Chandrashekhar Death: ಚಂದ್ರಶೇಖರ್ ಅನುಮಾನಾಸ್ಪದ ಸಾವು: ಪೊಲೀಸರಿಂದ ಗೌರಿಗದ್ದೆ ವಿನಯ್ ಗುರೂಜಿ ವಿಚಾರಣೆ

By Suvarna News  |  First Published Nov 7, 2022, 2:55 PM IST

M P Renukacharya Nephew Death: ಪೊಲೀಸರು ವಿನಯ್ ಗುರೂಜಿ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದ್ದಾರೆ 


ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ನ. 07): ಶಾಸಕ ಹಾಗೂ ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ರೇಣುಕಾಚಾರ್ಯ (M P Renukacharya) ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ (Chandrashekhar Death) ಪ್ರಕರಣ ದಿನಕ್ಕೊಂದು ಹೊಸ ರೀತಿಯ ತಿರುವು ಪಡೆಯುತ್ತಿದ್ದು, ಆತ ಕೊನೆಯ ಬಾರಿ ಭೇಟಿ ನೀಡಿದ್ದು ವಿನಯ್ ಗುರೂಜಿ (Vinay Guruji)ಗೌರಿಗದ್ದೆ ಆಶ್ರಮಕ್ಕೆ ,ಈ ಹಿನ್ನಲೆಯಲ್ಲಿ ಪೊಲೀಸರು ಆಶ್ರಮಕ್ಕೆ ಭೇಟಿ ನೀಡಿ ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ಕಾಲುವೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸದ್ಯ ಪೊಲೀಸರು ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Latest Videos

undefined

ವಿನಯ್ ಗುರೂಜಿಯಿಂದ  ಮಾಹಿತಿ ಪಡೆದ ತನಿಖಾಧಿಕಾರಿಗಳು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ (Koppa Taluku) ಗೌರಿಗದ್ದೆ ಆಶ್ರಮಕ್ಕೆ ಚನ್ನಗಿರಿಯ ಸಿಪಿಐ ನೇತೃತ್ವದ ತನಿಖಾಧಿಕಾರಿಗಳ ತಂಡ  ಭೇಟಿ ನೀಡಿ ವಿನಯ್ ಗುರೂಜಿ ಅವರ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೂ ಮುನ್ನ ಮೃತ ಚಂದ್ರಶೇಖರ್ ಹಾಗೂ ಆತನ ಸ್ನೇಹಿತ ಕಿರಣ್ ಆಶ್ರಮಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಚಂದ್ರಶೇಖರ್​ ಭೇಟಿ ಬಗ್ಗೆ ಪೊಲೀಸರು ಗುರೂಜಿ ಬಳಿ ಹಲವು ಮಾಹಿತಿ ಸಂಗ್ರಹಿಸಿದ್ದಾರೆ. 

ಚಂದ್ರಶೇಖರ್​ ಆಶ್ರಮದ ಭಕ್ತ, ಪ್ರತಿ ಬಾರಿಯಂತೆ ಆಶ್ರಮಕ್ಕೆ ಬಂದಿದ್ದ. ತಡವಾಗಿ ಆಶ್ರಮಕ್ಕೆ ಬಂದಿದ್ದರಿಂದ ಆತನ ಜೊತೆ ಹೆಚ್ಚೇನು ಮಾತನಾಡಲಿಲ್ಲ. ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ? ಎಂದು ಕೇಳಿದ್ದೆ. ಜಾಗೃತೆಯಿಂದ ಮನೆಗೆ ಹೋಗುವಂತೆ ಇಬ್ಬರಿಗೂ ಹೇಳಿ ಕಳಿಸಿದ್ದೆ. ಘಟನೆ ಬಗ್ಗೆ ನನಗೂ ನೋವಿದೆ ಎಂಬುದಾಗಿ ವಿನಯ್ ಗುರೂಜಿ ತನಿಖೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಆಶ್ರಮದ ಸಿಬ್ಬಂದಿಗಳಿಂದಲೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿಕಾರ್‌ ಓವರ್‌ ಸ್ಪೀಡ್‌ನಲ್ಲಿತ್ತು ಅಂತಾ ಹೇಳ್ದೋರ್‌ ಯಾರು?: ರೇಣುಕಾಚಾರ್ಯ ಪ್ರಶ್ನೆ

ಗುರೂಜಿ ಭೇಟಿ ಮಾಡಿದ್ದ ಚಂದ್ರಶೇಖರ್: ತನ್ನ ಸ್ನೇಹಿತ ಕಿರಣ್​ನೊಂದಿಗೆ ಚಂದ್ರಶೇಖರ್ 30-10-2022ರ ಭಾನುವಾರ ರಾತ್ರಿ 9.45 ಕ್ಕೆ ಗೌರಿಗದ್ದೆ ಆಶ್ರಮಕ್ಕೆ ಬಂದು ವಿನಯ್ ಗುರೂಜಿ ಆರ್ಶೀವಾದ ಪಡೆದಿದ್ದಾರೆ. ರಾತ್ರಿ 10 ಗಂಟೆಗೆ ಕೊಪ್ಪ ಬಸ್ ನಿಲ್ದಾಣದಿಂದ ಕಾರಿನಲ್ಲಿ ವಾಪಸ್​​ ಆಗಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಗುರೂಜಿಯಿಂದ ಜಾಗ್ರತೆ ಎನ್ನುವ ಆರ್ಶೀವಾದವನ್ನು ಚಂದ್ರಶೇಖರ್ ಪಡೆದಿದ್ದರು. ಈ ಬಗ್ಗೆ ಆಶ್ರಮದ ಸಿಬ್ಬಂದಿ ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿಐಪಿ ಎಂದು ಪರಿಗಣಿಸಲ್ಲ ಸಾಮಾನ್ಯರಂತೆ ಚಂದ್ರು ಸಹ ಬಂದಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದರು. 

ಒಟ್ಟಾರೆ ಈ ಪ್ರಕರಣದ ತನಿಖೆಯನ್ನು ಪೊಲೀಸರು ಹಲವಾರು ಆಯಾಮಗಳಲ್ಲಿ  ತನಿಖೆ ನಡೆಯುತ್ತಿದ್ದು ಪೊಲೀಸರು ಈ ಸಂಬಂಧ ಎಲ್ಲಾ ಮೂಲಗಳಿಂದ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. ಇನ್ನು ಇದೇ ಒಂಬತ್ತರಂದು ಶಾಸಕ ರೇಣುಕಾಚಾರ್ಯ ಮನೆಗೆ ಸಿ.ಎಂ ಬಸವರಾಜ್ ಬೊಮ್ಮಾಯಿ ಆಗಮಿಸಿ ಸಾಂತ್ವನ ಹೇಳಲಿದ್ದಾರೆ. ಇನ್ನು ಚಂದ್ರು ಶವ ಪರೀಕ್ಷೆ ವರದಿ ಇಂದು ಪೊಲೀಸರ ಕೈ ಸೇರುವ ನಿರೀಕ್ಷೆ ಇದೆ. 

click me!