ಘಟನೆ ಸಂಬಂಧ ಮೃತಳ ಪ್ರಿಯಕರ ಮಂಗಳೂರು ಮೂಲದ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಪೊಲೀಸರು.
ಬೆಂಗಳೂರು(ಮಾ.14): ಪ್ರಿಯಕರ ವಾಸವಿದ್ದ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಗನಸಖಿಯೊಬ್ಬರು ಮೃತಪಟ್ಟಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧೀಮನ್ (28) ಮೃತ ಗಗನಸಖಿ. ಕೋರಮಂಗಲದ 8ನೇ ಬ್ಲಾಕ್‌ನ ರೇಣುಕಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಮೃತಳ ಪ್ರಿಯಕರ ಮಂಗಳೂರು ಮೂಲದ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಯ್‌ಫ್ರೆಂಡ್ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್, ರೂಮ್‌ಅಲ್ಲಿ ಆಗಿದ್ದೇನು?
ಮೃತ ಅರ್ಚನಾ ಅಂತಾರಾಷ್ಟ್ರೀಯ ವಿಮಾನಯಾನ ಕಂಪನಿಯಲ್ಲಿ ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಪ್ರಿಯಕರ ಸಾಫ್ಟ್‌ವೇರ್ ಎಂಜಿನಿಯರ್ ಆದೇಶ್ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರು ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ವೊಂದರಲ್ಲಿ ಅರ್ಚನಾ ಮತ್ತು ಆದೇಶ್ ಪರಸ್ಪರ ಪರಿಚಿತರಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಸಲು ಆರಂಭಿಸಿದ್ದರು. ಕೆಲ ವಿಚಾರಗಳಲ್ಲಿ ಇಬ್ಬರು ನಡುವೆ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಕಾರ್ಯ ನಿಮಿತ್ತ ದುಬೈನಲ್ಲಿದ್ದ ಅರ್ಚನಾ ನಾಲ್ಕು ದಿನದ ಹಿಂದೆ ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಈ ನಾಲ್ಕು ದಿನ ಇಬ್ಬರು ಒಟ್ಟಿಗೆ ಇದ್ದರು. ಶುಕ್ರವಾರ ಸಂಜೆ ಕೋರಮಂಗಲದ ಫೋರಂ ಮಾಲ್‌ನಲ್ಲಿ ಸಿನಿಮಾಕ್ಕೆ ತೆರಳಿದ್ದರು. ರಾತ್ರಿ ಸಿನಿಮಾ ನೋಡಿಕೊಂಡು ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ವಾಗ್ವಾದವಾಗಿದೆ. ಮಧ್ಯರಾತ್ರಿ 12 ಗಂಟೆಗೆ ಅರ್ಚನಾ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾರೆ.
ಯಾವ ವಿಚಾರಕ್ಕೆ ಆದೇಶ್ ಮತ್ತು ಅರ್ಚನಾ ನಡುವೆ ಜಗಳ ನಡೆದಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಜಗಳದ ವೇಳೆ ಅರ್ಚನಾ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಪ್ರಿಯಕರ ಆದೇಶ್ ಜಗಳ ವೇಳೆ ಕೋಪಗೊಂಡು ಮಹಡಿ ನೂಕಿ ಕೊಲೆ ಮಾಡಿದನಾ ಎಂಬುದು ಮುಂದಿನ ತನಿಖೆಯಿಂದ ಗೊತ್ತಾಗಬೇಕಿದೆ. ಮೃತ ಅರ್ಚನಾ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಬಂದ ಬಳಿಕ ದೂರು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.