ಪತ್ನಿ ಎದುರೇ ಶವವಾದ ಬಡ ಕೂಲಿ ಜಲೀಲ್‌!

Published : Dec 21, 2019, 07:54 AM ISTUpdated : Dec 21, 2019, 09:02 AM IST
ಪತ್ನಿ ಎದುರೇ ಶವವಾದ ಬಡ ಕೂಲಿ ಜಲೀಲ್‌!

ಸಾರಾಂಶ

ಪತ್ನಿ ಎದುರೇ ಶವವಾದ ಬಡ ಕೂಲಿ ಜಲೀಲ್‌!| ಪ್ರತಿಭಟನೆಯಲ್ಲಿ ಭಾಗಿಯಾಗದೆ ಪ್ರಾಣತೆತ್ತ, ದಕ್ಕೆಯಲ್ಲಿ ಮೀನು ಹೊರುವ ಕಾಯಕದ ಜಲೀಲ್‌, ಇಬ್ಬರು ಪುಟ್ಟಮಕ್ಕಳ ಕುಟುಂಬ ಅತಂತ್ರ

ಸಂದೀಪ್‌ ವಾಗ್ಲೆ

ಮಂಗಳೂರು[ಡಿ.21]: ಮೀನುಗಾರಿಕಾ ದಕ್ಕೆಯಲ್ಲಿ ಮೀನು ಬಾಕ್ಸ್‌ ಮಾಡುವ ಕೂಲಿ ಕೆಲಸ ಮುಗಿಯೋದೆ ಸಂಜೆ 4 ಗಂಟೆಗೆ. ಅಲ್ಲಿಂದ ಸೀದ ಸಮೀಪದ ಅಜೀಜುದ್ದೀನ್‌ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಆಗಮಿಸಿ ಸ್ನಾನ, ಊಟ ಮುಗಿಸಿ ರಸ್ತೆಯಲ್ಲಿ ಏನಾಗ್ತಿದೆ ನೋಡೋಣ ಎಂದು ಮನೆ ಓಣಿಯ ಅಂಚಿನವರೆಗೆ ಬಂದದ್ದಷ್ಟೆ. ಎಲ್ಲಿಂದಲೋ ತೂರಿಕೊಂಡು ಬಂದ ಗುಂಡು ಕಣ್ಣಿನ ಮೂಲಕ ಹಾಯ್ದು ಮೆದುಳನ್ನು ಛಿದ್ರಗೊಳಿಸಿತ್ತು. ಆ ಬಡ ಕೂಲಿ ಕಾರ್ಮಿಕ ತನ್ನ ಪತ್ನಿಯ ಎದುರೇ ರಕ್ತಸಿಕ್ತ ಮಡುವಿನಲ್ಲಿ ಬಿದ್ದಿದ್ದರು. ಕ್ಷಣಾರ್ಧದಲ್ಲಿ ಅವರ ಪ್ರಾಣಪಕ್ಷಿ ತಿರುಗಿ ಬಾರದ ಲೋಕಕ್ಕೆ ಹಾರಿಹೋಗಿತ್ತು.

ಸರ್ಕಾರವೇ ಅಮಾಯಕರನ್ನು ಕೊಲ್ಲಿಸಿದೆ: ಕುಮಾರಸ್ವಾಮಿ

ಮಂಗಳೂರಿನಲ್ಲಿ ಗುರುವಾರ ಸಂಜೆ ನಡೆದ ಹಿಂಸಾಚಾರದ ಸಂದರ್ಭ ಪೊಲೀಸ್‌ ಗುಂಡೇಟಿಗೆ ಬಲಿಯಾದ ಅಬ್ದುಲ್‌ ಜಲೀಲ್‌ ಅವರ ಕರುಣಾಜನಕ ಕತೆಯಿದು. ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಕೇವಲ ಪರಿಸ್ಥಿತಿ ನೋಡಲು ಮನೆಯಿಂದ ಹೊರಗಡಿ ಇಟ್ಟವರು ಶವವಾಗಿ ಬಿಟ್ಟಿದ್ದಾರೆ. ಇಬ್ಬರು ಪುಟ್ಟಮಕ್ಕಳಿರುವ ಅವರ ಕುಟುಂಬ ಈಗ ದಿಕ್ಕಿಲ್ಲದೆ ಅನಾಥವಾಗಿದೆ. ಪತ್ನಿ ಹಾಗೂ ಆಸುಪಾಸು 70 ವರ್ಷ ವಯಸ್ಸಿನ ತಾಯಿಯಂತೂ ಮನೆಯಿಂದ ಹೊರಗೇ ಬಂದಿಲ್ಲ. ಊಟ, ತಿಂಡಿಯನ್ನೂ ಮಾಡದೆ ರೋದಿಸುತ್ತಿದ್ದಾರೆ.

‘ಕನ್ನಡಪ್ರಭ’ ಪ್ರತಿನಿಧಿ ಬಂದರಿನ ಜಲೀಲ್‌ ಅವರ ಬಾಡಿಗೆ ಮನೆ ಹಾಗೂ ಬದ್ರಿಯಾ 3ನೇ ರಸ್ತೆಯ ಓಣಿಯಲ್ಲಿರುವ ಅವರ ಪುಟ್ಟಮೂಲಮನೆಗೆ ಭೇಟಿ ನೀಡಿದಾಗ ಸ್ಮಶಾನ ಮೌನ ಆವರಿಸಿತ್ತು. ಕೇವಲ ಹೆಣ್ಮಕ್ಕಳೇ ಅಲ್ಲಿ ತುಂಬಿದ್ದರು, ಮುಖದಲ್ಲಿ ದುಃಖ ಮಡುಗಟ್ಟಿತ್ತು. ಯಾರೂ ಮಾತನಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಸಾವು ಇಡೀ ಓಣಿಯನ್ನು ದಂಗುಬಡಿಸಿತ್ತು. ಆದರೂ ಸಾವರಿಸಿಕೊಂಡು ನಡೆದ ಘಟನೆಯನ್ನು ಕಣ್ಣೀರಿನೊಂದಿಗೆ ವಿವರಿಸಿದರು.

ಪತ್ನಿ ಹೋಗಬೇಡಿ ಎಂದಿದ್ದರು: ದಕ್ಕೆಯಲ್ಲಿ ಮೀನು ಹೊರುವ ಕಾಯಕ ಮಾಡುವ ಅಬ್ದುಲ್‌ ಜಲೀಲ್‌ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಹೊರಟರೆ ವಾಪಸ್‌ ಬರೋದೆ ಸಂಜೆ 4 ಗಂಟೆಗೆ. ಎಂದಿನಂತೆ ಗುರುವಾರವೂ ಬೆಳ್ಳಂಬೆಳಗ್ಗೆ 4 ಗಂಟೆಗೆ ಅಜೀಜುದ್ದೀನ್‌ ರಸ್ತೆಯಲ್ಲಿರುವ ಬಾಡಿಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದರು. ಸಂಜೆ 4ರ ಆಸುಪಾಸು ವಾಪಸ್‌ ಬರುವಾಗ ಪ್ರತಿಭಟನೆ ಇನ್ನೂ ವಿಕೋಪಕ್ಕೆ ಹೋಗಿರಲಿಲ್ಲ. ಸೀದ ಮನೆಗೆ ಹೋದವರೇ ಸ್ನಾನ ಮುಗಿಸಿ, ಊಟ ಮಾಡಿದ್ದರು. ಅವರ ಬಾಡಿಗೆ ಮನೆ ಇರುವುದು ಮುಖ್ಯ ರಸ್ತೆಯಿಂದ ಸುಮಾರು 20 ಮೀ. ಒಳಗೆ. ಊಟ ಮುಗಿಸಿ ಹೊರಗೇನಾಗ್ತಿದೆ ನೋಡಿಕೊಂಡು ಬರುತ್ತೇನೆ ಎಂದು ಪತ್ನಿ ಬಳಿ ಹೇಳಿ ರಸ್ತೆಯತ್ತ ಬರುತ್ತಿದ್ದರು. ಪತ್ನಿ ಹೋಗಬೇಡಿ ಎಂದರೂ ಕುತೂಹಲದಿಂದ ಹೊರಟಿದ್ದರು. ಅಪಾಯದ ಮುನ್ಸೂಚನೆ ಅರಿತ ಪತ್ನಿ, ಅವರನ್ನು ವಾಪಸ್‌ ಕರೆದುಕೊಂಡು ಬರಲು ತನ್ನ ತಮ್ಮನನ್ನು ಕಳಿಸಿದ್ದರು. ಅಬ್ದುಲ್‌ ಜಲೀಲ್‌ 20 ಮೀಟರ್‌ ನಡೆದು ಮುಖ್ಯರಸ್ತೆ (ಅಜೀಜುದ್ದೀನ್‌ ರಸ್ತೆ)ಯ ಅಂಚಿಗೆ ಬಂದು ತಲುಪಿದ್ದಷ್ಟೇ. ಅತ್ತ ಪತ್ನಿ ನೋಡುತ್ತಿದ್ದಂತೆಯೇ ಹೆಣವಾಗಿಬಿಟ್ಟಿದ್ದಾರೆ.

ಮಂಗಳೂರು ಹಿಂಸಾಚಾರ: ಉಡುಪಿಯಲ್ಲಿ ಮುಸ್ಲಿಂ ವರ್ತಕರಿಂದ ಬಂದ್‌

‘‘ಊಟ ಮುಗಿಸಿದ್ದೇ ತಡ ಜಲೀಲ್‌ ಮನೆಯಿಂದ ಹೊರಬಂದು ಗುಂಡಿಗೆ ಆಹುತಿಯಾದರು. ಅವರು ಆಗಷ್ಟೇ ತಿಂದ ಬಿರಿಯಾನಿ ಅವರ ಮೃತದೇಹದ ಬಾಯಿಂದ ಹೊರಬರುತ್ತಿತ್ತು’’ ಎಂದು ಹೆಸರು ಹೇಳಲಿಚ್ಛಿಸದ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ವಿವರಿಸಿದರು. ‘‘ಅಬ್ದುಲ್‌ ಜಲೀಲ್‌ ಯಾರ ತಂಟೆಗೂ ಹೋದವರಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದವರು. ಪೊಲೀಸರು ಲಾಠಿ ಚಾಜ್‌ರ್‍ ಮಾಡಲಿ. ಅದರೆ ಇಂಥ ಅಮಾಯಕನನ್ನು ಕೊಂದು ಹಾಕುವುದು ಸರಿಯಾ? ಅವರ ಪತ್ನಿ, ಮಕ್ಕಳಿಗೆ ಇನ್ನು ಯಾರು ಗತಿ’’ ಎಂದು ಸ್ಥಳೀಯರಾದ ಫೈಝಲ್‌ ನೋವಿನಿಂದ ಹೇಳಿಕೊಂಡರು.

ಬಡ ಕುಟುಂಬ, ಜೋಪಡಿ ಮನೆ

ಜಲೀಲ್‌ ಅವರದ್ದು ಬಡ ಕುಟುಂಬ. ಅವರ ಅಣ್ಣ ಯಾಹ್ಯಾ ತನ್ನ ಕುಟುಂಬದೊಂದಿಗೆ ಬದ್ರಿಯಾ ರಸ್ತೆಯ 3ನೇ ಓಣಿಯಲ್ಲಿರುವ ಮೂಲಮನೆಯಲ್ಲಿದ್ದರೆ, ಜಲೀಲ್‌ ಕುಟುಂಬ ಬಾಡಿಗೆ ಮನೆಯಲ್ಲಿತ್ತು. ಅವರ ಮೂಲಮನೆ ಎಂದರೆ ಸಣ್ಣ ಜೋಪಡಿ. ಎರಡೇ ಸೆಂಟ್ಸ್‌ನಲ್ಲಿ ಎಂದೋ ಕಟ್ಟಿದ ಗೂಡಿನಂತಿದೆ. ಒಳಗೆ ಹೋಗಿ ಕೈ ಎತ್ತರಿಸಿದರೆ ಛಾವಣಿ ತಾಗುತ್ತದೆ. ಸುತ್ತ ಆಳೆತ್ತರದ ಮನೆಗಳಿದ್ದರೂ ಇವರದ್ದು ಮೇಲೆ ಟರ್ಪಾಲು ಹಾಸಿದ, ಗೋಡೆಗಳಲ್ಲಿ ಮುರಕಲ್ಲು ಎದ್ದು ಕಾಣುವ ಹಳೆಯ ಜೋಪಡಿ.

ಪ್ರತಿಭಟನಾಕಾರರು ತಪ್ಪಿಸಿಕೊಂಡಿದ್ದರು

ಗುರುವಾರ ಸಂಜೆ ಅಜೀಜುದ್ದೀನ್‌ ರಸ್ತೆಯಲ್ಲಿ ಪೊಲೀಸರೊಂದಿಗೆ ಘರ್ಷಣೆ, ಕಲ್ಲು ತೂರಾಟದಲ್ಲಿ ನೂರಕ್ಕೂ ಹೆಚ್ಚು ಮಂದಿ ತೊಡಗಿದ್ದರು. ಅತ್ತಲಿಂದ ಪೊಲೀಸರು ಟಿಯರ್‌ ಗ್ಯಾಸ್‌, ರಬ್ಬರ್‌ ಗುಂಡು ಹೊಡೆಯುತ್ತಿದ್ದರೆ, ಇತ್ತ ಪ್ರತಿಭಟನಾಕಾರರು ಕಲ್ಲು ಬೀಸುತ್ತಿದ್ದರು. ಪ್ರತಿಭಟನಾಕಾರರು ಪೊಲೀಸರ ಗುಂಡೇಟಿನಿಂದ ಪಾರಾಗಿದ್ದರೆ, ಅದರಲ್ಲಿ ಭಾಗಿಯಾಗದ ಜಲೀಲ್‌ ಮಾತ್ರ ಪ್ರಾಣ ತೆತ್ತಿದ್ದಾರೆ.

ಪೌರತ್ವ ಹೋರಾಟ: ಸಿದ್ದು, ಡಿಕೆಶಿ, ಖಾದರ್, ಉಗ್ರಪ್ಪ, ಜಮೀರ್ ಏನಂದ್ರು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!