ಮಾರಿಕಾಂಬ ದೇವಿಯ ಜಾತ್ರೆ ಸಂಪ್ರದಾಯ ಮೀರಿದ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರನ್ನೇ ಯುವಕರು ಜಖಂ ಮಾಡಿರುವ ಘಟನೆ ಜಗಳೂರಿನಲ್ಲಿ ನಡೆದಿದೆ.
ದಾವಣಗೆರೆ (ಏ.27): ಮಾರಿಕಾಂಬ ದೇವಿಯ ಜಾತ್ರೆ ಆಚರಣೆಯ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಲೂ ಚರಗ ಚೆಲ್ಲುತ್ತಿದ್ದ ವೇಳೆ ಯಾರೊಬ್ಬರೂ ಗ್ರಾಮದೊಳಗೆ ಪ್ರವೇಶ ಮಾಡುವಂತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ, ಈ ಸಂಪ್ರದಾಯವನ್ನು ಮೀರಿದ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರನ್ನೇ ಗ್ರಾಮದ ಯುವಕರು ಜಖಂ ಮಾಡಿರುವ ಘಟನೆ ಜಗಳೂರಿನಲ್ಲಿ ನಡೆದಿದೆ.
ರಾಜ್ಯಾದ್ಯಂತ ವಿವಿಧ ಧಾರ್ಮಿಕ ಆಚರಣೆಗಳು ಜಾರಿಯಲ್ಲಿವೆ. ಹೀಗೆ ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಹೆಣ್ಣು ದೇವರ ಜಾತ್ರೆಯನ್ನು ಮಾಡುವಾಗ ಗ್ರಾಮದ ಸುತ್ತಲೂ ಚರಗ ಚೆಲ್ಲುವ ಸಂಪ್ರದಾಯವನ್ನು ಮಾಡಲಾಗುತ್ತದೆ. ಇದೇ ರೀತಿ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿಯೂ ಕೂಡ ಮಾರಿಕಾಂಬ ಜಾತ್ರೆಯನ್ನು ಮಾಡಲಾಗುತ್ತದೆ. ಹಲವು ವರ್ಷಗಳಿಗೊಮ್ಮೆ ಮಾಡುವ ಈ ಹಬ್ಬದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಯಾವುದೇ ಲೋಪ ಆಗದಂತೆ ಗ್ರಾಮಸ್ಥರು ಹೆಚ್ಚಿನ ನಿಗಾವಹಿಸುತ್ತಾರೆ. ಇನ್ನು ಮುಖ್ಯವಾಗಿ ಗ್ರಾಮದ ಸುತ್ತಲೂ ದೇವಿಯ ಮೆರವಣಿಗೆ ಮಾಡುತ್ತಾ ಚರಗವನ್ನು ಚೆಲ್ಲುವಾಗ ಬೇರೆ ಊರಿನವರು ಗ್ರಾಮದೊಳಗೆ ಪ್ರವೇಶ ಮಾಡುವುದಾಗಲೀ ಅಥವಾ ಗ್ರಾಮದೊಳಗಿರುವ ಜನರು ಹೊರಗೆ ಹೋಗುವುದಾಗಲೀ ಮಾಡುವಂತಿಲ್ಲ.
BENGALURU: ಸಾಯ್ತೀನಿ ಅಂತ ನಾಟಕ ಮಾಡ್ತಿದ್ದ ಪ್ರೇಯಸಿಯನ್ನು ಕೊಲೆಗೈದ ಆಂಟಿ ಲವರ್
ಆದರೆ, ಈ ನಿಯಮ ಮೀರಿ ಗ್ರಾಮದ ಗಡಿಯೊಳಗೆ ಪ್ರವೇಶ ಮಾಡಲು ಮುಂದಾದ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿಗೆ ನೀವು ಸಂಪ್ರದಾಯಕ್ಕೆ ಧಕ್ಕೆ ತರಬೇಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸ್ವಲ್ಪ ಹೊತ್ತು ಬಿಟ್ಟು ಬೆಳಗಾದ ಮೇಲೆ ನೀವು ಈ ರಸ್ತೆಯಲ್ಲಿ ಹೋಗಬಹುದು ಎಂದು ತಿಳಿಸಿದ್ದಾರೆ. ಆದರೆ, ಗ್ರಾಮಸ್ಥರ ಮಾತನ್ನು ಕೇಳದೇ ರಸ್ತೆಯಲ್ಲಿ ಕಾರು ನುಗ್ಗಿಸಿ ಗ್ರಾಮದ ಗಡಿ ಪ್ರವೇಶ ಮಾಡಿದ ಶ್ರೀಗಳ ಕಾರನ್ನು ಗ್ರಾಮದಲ್ಲಿ ಗಡಿ ಕಾಯುತ್ತಿದ್ದ ಯುವಕರ ಗುಂಪು ಶ್ರೀಗಳ ಕಾರನ್ನು ಜಖಂ ಮಾಡಿದ್ದಾರೆ.
ನಂಬಿಕೆಗೆ ಧಕ್ಕೆ ತಂದೆ ಯಾರನ್ನೂ ಸಹಿಸೊಲ್ಲ: ಧಾರ್ಮಿಕ ಹಬ್ಬ ಆಚರಣೆ ಮಾಡುವ ವೇಳೆ ಗ್ರಾಮಸ್ಥರು ಇಟ್ಟುಕೊಂಡ ನಂಬಿಕೆ ಹಾಗೂ ಸಂಪ್ರದಾಯಗಳನ್ನು ಯಾರೊಬ್ಬರೂ ಮೀರುವಂತಿಲ್ಲ. ಆದರೆ, ಧಾರ್ಮಿಕ ಮುಖಂಡರಾದವರೇ ಸಂಪ್ರದಾಯಗಳನ್ನು ಮೀರಿದರೆ ಹೇಗೆ? ಯಾರೇ ಆಗಿದ್ದರೂ ಹಬ್ಬ, ಮತ್ತು ಜಾತ್ರೆಯ ಸಂಪ್ರದಾಯಗಳನ್ನು ಮೀರಿ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎನ್ನುವುದಕ್ಕೆ ಮಠವೊಂದರ ಸ್ವಾಮೀಜಿಯ ಕಾರನ್ನು ಜಖಂ ಮಾಡಿದ ಘಟನೆ ಸಾಕ್ಷಿಯಾಗಿದೆ. ಇದು ಎಲ್ಲರಿಗೂ ಪಾಠವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
16 ಜನರ ಮೇಲೆ ಪ್ರಕರಣ ದಾಖಲು: ಜಗಳೂರಿನಲ್ಲಿ ಮಾರಿಕಾಂಬ ಜಾತ್ರೆ ಪ್ರಯುಕ್ತ ಚರಗ ಚೆಲ್ಲುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಗ್ರಾಮದ ಮಾರ್ಗದಲ್ಲಿ ಕಾರು ಸಂಚರಿಸಬಾರದೆಂದು ಎಂದು ನಂಬಿಕೆಯಿದೆ. ಆದರೆ ಸ್ವಾಮೀಜಿ ಸಂಪ್ರದಾಯ ಮುರಿದಿದ್ದಾರೆಂದು ಅವರ ಕಾರಿನ ಗಾಜು ಪುಡಿ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ 16 ಜನರ ಬಂಧನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಪೊಲೀಸರು ಬಂದು ಗ್ರಾಮದ 16 ಜನರನ್ನು ಬಂಧಿಸಲು ಮುಂದಾದಾಗ ಇಡೀ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ಮಾಡಿದ್ದಾರೆ.
ದಾವಣಗೆರೆ: ಈಗ ಎಲ್ಲವೂ ಡಿಜಿಟಲ್, ಫೋನ್ ಪೇ ಮೂಲಕ ಲಂಚ ತಗೊಂಡು ತಗ್ಲಾಕೊಂಡ ಪೊಲೀಸಪ್ಪ..!
ಲಾಠಿ ಚಾರ್ಜ್ ಮಾಡಿದ ಪೊಲೀಸರು: ಗ್ರಾಮದ ಯುವಕರು ಹಬ್ಬ ಆಚರಣೆ ವೇಳೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಸ್ವಾಮೀಜಿಯ ಮಾತು ಕೇಳಿಕೊಂಡು ಯುವಕರು ಹಾಗೂ ಮಕ್ಕಳನ್ನು ಬಂಧಿಸುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ. ಯುವಕರನ್ನು ಬಂಧಿಸಲು ಬಿಡದ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಜೊತೆಗೆ, ಆರೋಪ ಕೇಳಿಬಂದ ಯುವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇದನ್ನು ಪ್ರಶ್ನೆ ಮಾಡಲು ಹೋದ ಗ್ರಾಮಸ್ಥರ ಮೇಲೆ ಪೊಲೀಸ್ ಠಾಣೆಯ ಬಳಿಯೂ ಲಾಠಿಯಿಂದ ಹೊಡೆದು ಕಳುಹಿಸಲಾಗಿದೆ. ಸಾರ್ವಜನಿಕರನ್ನು ಹೀನಾಯವಾಗಿ ನಡೆಸಿಕೊಂಡ ಪೊಲೀಸರ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜನರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿಡಿಯೋ ವೈರಲ್ ಆಗಿದೆ.