
ಬೆಂಗಳೂರು (ಮೇ.12): ಅನೈತಿಕ ಸಂಬಂಧಕ್ಕೆ ಜನಿಸಿದ್ದ ಸುಮಾರು 15 ದಿನಗಳ ಹೆಣ್ಣು ಹಸುಗೂಸನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಏ.24ರಂದು ಮುಂಜಾನೆ ಎಂಟಿಟಿಸಿ ಕ್ವಾರ್ಟ್ರಸ್ ಬಳಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾದಲ್ಲಿ ಮಗು ಅಳುತ್ತಿರುವುದು ಕೇಳಿಸಿಕೊಂಡ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು ಆಟೋ ಬಳಿ ತೆರಳಿ ನೋಡಿದಾಗ ಸುಮಾರು 15 ದಿನಗಳ ಹಿಂದೆ ಜನಿಸಿದ ಹೆಣ್ಣು ಮಗು ಅಳುತ್ತಿರುವುದು ಕಂಡು ಬಂದಿದೆ.
ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಆ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಒಬ್ಬ ಪುರುಷ ಹಾಗೂ ಮಹಿಳೆ ಮಗುವನ್ನು ಎತ್ತಿಕೊಂಡು ಬಂದು ರಸ್ತೆಯ ಬದಿ ಆಟೋರಿಕ್ಷಾದಲ್ಲಿ ಮಲಗಿಸಿರುವುದು ಪತ್ತೆಯಾಗಿತ್ತು. ಬಳಿಕ ಇಬ್ಬರೂ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಪರಾರಿಯಾಗಿದ್ದರು. ಇದರ ಜಾಡು ಹಿಡಿದು ಹೊರಟ ಪೊಲೀಸರು ಆ ವ್ಯಕ್ತಿ ಹಾಗೂ ಮಹಿಳೆಯನ್ನು ವಿರಾಜಪೇಟೆಯಲ್ಲಿ ಪತ್ತೆಹಚ್ಚಿದ್ದಾರೆ.
ಮಗುವಿಗೆ ಸೀಳು ತುಟಿ: ವಿರಾಜಪೇಟೆಯ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆಯ ಅನೈತಿಕ ಸಂಬಂಧ ವಿಚಾರ ಬೆಳಕಿಗೆ ಬಂದಿದೆ. ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ ಅಪ್ಪಣ್ಣ, 30 ವರ್ಷದ ವಿಧವೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ. ವಿಧವೆಗೆ ಈಗಾಗಲೇ ಒಂದು ಮಗುವಿದೆ. ಅಪ್ಪಣ್ಣನ ಜತೆಗಿನ ಅನೈತಿಕ ಸಂಬಂಧಕ್ಕೆ ಈ ಹೆಣ್ಣು ಮಗು ಜನಿಸಿದೆ. ಆದರೆ, ಈ ಮಗುವಿಗೆ ಸೀಳು ತುಟಿ ಇದ್ದಿದ್ದರಿಂದ ಅಪ್ಪಣ್ಣ ಹಾಗೂ ಆ ಮಹಿಳೆಗೆ ಆ ಮಗು ಬೇಕಿರಲಿಲ್ಲ.
Bengaluru: ಬಿಬಿಎಂಪಿ ವ್ಯಾಪ್ತಿಯ 66 ಕೆರೆಗಳು ಸಂಪೂರ್ಣ ಖಾಲಿ
ಹೀಗಾಗಿ ಇಬ್ಬರೂ ವಿರಾಜಪೇಟೆಯಿಂದ ಬೆಂಗಳೂರಿಗೆ ಬಂದು ರಸ್ತೆ ಬದಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾದಲ್ಲಿ ಆ ಮಗುವನ್ನು ಮಲಗಿಸಿ ಪರಾರಿಯಾಗಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಅಪ್ಪಣ್ಣನನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು, ಆ ಮಹಿಳೆಗೆ ಎಚ್ಚರಿಕೆ ನೀಡಿ ಮಗುವನ್ನು ಆರೈಕೆ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ