Latest Videos

ಅಂದರ್‌-ಬಾಹರ್‌ ಜೂಜುಕೋರರಿಗೆ ಪ್ಲೇಯಿಂಗ್‌ ಕಾರ್ಡ್‌ ಚೀಟಿಂಗ್‌ ಡಿವೈಸ್‌ ಮಾರುತ್ತಿದ್ದವ ಸೆರೆ!

By Kannadaprabha NewsFirst Published Feb 21, 2022, 8:05 AM IST
Highlights

*ದೆಹಲಿಯಿಂದ ಡಿವೈಸ್‌ ಖರೀದಿಸಿ ದುಬಾರಿ ಬೆಲೆಗೆ ಮಾರಾಟ
*ಗುಪ್ತ ಸ್ಕ್ಯಾನರ್‌ನಿಂದ ಆಟಗಾರರಿಗೆ ಅನುಕೂಲ
*ಯಶವಂತಪುರ ಠಾಣೆ ಪೊಲೀಸರ ಬಲೆಗೆ ಬಿದ್ದ ಆಸಾಮಿ

ಬೆಂಗಳೂರು (ಫೆ. 21):  ಅಂದರ್‌-ಬಾಹರ್‌ ಇಸ್ಪಿಟ್‌ (Play Cards) ಜೂಜುಕೋರರಿಗೆ ಅತ್ಯಾಧುನಿಕ ‘ಪ್ಲೇಯಿಂಗ್‌ ಕಾರ್ಡ್‌ ಚೀಟಿಂಗ್‌ ಡಿವೈಸ್‌’ (Cheating Device) ಮಾರಾಟ ಮಾಡುತ್ತಿದ್ದ ಕತರ್ನಾಕ್‌ ವ್ಯಕ್ತಿ ಯಶವಂತಪುರ ಠಾಣೆ ಪೊಲೀಸರ (Yeshwanthpur Police) ಬಲೆಗೆ ಬಿದ್ದಿದ್ದಾನೆ. ಯಶವಂತಪುರದ ಫರ್ಜನ್‌ ಖಾನ್‌(25) ಬಂಧಿತ. ನಗರದ ಹಲವು ಕ್ಲಬ್‌ ಹಾಗೂ ಜೂಜು ಅಡ್ಡೆಗಳಲ್ಲಿ ಅಂದರ್‌-ಬಾಹರ್‌ ಜೂಜುಕೋರರಿಗೆ ಈ ಅತ್ಯಾಧುನಿಕ ಡಿವೈಸ್‌ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 

ಆರೋಪಿಯು ದೆಹಲಿಯಿಂದ .25 ಸಾವಿರಕ್ಕೆ ಈ ಪ್ಲೇಯಿಂಗ್‌ ಕಾರ್ಡ್‌ ಚೀಟಿಂಗ್‌ ಡಿವೈಸ್‌ ಖರೀದಿಸಿ ತರುತ್ತಿದ್ದ. ಬಳಿಕ ನಗರದಲ್ಲಿ ಗಿರಾಕಿಗಳನ್ನು ಹುಡುಕಿ .40 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಏನಿದು ಚೀಟಿಂಗ್‌ ಡಿವೈಸ್‌?:  ಇದೊಂದು ಅತ್ಯಾಧುನಿಕ ತಂತ್ರಜ್ಞಾನದ ಡಿವೈಸ್‌. ಮೊಬೈಲ್‌, ಕೀ ಬಂಚ್‌, ಲೈಟರ್‌, ವಾಚ್‌ ಹೀಗೆ ನಾನಾ ರೂಪದಲ್ಲಿ ಈ ಡಿವೈಸನ್ನು ಬಚ್ಚಿಟ್ಟಿಕೊಳ್ಳಬಹುದಾಗಿದೆ. ಈ ಡಿವೈಸ್‌ನಲ್ಲಿ ಗುಪ್ತ ಸ್ಕ್ಯಾನರ್ ಇರಲಿದೆ. ಅಂದರ್‌-ಬಾಹರ್‌ ಜೂಜಾಟಕ್ಕೆ ಬಳಸುವ 52 ಇಸ್ಪಿಟ್‌ ಕಾರ್ಡ್‌ಗಳಲ್ಲಿ ಬಾರ್‌ ಕೋಡ್‌ ಇರಲಿದೆ. 

ಇದನ್ನೂ ಓದಿ: Bengaluru Pistol Mafia: ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಪಿಸ್ತೂಲ್‌, 5 ಜೀವಂತ ಗುಂಡು ಜಪ್ತಿ: ಇಬ್ಬರ ಸೆರೆ!

ಆಟಕ್ಕೂ ಮುನ್ನ ಇಸ್ಪಿಟ್‌ ಕಾರ್ಡ್‌ ಕಲಕಿ ಕಟ್‌ ಮಾಡುವ ವೇಳೆ ಕೊನೆಯ ಕಾರ್ಡ್‌ ಸ್ಕ್ಯಾನ್ (Scan) ಆಗುತ್ತದೆ. ಉದಾಹರಣೆಗೆ ಇಬ್ಬರು ಅಂದರ್‌-ಬಾಹರ್‌ ಆಡುವಾಗ ಕಾರ್ಡ್‌ ಕಲಕಿ ಕಟ್‌ ಮಾಡಿದಾಗ ಕೊನೆಯ ಸಂಖ್ಯೆಯ ಕಾರ್ಡ್‌ ಯಾರಿಗೆ ಬೀಳಲಿದೆ ಎಂಬುದನ್ನು ಈ ಡಿವೈಸ್‌ ಸಂಖ್ಯೆಯಲ್ಲಿ ಸಿಗ್ನಲ್‌ ನೀಡುತ್ತದೆ. 

ಡಿವೈಸ್‌ನಲ್ಲಿ 1 ಬಂದರೆ ಅಂದರ್‌, 2 ಬಂದರೆ ಬಾಹರ್‌ ಎಂಬ ಸಿಗ್ನಲ್‌ (Signal) ಬರುತ್ತದೆ. ಈ ಚೀಟಿಂಗ್‌ ಡಿವೈಸ್‌ ಇರಿಸಿಕೊಂಡು ಆಡುವ ವ್ಯಕ್ತಿ ಈ ಸಿಗ್ನಿಲ್‌ ಆಧರಿಸಿ ಹಣ ಕಟ್ಟುತ್ತಾರೆ. ಒಂದು ವೇಳೆ ಎದುರಾಳಿ ಆಟಗಾರನಿಗೆ ಕೊನೆಯ ಸಂಖ್ಯೆ ಬೀಳುವ ಸುಳಿವು ಸಿಗುವುದರಿಂದ ಹುಷಾರಾಗಿ ಆಟ ಆಡಬಹುದಾಗಿದೆ.

ಅಂದರ್‌-ಬಾಹರ್‌ ಜೂಜಾಟಕ್ಕೆ ಬಳಸುವ ಇಸ್ಪಿಟ್‌ ಕಾರ್ಡ್‌ಗಳು ಕಾಲಕ್ರಮೇಣ ಸವೆಯುತ್ತವೆ. ಈ ವೇಳೆ ಕಾರ್ಡ್‌ಗಳಲ್ಲಿ ಗುಪ್ತವಾಗಿರುವ ಬಾರ್‌ಕೋಡ್‌ ಸಹ ಸವೆಯುತ್ತದೆ. ಇಂತಹ ಸಂದರ್ಭದಲ್ಲಿ ಜೂಜುಕೋರರು ಆ ಕಾರ್ಡ್‌ಗಳನ್ನು ತೆಗೆದು ಹೊಸ ಕಾರ್ಡ್‌ ಬಳಸುತ್ತಾರೆ. ಕಾರ್ಡ್‌ಗಳು ಬದಲಾದರೂ ಈ ಡಿವೈಸ್‌ ಬಾರ್‌ಕೋಡ್‌ ಇರುವ ಹೊಸ ಕಾರ್ಡ್‌ಗಳನ್ನು ಕ್ಷಣಮಾತ್ರದಲ್ಲಿ ಸ್ಕಾ್ಯನ್‌ ಮಾಡಲಿದೆ. ಹೀಗಾಗಿ ಜೂಜುಕೋರರು ಡಿವೈಸ್‌ ಜತೆಗೆ ಬಾರ್‌ ಕೋಡ್‌ ಇರುವ ಇಸ್ಪೀಟ್‌ ಕಾರ್ಡ್‌ಗಳನ್ನು ಖರೀದಿಸಿ ಇರಿಸಿಕೊಳ್ಳುತ್ತಾರೆ.

ವಂಚನೆಗೆ ಬಳಕೆ:  ಈ ಚೀಟಿಂಗ್‌ ಡಿವೈಸ್‌ ಬಗ್ಗೆ ಗೊತ್ತಿರುವ ಜೂಜುಕೋರರು (Gambler) ಕ್ಲಬ್‌ ಸೇರಿದಂತೆ ಜೂಜು ಅಡ್ಡೆಗಳಲ್ಲಿ ಇದನ್ನು ಬಳಸಿಕೊಂಡು ಎದುರಾಳಿ ಆಟಗಾರರನ್ನು ವಂಚಿಸಿ ಹಣ ಗೆಲ್ಲುತ್ತಾರೆ. ಆರೋಪಿ ಫರ್ಜನ್‌ ಖಾನ್‌ ಈ ವಂಚನೆ ಡಿವೈಸ್‌ ಬಗ್ಗೆ ಸ್ನೇಹಿತ ಬಾಬು ಎಂಬುವನಿಂದ ತಿಳಿದುಕೊಂಡಿದ್ದ. 

ದೆಹಲಿಯಲ್ಲಿ ಈ ಡಿವೈಸ್‌ ಸಿಗುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಬಳಿಕ ಈ ಡಿವೈಸ್‌ ಮಾರಾಟ ಮಾಡುವ ವ್ಯಕ್ತಿಯನ್ನು ಸಂಪರ್ಕಿಸಿ ಖರೀದಿಸಿ ತಂದು ನಗರದಲ್ಲಿ ಹಲವು ಜೂಜುಕೋರರಿಗೆ ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾನೆ. ಈವರೆಗೆ ಎಷ್ಟುಮಂದಿಗೆ ಆರೋಪಿಯು ಈ ವಂಚನೆ ಡಿವೈಸ್‌ ಮಾರಾಟ ಮಾಡಿದ್ದಾನೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!