ಮಂಡ್ಯದ ಕ್ರೈಸ್ತ ಶಿಕ್ಷಣ ಸಂಸ್ಥೆಯೊಂದು 25 ಕೋಟಿ ರೂ. ಹಣಕ್ಕೆ ಆಸೆಪಟ್ಟು 1.10 ಕೋಟಿ ರೂ. ಹಣವನ್ನು ವಂಚಕನ ಕೈಗೆ ಕೊಟ್ಟು ಮೋಸ ಹೋಗಿದೆ.
ವರದಿ- ನಂದನ್, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಜ.23): ಮಂಗಳೂರಿನಿಂದ ಬಂದು ಮಂಡ್ಯ ಜಿಲ್ಲೆಯ ಶಿಂಷಾಪುರದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಶ್ಯಾಲೋಮ್ ಟ್ರಸ್ಟ್ ನಡೆಸುತ್ತಿದ್ದರು. ಈ ವೇಳೆ ಸ್ವಾಮೀಜಿಯಿಂದ ಪರಿಚಿತನಾದ ವ್ಯಕ್ತಿಯೊಬ್ಬ ನಿಮ್ಮ ಟ್ರಸ್ಟ್‌ಗೆ 25 ಕೋಟಿ ರೂ. ಹಣವನ್ನು ಕೊಡಿಸುತ್ತೇನೆ, ಆದರೆ ನೀವು ನಮಗೆ 1 ಕೋಟಿ ರೂ. ಕೊಡಬೇಕು ಎಂದು ಹೇಳಿತ್ತಾರೆ. ಅವರ ಮಾತಿನಂತೆ ಟ್ರಸ್ಟಿಗಳಿಂದ 1.10 ಕೋಟಿ ರೂ. ಕೊಡಲಾಗಿದ್ದು, ಅದನ್ನು ಪಡೆದು ಪರಾರಿ ಆಗಿದ್ದಾನೆ.'
ಹೌದು, ಮಂಗಳೂರಿನಿಂದ ಬಂದಿದ್ದ ಮೇರಿನ್ ಪಿಂಟೋ ಅವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾಪುರದಲ್ಲಿ ಶ್ಯಾಲೋಮ್ ಎಜುಕೇಷನ್ ಟ್ರಸ್ಟ್ ಅನ್ನು ಕಳೆದ ವರ್ಷ ಆರಂಭಿಸಿದ್ದರು. ಆದರೆ, ಈ ಶಕ್ಷಣ ಸಂಸ್ಥೆಗೆ ಆಗಮಿಸಿದ್ದ ಸ್ವಾಮೀಜಿಯೊಬ್ಬರು ತಮಗೆ ಪರಿಚಿತವಿರುವ ಸೂರ್ಯ ಎಂಬ ವ್ಯಕ್ತಿಯನ್ನು ಪರಿಚಯಿಸಿದ್ದರು. ನಿಮ್ಮ ಟ್ರಸ್ಟ್‌ಗೆ ಏನಾದರೂ ಸಹಾಯ ಅಗತ್ಯವಿದ್ದಲ್ಲಿ ಇವರು ನಿಮಗೆ ನೆರವಾಗುತ್ತಾರೆ ಎಂದು ತಿಳಿಸಿದ್ದರು. ಸ್ವಾಮೀಜಿ ಹೇಳಿದ ಮಾತನ್ನು ನಂಬಿ ಪರಿಚಿತವಾದ ವ್ಯಕ್ತಿಯಿಂದ ಸ್ಥಳೀಯವಾಗಿ ಸಣ್ಣಪುಟ್ಟ ಸಹಾಯವನ್ನು ಪಡೆದುಕೊಂಡಿದ್ದಾರೆ. ನಂತರ, ಶಿಕ್ಷಣ ಸಂಸ್ಥೆ ದೊಡ್ಡದಾಗಿ ನಿರ್ಮಾಣ ಮಾಡುವ ಬಗೆಗಿನ ಚಿಂತನೆಯನ್ನು ಸೂರ್ಯನ ಮುಂದಿಟ್ಟಿದ್ದಾರೆ.
ಮೇಲುಕೋಟೆ ಶಿಕ್ಷಕಿಯನ್ನು ಕೊಲೆಗೈದು ಮಣ್ಣಲ್ಲಿ ಮುಚ್ಚಿ ಹೋದನಾ ಮಂಡ್ಯ ಹೈದ?
ಇನ್ನು ಶಿಕ್ಷಣ ಸಂಸ್ಥೆಗೆ ಹಣ ಬೇಕಾಗಿರುವುದನ್ನು ತಿಳಿದ ಸೂರ್ಯ ವಂಚನೆಗೆ ಯೋಜನೆ ರೂಪಿಸಿದ್ದಾನೆ. ನಿಮಗೆ ನಾನು ದಾನಿಗಳಿಂದ 25 ಕೋಟಿ ರೂ. ಹಣವನ್ನು ಕೊಡಿಸುತ್ತೇನೆ. ಆದರೆ, ನೀವು 1 ಕೋಟಿ ರೂ. ಹಣವನ್ನು ಸಿದ್ಧಪಡಿಸಿಕೊಂಡು ನನಗೆ ತಿಳಿಸಿ ಎಂದು ಹೇಳಿದ್ದಾನೆ. ಇವರ ಮಾತನ್ನು ನಂಬಿದ ಟ್ರಸ್ಟ್‌ನ ಅಧ್ಯಕ್ಷೆ ಮೇರಿ ಹಾಗೂ ಇತರೆ ಸಿಬ್ಬಂದಿ ಹಣವನ್ನು ಹೊಂದಿಸಲು ಸಭೆ ಮಾಡಿ ತೀರ್ಮಾನಿಸಿದ್ದಾರೆ. ಅದರಂತೆ ಟ್ರಸ್ಟ್‌ನ ಸಿಬ್ಬಂದಿ, ಟ್ರಸ್ಟ್ ಖಾತೆಯಲ್ಲಿದ್ದ 15 ಲಕ್ಷ ರೂ. ಹಣ, ಬೆಂಗಳೂರು, ಮಂಗಳೂರು ಹಾಗೂ ಇತರೆಡೆಯ ಉದ್ಯಮಿಗಳಿಂದ ಟ್ರಸ್ಟ್‌ನ ಹೆಸರಿನಲ್ಲಿ ಸಾಲ ಪಡೆದುಕೊಂಡು 1.10 ಕೋಟಿ ರೂ. ಹಣವನ್ನು ಸಿದ್ಧಪಡಿಸಿದ್ದರು.
ಹಣ ಹೊಂದಾಣಿಕೆ ಮಾಡಿ ಎಲ್ಲವನ್ನೂ ನಗದೀಕರಣ ಮಾಡಿ ಮನೆಯಲ್ಲಿಟ್ಟಿರುವುದಾಗಿ ಟ್ರಸ್ಟ್‌ನ ಮಾಲೀಕರು ಸೂರ್ಯನಿಗೆ ತಿಳಿಸಿದ್ದಾರೆ. ಆಗ ಸಣ್ಣ ಕಾರ್ಯಕ್ರಮ ಮಾಡುವ ಮೂಲಕ ನಿಮಗೆ ಹಣ ಕೊಡುತ್ತೇನೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದಾನೆ. ನಾವು 25 ಜನರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದ ಸೂರ್ಯ, ಕೊನೆಗೆ ಅವರು ಬರುತ್ತಿಲ್ಲ. ನಾನೊಬ್ಬನೇ ಬಂದು ಹಣ ಕೊಡುತ್ತೇನೆ ಎಂದು ಹೇಳಿದ್ದಾನೆ.
ಜ.20ರಂದು ಟ್ರಸ್ಟಿ ಮನೆಗೆ ಹೋದ ಸೂರ್ಯ ಮೇರಿ ಅವರು ಸಿದ್ಧಪಡಿಸಿದ್ದ 1 ಕೋಟಿ ರೂ. ಹಣ ಎಲ್ಲಿದೆ ಎಂದು ಕೇಳಿದ್ದಾರೆ. ಆಗ ಅವರು ಹಣವನ್ನು ತೋರಿಸಿದ್ದಾರೆ. ಇನ್ನು ಸೂರ್ಯ ಕೂಡ ಕಾರಿನಲ್ಲಿ ತಂದಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ತಂದು ಇದರಲ್ಲಿ 25 ಕೋಟಿ ಹಣವಿದೆ ಎಂದು ಇಟ್ಟಿದ್ದಾರೆ. ಎಲ್ಲರೂ ಸೇರಿ ತಿಂಡಿ ಮಾಡಿದ್ದಾರೆ. ನಂತರ ಸೂರ್ಯ ಅವರು ತಾವು ತಂದಿದ್ದ ಜ್ಯೂಸ್ ಅನ್ನು ಅಲ್ಲಿದ್ದ ಎಲ್ಲರಿಗೂ ಕುಡಿಯಲು ಕೊಟ್ಟಿದ್ದಾರೆ. ಜ್ಯೂಸ್ ಕುಡಿದ ಎಲ್ಲರೂ ಮೂರ್ಚೆ ಹೋಗಿದ್ದಾರೆ. ಇನ್ನು ಮಧ್ಯಾಹ್ನ ಮೂರ್ಚೆ ಹೋದವರು ಸಂಜೆ 4 ಗಂಟೆಗೆ ಎಚ್ಚರಗೊಂಡಿದ್ದಾರೆ. ಆಗ ಪಕ್ಕದಲ್ಲಿದ್ದ ಸೂರ್ಯ ಹಾಗೂ ತಮ್ಮ ಹಣ ನಾಪತ್ತೆಯಾಗಿರುವ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ ಸೂರ್ಯ ತಂದಿಟ್ಟ ಚೀಲವನ್ನು ತೆರೆದು ನೋಡಿದಾಗ ಅದಲ್ಲಿ ನೋಟಿ ಅಳತೆಯ ಬಿಳಿ ಪೇಪರ್ ಬಂಡಲ್ ಇಟ್ಟು ಪರಾರಿ ಆಗಿದ್ದಾರೆ.
ಅರ್ಚಕರಿಂದ 10 ವರ್ಷದ ಸಂಬಳ ವಾಪಸ್ ಕೇಳಿದ ಸರ್ಕಾರ: ಎಲ್ಲರಿಗೂ ನೋಟಿಸ್ ಜಾರಿ
ಇನ್ನು ಘಟನೆಯ ಬಳಿಕ ತಾವು ಮೋಸ ಹೋಗಿರುವುದಾಗಿ ಎಚ್ಚೆತ್ತು ಸ್ಥಳೀಯ ಬೆಳಕವಾಡಿ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ. ಮಳವಳ್ಳಿ ಡಿವೈಎಸ್ಪಿ ಪಿ.ಕೃಷ್ಣಪ್ಪ ನೇತೃತ್ವದಲ್ಲಿ ಆರೋಪಿ ಪತ್ತೆಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.