
ಬೆಂಗಳೂರು: ಇದಾಗಲೇ ಬಂಗ್ಲಾದೇಶಿಗಳು ಅಕ್ರಮವಾಗಿ ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದಾರೆ. ಇವರನ್ನು ಗುರುತು ಹಿಡಿಯುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ, ಎಲ್ಲಾ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯ ಗುರುತಿನ ಚೀಟಿಯನ್ನು ಅವರಿಗೆ ಮಾಡಿಕೊಡುವ ಗ್ಯಾಂಗೇ ಇದೆ. ಇದಾಗಲೇ ವಿವಿಧ ರಾಜ್ಯಗಳಲ್ಲಿ ಇದಕ್ಕಾಗಿಯೇ SIR ಕೂಡ ಮಾಡಲಾಗುತ್ತಿದ್ದರೂ, ಅವರನ್ನು ಒಂದು ಹಂತದಲ್ಲಿ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವೇ ಆಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ, ವ್ಯಕ್ತಿಯೊಬ್ಬ ಇದೀಗ ಬೆಂಗಳೂರಿನ ಪೊಲೀಸರಿಗೆ ಚಾಲೆಂಜ್ ಹಾಕಿದ್ದಾನೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಆಗಿರುವ ಈ ಪ್ರಚೋದನಕಾರಿ ವಿಡಿಯೋದಲ್ಲಿ, ಆತ ಕನ್ನಡದಲ್ಲಿಯೇ 'ನಾನು 25 ಬಾಂಗ್ಲಾದೇಶಿಯರನ್ನು ಬೆಂಗಳೂರಿಗೆ ಕಳುಹಿಸಿದ್ದೇನೆ. ನಿಮ್ಮ ಕೈಯಲ್ಲಿ ಅವರನ್ನು ಹಿಡಿಯಲು ಆಗುವುದಿಲ್ಲ ಎಂದು ನನಗೆ ಗೊತ್ತು. ಏಕೆಂದ್ರೆ ಇಲ್ಲಿಯವರೆಗೆ ನೀವ್ಯಾರು ಅವರನ್ನು ಹಿಡಿಯಲಿಲ್ಲ ಎಂದಿದ್ದಾನೆ. ನಾನು ಇವರನ್ನು ಯಾವ ಕೆಲಸಕ್ಕೆ ಕಳುಹಿಸಿದ್ದೇನೆ ಗೊತ್ತಾ?, ನಾನು ಕೇವಲ ಪೊಲೀಸರನ್ನು ಮತ್ತು ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿದ್ದೇನೆ ಎಂದಿದ್ದಾನೆ.
ಈ ಬಾಂಗ್ಲಾದೇಶಿಗಳು ನಿಮ್ಮ ಮನೆಗೆ ನುಗ್ಗುತ್ತಾರೆ. ಮಾಡಬಾರದು ಮಾಡುತ್ತಾರೆ. ರಾಜಕಾರಣಿ ಮನೆಗೂ ಹೋಗಿ ಏನು ಮಾಡಬೇಕು ಎಂದು ಹೇಳಿದ್ದೇನೆ. ಅದನ್ನು ಅವರು ಮಾಡುತ್ತಾರೆ. ಅವರಿಗೆ ಐಡಿ ಕಾರ್ಡ್ ಇಲ್ಲ. ಅವರ ಅಡ್ರೆಸ್ ಇಲ್ಲ. ಎಲ್ಲವನ್ನೂ ಯೋಚನೆ ಮಾಡಿದ್ದೇನೆ. ನಿಮಗೆ ದಮ್ ಇದ್ದರೆ ಅವರನ್ನು ಕಂಡುಹಿಡಿಯಿರಿ ಎಂದಿರೋ ವ್ಯಕ್ತಿ, ನನ್ನ ಅಡ್ರೆಸ್ ಅನ್ನೂ ನಿಮಗೆ ಕೊಡ್ತೀನಿ. ನೆನಪಿರಲಿ ಬೆಂಗಳೂರು ಪೊಲೀಸರೇ ಎಂದು ಚಾಲೆಂಜ್ ಹಾಕಿದ್ದಾನೆ. ಇದರ ವಿಡಿಯೋ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಲೇ, ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಅಪರಾಧ ಪೊಲೀಸರು ಆ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಕಿಕ್ಕೇರಿಯ ಸಂತೋಷ್ ಕುಮಾರ್ ಎಂದು ಗುರುತಿಸಿದ್ದಾರೆ. ಕುಮಾರ್ ದುಬೈನ ಹೋಟೆಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಆತನನ್ನು ಸಂಪರ್ಕಿಸಿದ ಕೂಡಲೇ, ಕುಮಾರ್ ವಿಡಿಯೋ ಅಳಿಸಿಹಾಕಿ, ಪೊಲೀಸರಿಗೆ ಕ್ಷಮೆಯಾಚಿಸುವ ಮತ್ತೊಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ.
ಮೊದಲಿನ ವಿಡಿಯೋದಲ್ಲಿ, "ಕರ್ನಾಟಕ ಪೊಲೀಸರೇ, ನೀವು ಪುರುಷರಾಗಿದ್ದರೆ, ಇದನ್ನು ಹುಡುಕಿ...' ಎಂದಿದ್ದ ಈತ, ಕೊನೆಗೆ ಕ್ಷಮೆ ಕೋರಿ, ಬೆಂಗಳೂರಿಗೆ ಬಹಳಷ್ಟು ಬಾಂಗ್ಲಾದೇಶಿಗಳು ಬರುತ್ತಿರುವುದರಿಂದ ನನಗೆ ಅಸಮಾಧಾನವಾಯಿತು ಮತ್ತು ಅವರ ವಿರುದ್ಧ ಅಥವಾ ಅವರ ದೇಶಕ್ಕೆ ವಾಪಸ್ ಕಳುಹಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಆದ್ದರಿಂದ ನಾನು ತಪ್ಪು ರೀತಿಯಲ್ಲಿ ಮಾತನಾಡಿದ್ದೇನೆ ಎಂದಿದ್ದಾನೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈತನನ್ನು ಗಡೀಪಾರು ಮಾಡಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ