
ಬೆಂಗಳೂರು (ಜೂ.29): ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯ ಮೇರೆಗೆ ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಮಾಂಸಕ್ಕಾಗಿ ಜಿಂಕೆ ಹತ್ಯೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 2 ಕಾರು, ಬೈಕ್, 2 ಬಂದೂಕುಗಳನ್ನು ಜಪ್ತಿ ಮಾಡಿದ್ದಾರೆ. ವನ್ಯಜೀವಿ ಹಂತಕರ ತಂಡವೊಂದು ಕೋಲಾರ, ಬನ್ನೇರುಘಟ್ಟ ಅರಣ್ಯದಲ್ಲಿ ಜಿಂಕೆಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದೆ ಎಂದು ಸಚಿವರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದರು.
ಸಚಿವರ ಸೂಚನೆಯಂತೆ ಕಾರ್ಯಾಚರಣೆ ನಡಸಿದ ಬೆಂಗಳೂರು ನಗರ ಅರಣ್ಯ ವಿಭಾಗದ ಸಿಬ್ಬಂದಿ ಮತ್ತು ಜಾಗೃತದಳದ ಜಂಟಿ ತಂಡ ಬನ್ನೇರುಘಟ್ಟ-ನೈಸ್ ರಸ್ತೆ ಜಂಕ್ಷನ್ ಬಳಿ ಕೆ.ಎ 05 / ಎಜಿ 1302 ಸಂಖ್ಯೆಯ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿ 4 ಸತ್ತ ಚುಕ್ಕೆ ಜಿಂಕೆ ಮತ್ತು ಒಂದು ಮೃತ ಕಾಡು ಹಂದಿ ದೇಹ ಸಾಗಿಸಲಾಗುತ್ತಿದ್ದನ್ನು ಪತ್ತೆ ಮಾಡಿ, ಪ್ರತಾಪ್ (31) ಎಂಬಾತನನ್ನು ಬಂಧಿಸಿದರು.
ವಿಚಾರಣೆ ವೇಳೆ ಸಿ.ಕೆ.ಪಾಳ್ಯದ ಶೆಡ್ ನಲ್ಲಿ ಮತ್ತಷ್ಟು ಜಿಂಕೆಗಳ ಮೃತ ದೇಹ ಮತ್ತು ಮಾಂಸ ಇರುವ ವಿಷಯ ತಿಳಿದು, ಅಲ್ಲಿ ದಾಳಿ ಮಾಡಿ, ಬೈಕ್ ಮತ್ತು ಮತ್ತೊಂದು ಇಂಡಿಕಾ ಕಾರನ್ನೂ ವಶಪಡಿಕೊಂಡು ಒಟ್ಟು 9 ಜಿಂಕೆ ಹಾಗೂ ಒಂದು ಕಾಡು ಹಂದಿಯ ಸುಮಾರು 74 ಕೆಜಿ ಜಿಂಕೆ ಮಾಂಸ, 1 ಡಬಲ್ ಬ್ಯಾರೆಲ್ ಗನ್, 1 ಸಿಂಗಲ್ ಬ್ಯಾರೆಲ್ ಗನ್ ಮತ್ತು 10 ಕಾರ್ಟ್ರಿಡ್ಜ್ ಗಳನ್ನು ವಶಕ್ಕೆ ಪಡೆದರು.
ಜಿಂಕೆ ಮಾಂಸ ಇಟ್ಟಿದ್ದ ಶೆಡ್ ಮಾಲಿಕ ಭೀಮಪ್ಪ ಆರೋಪಿಗಳಾದ ಬಾಲರಾಜು ಹಾಗೂ ರಮೇಶ್ ಎಂಬುವವರು ನಾಪತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ವಹಿಸಿದ್ದರು.
ಸಚಿವರ ಅಭಿನಂದನೆ: ಮಾಹಿತಿ ದೊರೆತ ಕೂಡಲೇ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ಜಿಂಕೆ ಹಂತಕರ ಜಾಲ ಭೇದಿಸಿರುವ ಬೆಂಗಳೂರು ನಗರ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಭಿನಂದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ