ್ನು ಅವರು ಪಡೆದಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ತಾಯಿ ಆರೋಗ್ಯ ಸುಧಾರಣೆ ಕಾಣದೆ ಹೋಗಿದ್ದು ರಜಿಯಾಳಿಗೆ ನೋವು ತಂದಿತ್ತು. ಹೀಗಿರುವಾಗ ಪ್ರೀತಿಸಿ ಮದುವೆಯಾದ ಪತಿಯೂ ಸಹ ಕೌಟುಂಬಿಕ ಕಲಹ ಕಾರಣಕ್ಕೆ ಆಕೆಯಿಂದ ಪ್ರತ್ಯೇಕವಾಗಿದ್ದ. ಈ ಕೌಟುಂಬಿಕ ಕಲಹ ರಜಿಯಾಳಲ್ಲಿ ಮತ್ತಷ್ಟು ದುಃಖ ಉಂಟು ಮಾಡಿತು. ಈ ಹಿನ್ನಲೆಯಲ್ಲಿ ಬೇಸತ್ತ ಆಕೆ, ತಾನು ಸಾವನ್ನಪ್ಪಿದ್ದರೆ ನನ್ನ ಆಶ್ರಯಿಸಿರುವ ತಾಯಿ ಸಂಕಷ್ಟಕ್ಕೆ ತುತ್ತಾಗುತ್ತಾಳೆ ಎಂದು ಭಾವಿಸಿ ತನ್ನ ತಾಯಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ರಜಿಯಾ ನಿರ್ಧರಿಸಿದ್ದಾಳೆ. ಅಂತೆಯೇ ಎರಡು ದಿನಗಳ ಹಿಂದೆ ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ