
ಬೆಂಗಳೂರು : ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ಅಮೃತಹಳ್ಳಿ ಠಾಣೆ ಪೊಲೀಸರು, ‘ಥೈಲ್ಯಾಂಡ್ ಪ್ರವಾಸ’ಕ್ಕೆ ಕಳುಹಿಸಿ ಅಲ್ಲಿಂದ ಕಳ್ಳ ಹಾದಿಯಲ್ಲಿ ವಿಮಾನದ ಮೂಲಕ ಕೆಜಿಗಟ್ಟಲೇ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿಯನ್ನು ಸೆರೆ ಹಿಡಿದಿದ್ದಾರೆ.
ಯಲಹಂಕದ ಕೋಗಿಲು ಲೇಔಟ್ ನಿವಾಸಿ ಕುಶಾಲ್ ಗೌಡ, ರಾಜಾನುಕುಂಟೆಯ ಶಶಾಂಕ್, ಹೊರಮಾವಿನ ಸಾಗರ್, ದೊಡ್ಡಕಮ್ಮನಹಳ್ಳಿಯ ವಿಲ್ಸನ್, ಕೇರಳ ಮೂಲದ ಆಶಿರ್ ಆಲಿ, ರಿಯಾಸ್, ಸಜಾದ್, ಸಿ.ಶಿಹಾಬ್, ಅಬ್ದುಲ್ ನಾಸಿರ್ ಹಾಗೂ ಡಿ.ಅಭಿನವ್ ಬಂಧಿತರಾಗಿದ್ದು, ಆರೋಪಿಗಳಿಂದ 3 ಕೆಜಿ ಹೈಡ್ರೋ ಗಾಂಜಾ, 50 ಗ್ರಾಂ ಎಂಡಿಎಂಎ, 500 ಗ್ರಾ ಚರಸ್, 500 ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳು, 10 ಕೆಜಿ ಗಾಂಜಾ, 2 ಕಾರುಗಳು, 14 ಮೊಬೈಲ್‌ಗಳು ಹಾಗೂ 36 ಸಾವಿರ ರು. ನಗದು ಸೇರಿದಂತೆ 4 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಕೆಲವರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಜಕ್ಕೂರು ರೈಲ್ವೆ ಹಳಿ ಸಮೀಪ ನಾಲ್ವರು ಡ್ರಗ್ಸ್ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಮುರುಗೇಂದ್ರಯ್ಯ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಂ. ಅಂಬರೀಷ್ ಸಾರಥ್ಯದ ಸಬ್ ಇನ್ಸ್‌ಪೆಕ್ಟರ್ ಕೆ.ಎಲ್. ಪ್ರಭು ಅವರನ್ನೊಳಗೊಂಡ ತಂಡವು ದಾಳಿ ನಡೆಸಿ ಬಂಧಿಸಿತು. ಬಳಿಕ ಆರೋಪಿಗಳ ವಿಚಾರಣೆ ನಡೆಸಿದಾಗ ಥೈಲ್ಯಾಂಡ್ ಪ್ರವಾಸಿಗರ ಮೂಲಕ ಅಕ್ರಮವಾಗಿ ಹೈಡ್ರೋ ಗಾಂಜಾ ತಂದು ನಗರದಲ್ಲಿ ಮಾರಾಟದ ಜಾಲವು ಬಯಲಾಗಿದೆ. ಈ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಇನ್ನುಳಿದವರು ಸಹ ಬಲೆಗೆ ಬಿದ್ದಿದ್ದಾರೆ.
ಜನರಿಗೆ ವಿದೇಶ ಪ್ರವಾಸದ ಆಸೆ ತೋರಿಸಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಡ್ರಗ್ಸ್ ದಂಧೆಕೋರರು, ಬಳಿಕ ಥೈಲ್ಯಾಂಡ್ ಪ್ರವಾಸಕ್ಕೆ ಕಳುಹಿಸುತ್ತಿದ್ದರು. ಈ ಪ್ರವಾಸದ ಸಂಪೂರ್ಣ ಖರ್ಚು ವೆಚ್ಚ ಭರಿಸುತ್ತಿದ್ದ ದಂಧೆಕೋರರು, ಕೈ ಖರ್ಚಿಗೆ ಸಹ 30 ಸಾವಿರ ರು. ಹಾಗೂ ಪೂರ್ವನಿಗದಿಯಂತೆ ನಗರಕ್ಕೆ ಡ್ರಗ್ಸ್ ತಂದರೆ 2 ಲಕ್ಷ ರು. ನೀಡುತ್ತಿದ್ದರು. ಹಣ ಹಾಗೂ ಪುಕ್ಕಟ್ಟೆ ವಿದೇಶ ಪ್ರವಾಸದಾಸೆಗೆ ಕೆಲವರು ಡ್ರಗ್ಸ್ ಸಾಗಾಣಿಕೆಗೆ ಸಾಥ್ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ ವಿದೇಶದಿಂದ ಕಳ್ಳ ಹಾದಿಯಲ್ಲಿ ಡ್ರಗ್ಸ್ ಸಾಗಾಣಿಕೆಗೆ ಹೆಚ್ಚು ಡ್ರಗ್ಸ್ ವ್ಯಸನಿಗಳನ್ನೇ ಗುರಿಯಾಗಿಸಿಕೊಂಡು ದಂಧೆಕೋರರು ಬಳಸಿದ್ದಾರೆ. ಮೊದಲು ಡ್ರಗ್ಸ್ ರುಚಿ ತೋರಿಸಿ ಬಳಿಕ ಸಾಗಾಣಿಕೆ ವ್ಯಸನಿಗಳನ್ನು ಬಳಸಿದ್ದಾರೆ. ಆದರೆ ಈ ಜಾಲದಲ್ಲಿ ತೊಡಗಿದ್ದವರಿಗೆ ಪರಸ್ಪರ ಪರಿಚಯವಿರುತ್ತಿರಲಿಲ್ಲ. ಸಂವಹನ ಸಹ ಇರುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕೆಲಸ ಹಂಚಿಕೆ ಮಾಡಲಾಗಿತ್ತು. ತಮ್ಮ ಕೆಲಸ ಮುಗಿದ ಕೂಡಲೇ ಆತನ ಸಂಪರ್ಕ ಕಡಿತವಾಗುತ್ತಿತ್ತು. ಈ ಜಾಲವು ವ್ಯವಸ್ಥಿತವಾಗಿ ಸಂಘಟಿತ ತಂಡವಾಗಿ ಕಾರ್ಯನಿವಹಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಂತೆಯೇ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದವನಿಗೆ ಅಲ್ಲಿನ ಹೈಡ್ರೋ ಗಾಂಜಾವನ್ನು ಡ್ರಗ್ಸ್ ದಂಧೆಕೋರರು ಪೂರೈಸುತ್ತಿದ್ದ. ಆ ಗಾಂಜಾವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಪ್ರವಾಸಿಗ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದ ಕೂಡಲೇ ವಾಹನ ನಿಲುಗಡೆ ಪ್ರದೇಶದಲ್ಲಿ ತನ್ನನ್ನು ಭೇಟಿಯಾಗುತ್ತಿದ್ದವನಿಗೆ ತಲುಪಿಸಬೇಕಿತ್ತು. ಆನಂತರ ಆ ಗಾಂಜಾವು ಪೆಡ್ಲರ್‌ಗಳ ಮೂಲಕ ಗ್ರಾಹಕರಿಗೆ ಪೂರೈಕೆಯಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಜಾಲದ ‘ಮಾಸ್ಟರ್ ಮೈಂಡ್’ ವಿದೇಶದಲ್ಲಿ ನೆಲೆಸಿರುವ ಮಾಹಿತಿ ಇದೆ. ಆದರೆ ಕೇರಳ ಪೆಡ್ಲರ್‌ಗಳ ಮೂಲಕ ಆತ ಡ್ರಗ್ಸ್ ವಹಿವಾಟು ನಡೆಸಿದ್ದಾನೆ. ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಿಸಿದವನಿಗೆ ಹುಡುಕಾಟ ನಡೆದಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುತ್ತಿದೆ. ಇನ್ನುಳಿದ ಈ ಜಾಲದ ಪೆಡ್ಲರ್‌ಗಳು ಬಂಧಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಂಧಿತರ ಪೈಕಿ ಖಾಸಗಿ ಕಾನೂನು ಕಾಲೇಜಿನಲ್ಲಿ ದೆಹಲಿ ಮೂಲದ ಶಂಶಾಕ್ ಓದುತ್ತಿದ್ದರೆ, ಕುಶಾಲ್ ಗೌಡ ಏರೋನಾಟಿಕಲ್ ಎಂಜಿಯನಿರಿಂಗ್ ವಿದ್ಯಾರ್ಥಿ ಆಗಿದ್ದಾನೆ. ಕೇರಳದ ಅಭಿನವ್ ಸಾಫ್ಟ್‌ವೇರ್ ಎಂಜಿನಿಯರ್, ನಾಸಿರ್ ಔಷಧ ಮಾರಾಟಗಾರ, ಸಾಗರ್-ಬೌನ್ಸರ್, ಸಹಾದ್ -ಅಡುಗೆ ಭಟ್ಟ ಹಾಗೂ ಇನ್ನುಳಿದವರು ಚಾಲಕರಾಗಿದ್ದಾರೆ. ಈ ಆರೋಪಿಗಳಿಗೆ ಹಣದಾಸೆ ತೋರಿಸಿ ಜಾಲಕ್ಕೆ ಕೇರಳದ ವ್ಯಕ್ತಿ ಬಳಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೀರೆಗೆ ಬಣ್ಣ ಹಾಕುವ ಕೆಲಸ ಬಿಟ್ಟು ಹಣದಾಸೆಗೆ ಡ್ರಗ್ಸ್ ದಂಧೆಗಿಳಿದರು!
ತಲಘಟ್ಟಪುರ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ.
ಜ್ಞಾನಭಾರತಿಯ ರಾಘವೇಂದ್ರ ಹಾಗೂ ಬಿಟಿಎಂ ಲೇಔಟ್‌ನ ಧನುಷ್ ಬಂಧಿತರಾಗಿದ್ದು, ಆರೋಪಿಗಳಿಂದ 78.4 ಕೆಜಿ ಗಾಂಜಾ ಹಾಗೂ 2 ಮೊಬೈಲ್ ಜಪ್ತಿ ಮಾಡಲಾಗಿದೆ. ಬನಶಂಕರಿ 6ನೇ ಹಂತದ ಕರಿಯನಪಾಳ್ಯ ಬಳಿಕ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೀರೆಗಳಿಗೆ ಬಣ್ಣ ಹಾಕುವ ಕೆಲಸದಲ್ಲಿ ಮಂಡ್ಯ ಜಿಲ್ಲೆ ಬಸರಾಳು ಗ್ರಾಮದ ಧನುಷ್ ಹಾಗೂ ರಾಘವೇಂದ್ರ ತೊಡಗಿದ್ದರು. ಬಳಿಕ ಹಣದಾಸೆಗೆ ಬಿದ್ದು ಗಾಂಜಾ ಮಾರಾಟಕ್ಕಿಳಿದಿದ್ದ ಈ ಕಾರ್ಮಿಕರು ಈಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ