ಸಿಪಿಐ ಶ್ರೀಮಂತ ಇಲ್ಲಾಳ ಮೇಲಿನ ಹಲ್ಲೆ ಘಟನೆಯಿಂದ ಗಾಂಜಾ ಬಹುದೊಡ್ಡ ಮಾರುಕಟ್ಟೆ ಮೇಲೆ ಬೆಳಕು, ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿರುವ ಹತ್ತಾರು ಹಳ್ಳಿಗಳಲ್ಲಿ ಎಗ್ಗಿಲ್ಲದೆ ಸಾಗಿದೆ ಗಾಂಜಾ ಬೆಳೆ ಬೇಸಾಯ
ಶೇಷಮೂರ್ತಿ ಅವಧಾನಿ
ಕಲಬುರಗಿ(ಸೆ.28): ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿನ ಗಂಜಾ ಮಾಫಿಯಾ ಅಟ್ಟಹಾಸ ಬೀದರ್ ಹಾಗೂ ಕಲಬುರಗಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಕಳೆದ ಶುಕ್ರವಾರ ಹೊನ್ನಳ್ಳಿ ಹೊಲದಲ್ಲಿ ನಡೆದ ದಾಳಿ ಪ್ರಕರಣ, ಕಲಬುರಗಿ ಸಿಪಿಐ ಇಲ್ಲಾಳ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಬೆಳವಣಿಗೆ ಬೆನ್ನಲ್ಲೇ ಈ ಗಡಿಗ್ರಾಮಗಳಲ್ಲಿ ಗಾಂಜಾ ಫಸಲು ಭಾರಿ ಪ್ರಮಾಣಲ್ಲಿ ಬೆಳೆಯಲಾಗುತ್ತಿರುವ ಬಗ್ಗೆ ಮಹತ್ವದ ಸಂಗತಿಗಳು ಸುದ್ದಿಗೆ ಗ್ರಾಸವಾಗಿವೆ. ಹಲ್ಲೆ ಘಟನೆ ಉಮರ್ಗಾ ಠಾಣಾ ವ್ಯಾಪ್ತಿಯ ತರೂರಿಯಲ್ಲಿ ಸಂಭವಿಸಿದೆ ಎಂದು ಮುಂಚೆ ಹೇಳಲಾಗಿತ್ತಾದರೂ ಘಟನೆ ಸಂಭವಿಸಿದ್ದು ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಮಂಠಾಳ ಠಾಣೆ ವ್ಯಾಪ್ತಿಯ ಹೊನ್ನಳ್ಳಿ ಹೊಲದಲ್ಲಿ ಎಂಬುದು ಇದೀಗ ಸ್ಪಷ್ಟವಾಗಿದೆ. ಹೀಗಾಗಿ ಸದರಿ ಪ್ರಕರಣ ಬೀದರ್ ಹಾಗೂ ಕಲಬುರಗಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ತಲೆ ಮರೆಸಿಕೊಂಡಿರೋ ಆರೋಪಿಗಳು:
ಹಲ್ಲೆ ಘಟನೆ ಸಂಭವಿಸಿ ನಾಲ್ಕು ದಿನಗಳಾಗಿವೆ. ಪೊಲೀಸರು ಈಗಾಗಲೇ ಗಡಿಯಲ್ಲಿರುವ ಹೊನ್ನಳ್ಳಿ, ತೊರ್ಲೆವಾಡಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಶೋಧಕಾರ್ಯ ನಡೆಸಿ ಹಲವ ವಿರುದ್ಧ ಪ್ರಕರಣ ದಾಖಲಿಸಿದದಾರೆ. ವಾಸ್ತವದಲ್ಲಿ ಈ ಹಳ್ಳಿಗಳಲ್ಲಿ ಹೆಚ್ಚಿನವರು ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳ ಪತ್ತೆಕಾರ್ಯ ವಿಳಂಬವಾಗುತ್ತಿದೆ. ತೊರ್ಲೆವಾಡಿಯಲ್ಲಿರುವ ಅನೇಕರು ಮನೆ ಖಾಲಿ ಮಾಡಿದ್ದಾರೆ. ಇಲ್ಲಿನ ನಿವಾಸಿಗಳೇ ಗಾಂಜಾ ಮಾರಾಟಗಾರರು ಎಂದು ಹೇಳಲಾಗುತ್ತಿದೆ. ಇವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆದು ಗೊತ್ತಾಗಿದೆ.
ಕಲಬುರಗಿ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ: 3 ದಿನ ಆಯ್ತು, ಅಪ್ಪ ಕಣ್ಣುಬಿಟ್ಟು ನಮ್ಮನ್ನ ನೋಡಿಲ್ಲ..!
ಗಿಯಲ್ಲಿ ಗಾಂಜಾ ಘಮಲು:
ಕರ್ನಾಟಕದ ಕಲಬುರಗಿ ಹಾಗೂ ಬೀರ್ ಜಿಲ್ಲೆಗಳ ಗಡಿಗೆ ಅಂಟಿರುವ ಮಹಾರಾಷ್ಟ್ರದ ಧಾಕ್ರೆವಾಡಿ, ತೋಲೆನಾಡಿ, ಹಿಪ್ಪರರ್ಗಾ ವಾಡಿ, ಹೊನ್ನಳ್ಳಿ, ತರೂರಿ ಸೇರಿದತೆ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಗಾಂಜಾ ಬೇಸಾಯ ಎಗ್ಗಿಲ್ಲದೆ ಸಾಗಿರೋದೇ ಅಲ್ಲಿ ಮಾಫಿಯಾ ಬಲವಾಗಿ ಬೇರೂರಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇಲ್ಲಿನ ಕಬ್ಬಿನ ಬೆಳೆಯಲ್ಲಿ ಇವರು ಯಾರಿಗೂ ಗತ್ತಾಗದಂತೆ ಗಾಂಜಾ ಬೆಳೆಯುತ್ತಾರೆ.
ಹಿಂದೊಮ್ಮೆ ಮಂಠಾಳ ಠಾಣೆಯ ಪಿಎಸ್‌ಐ ಒಬ್ಬರ ಮೇಲೂ ಇದೇ ಜಾಗದಲ್ಲಿ ಹಲ್ಲೆಯಾಗಿತ್ತು. ಇದೀಗ ಸಿಪಿಐ ಮೇಲೆ ಹಲ್ಲೆ ನಡೆಸುವಷ್ಟುಖದೀಮರು ಬೆಳೆದು ನಿಂತಿರೋದೇ ಪೊಲೀಸರನ್ನು , ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸಿದೆ.
ಗಾಂಜಾ ಮಾಫಿಯಾದವರಿಂದ ಬೇಸತ್ತಿದ್ದೇವೆ:
ಈ ಗ್ರಾಮಗಳಲ್ಲಿ ಗಾಂಜಾ ಹರಾಜು ನಡೆಯುತ್ತದೆ. ಹೀಗೆ ಹರಾಜಲ್ಲಿ ಪಾಲ್ಗೊಂಡವರು ಕರ್ನಾಟಕ, ಮಹಾರಾಷ್ಟ್ರದ ಹಲವಾರು ಭಾಗಗಳಲ್ಲಿ ಸದ್ದಿಲ್ಲದೆ ಗಾಂಜಾ ಸಾಕಾಣಿಕೆ ಮಾಡಿ ದುಡ್ಡು ಮಾಡುತ್ತಿದ್ದಾರೆ. ಹೀಗಾಗಿ ಈ ಮಾಫಿಯಾ ಗಡಿಯಲ್ಲಿ ಆಲದ ಮರದಂತೆ ಬೆಳೆದು ನಿಂತಿದೆ ಎಂದು ಮೂಲಗಳು ಹೇಳಿವೆ.
ಈ ಗಾಂಜಾ ವಾಡಿಗಳಿಗೆ ಹೊಂದಿಕೊಂಡೇ ಕರ್ನಾಟಕದ ಬೀದರ್ ಜಿಲ್ಲೆಯ ಮಂಠಾಳ ರೈತರ ಜಮೀನುಗಳಿವೆ. ನಾವಂತೂ ಈ ಗಾಂಜಾ ಮಾರಾಟಗಾರರ ಕಿರಿಕಿರಿಕಿಗೆ ಬೆಸತ್ತಿದ್ದೇವೆ. ಅವರು ನಮ್ಮ ಮೇಲೆ ಭಾರಿ ದಬ್ಬಾಳಿಕೆ ಮಾಡುತ್ತಾರೆ. ಹೊಲದಲ್ಲಿ ಏನೇ ಕೆಲಸವಿರಲಿ, ಹೊತ್ತು ಇನ್ನೂ ಇರುವಾಗಲೇ ಮುಗಿಸಿ ಮನೆ ದಾರಿ ಹಿಡಿಯುತ್ತೇವೆ. ಅವರೊಂದಿಗೆ ಯಾರೂ ಜಗಳ ಮಾಡಬೇಕು ಹೇಳಿರೆಂದು ಹೊನ್ನಳ್ಳಿ, ಮುನ್ನಳ್ಳಿಯ ರೈತರು ಅನೇಕರು ತಾವು ನಿತ್ಯ ದುರಿಸುತ್ತಿರುವ ಗಾಂಜಾ ಮಾಫಿಯಾದ ತೊಂದರೆಗಳನ್ನು ವಿವರಿಸಿ ಹಿಡಿಸಾಪ ಹಾಕುತ್ತಿದ್ದಾರೆ.
ಕಲಬುರಗಿ: ಸಿದ್ಧತೆ ಇಲ್ಲದೆ ಗಾಂಜಾ ಗ್ಯಾಂಗ್ ಬೆನ್ನಟ್ಟಿತೆ ಕಲಬುರಗಿ ಖಾಕಿ ಪಡೆ?
850 ಗ್ರಾಂ ಗಾಂಜಾ ಪತ್ತೆ:
ಮಹಾರಾಷ್ಟ್ರದ ಗಡಿಯಲ್ಲಿರುವ ತೋರ್ಲೆವಾಡಿ ಗ್ರಾದಲ್ಲಿ ಪೊಲೀಸರ ಶೋಧ ವೇಳೆಗೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 850 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದಲ್ಲದೆ ಇದೇ ವೇಳೆ ಕಲಬುರಗಿ ಎಸ್ಪಿ ಇಶಾ ಪಂತ್ ಗಾಂಜಾ ಪ್ರಕರಣದಲ್ಲಿ ಈಚೆಗೆ ಬಂಧನಕ್ಕೊಳಗಾಗಿದ್ದ ಬಸವಕಲ್ಯಾಣದ ಸಂತೋಷ ಈತನನ್ನು ಜೊತೆಗೇ ಕರೆದೊಯ್ದು ತೋರ್ಲೆವಾಡಿ, ಹೊನ್ನಳ್ಳಿ ಇಲ್ಲೆಲ್ಲಾ ಸುತ್ತಾಡಿಸಿ ಸ್ಥಳ ಮಹಜರು ಮಾಡಿದ್ದಾರೆಂದು ಗೊತ್ತಾಗಿದೆ.
ಮಹಾರಾಷ್ಟ್ರ ಪೊಲೀಸರ ಮೌನ!
ಮಹಾರಾಷ್ಟ್ರದ ವ್ಯಾಪ್ತಿಯ ಹಲವಾರು ವಾಡಿ, ಗ್ರಾಮಗಳಲ್ಲಿ ಈ ಪರಿಯಲ್ಲಿ ಗಾಂಜಾ ಬೇಸಾಯ, ಹರಾಜು ನಡೆಯುತ್ತಿದ್ದರೂ ಮಹಾರಾಷ್ಟ್ರ ಪೊಲೀಸರು ಮೌನ ವಹಿಸಿರೋದು ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕದ ಪೊಲೀಸರ ಮೇಲೆ ಗಾಂಜಾ ಖದೀಮರು ದಳಿ ಮಾಡಿ ಹಲ್ಲೆ ಮಾಡಿದ್ದರೂ ಸಹ ಉಮ್ಮರ್ಗಾ ಠಾಣೆಯ ಪೊಲೀಸರಿಂದ ಇಂದಿಗೂ ಸಮರ್ಪಕ ಸ್ಪಂದನೆ ದೊರಕಿಲ್ಲ. ಇಲ್ಲಿಗೆ ಎಸ್ಪಿ ಇಶಾ ಪಂತ್ ಭೇಟಿ ಮಾಡಿ ಬಂದರೂ ಅವರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ನಿಷೇಧಿತ ಗಾಂಜಾ ಬೆಳೆ ಶೋಧಕ್ಕೂ ಮುಂದಾಗದಿರೋದು ಅನೇಕ ಶಂಕೆಗಳಿಗೆ ಕಾರಣವಾಗಿದೆ.