
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಫೆ.10): ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪವರ್ ಕೊಟ್ಟ ನಂತರ ಇದೇ ಮೊದಲ ಬಾರಿಗೆ ಲೋಕಾಯುಕ್ತ ಅಧಿಕಾರಿಗಳು ಮೈ ಕೊಡವಿ ನಿಂತಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ದಾಳಿ ನಡೆಸಿದ ಲೋಕಾಯುಕ್ತರು ಬಿಡಿಎಗೆ ಬಿಸಿ ಮುಟ್ಟಿಸಿದ್ದಾರೆ. ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪವರ್ ಬಂದ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ದಾಳಿಯನ್ನ ಲೋಕಾಯುಕ್ತ ಅಧಿಕಾರಿಗಳು ಕೈಗೊಂಡಿದ್ದಾರೆ. ಮೊದಲ ದಾಳಿಯಲ್ಲೆ ಬಿಡಿಎ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಬಿಡಿಎನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಅವ್ಯವಹಾರಗಳ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳು ಕುಮಾರ ಪಾರ್ಕ್ ಬಳಿಯ ಬಿಡಿಎ ಕೇಂದ್ರ ಕಚೇರಿಗೆ ಲಗ್ಗೆ ಇಟ್ಟಿದ್ರು. ಸುಮಾರು 35 ಅಧಿಕಾರಿಗಳ ಆರು ತಂಡಗಳು ದಾಳಿ ನಡೆಸಿ ಟೌನ್ ಪ್ಲಾನಿಂಗ್, ಅಲಾಟ್ಮೆಂಟ್ ಸೆಕ್ಷನ್ ಮತ್ತು ಪರಿಹಾರ ವಿತರಣೆ ಸೆಕ್ಷನ್ ಗಳಲ್ಲಿ ಕಂಡು ಬಂದ ಅಕ್ರಮ ಅವ್ಯವಹಾರಗಳ ಬಗ್ಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕೊಡಗಿಗೆ ಬರಲು ಹೆದರಿದ್ರಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!
ಬಿಡಿಎ ಮೇಲೆ ದಾಳಿ ನಡೆಯುತ್ತಿದ್ದಂತೆ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಬಿಡಿಎ ಕಚೇರಿಗೆ ದೌಡಾಯಿಸಿ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, ಎಸ್ ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಮೂರು ಸೆಕ್ಷನ್ ಗಳ ದಾಖಲೆ ಮತ್ತು ಕಡತಗಳನ್ನ ಕೂಲಂಕುಷವಾಗಿ ಕ್ರಾಸ್ ಚೆಕ್ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ್ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಈಗಾಗಲೇ ದಾಖಲೆಗಳ ಪರಿಶೀಲನೆ ನಡೆಸಿ, ನಂತರ ಮಾಹಿತಿ ನೀಡಲಾಗುವುದು ಎಂದರು.
ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದು ಬಂತು. ಬಿಡಿಎ ಆವರಣದಲ್ಲಿದ್ದ ನೂರಾರು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳನ್ನ ಖುದ್ದು ಭೇಟಿಯಾಗಿ ತಮ್ಮ ಸಂಕಷ್ಟಗಳ ಬಗ್ಗೆ ವಿವರಣೆ ನೀಡಿದರು. ಸಾರ್ವಜನಿಕರ ದೂರುಗಳು ಹೆಚ್ಚಾಗುತ್ತಿದ್ದಂತೆ, ಅಹವಾಲು ಆಲಿಸಲು ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಿದರು. ಸಾರ್ವಜನಿಕರ ಬಳಿ ಆಗಮಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಮತ್ತು ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಜನರ ಅಹವಾಲು ಪಡೆದರು.
4 ವರ್ಷ ಕಳೆದರೂ ಸಿಗದ ನೆರೆ ಪರಿಹಾರ: ತಾಲೂಕು ಕಚೇರಿಯಲ್ಲಿ ವಿಷ ಕುಡಿಯಲು ಮುಂದಾದ ನೆರೆ ನಿರಾಶ್ರಿತರು
ಇನ್ನೂ ಲೋಕಾಯುಕ್ತ ದಾಳಿ ವೇಳೆ ಬಿಡಿಎ ಆವರಣದಲ್ಲಿ ಕೆಲವು ಬ್ರೋಕರ್ ಗಳ ಓಡಾಟ ಕೂಡ ಕಂಡು ಬಂದಿದೆ. ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಬ್ರೋಕರ್ ಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದಲ್ಲದೆ 2022 ರಲ್ಲಿ ಎಸಿಬಿ ಅಧಿಕಾರಿಗಳು ಕೂಡ ಬಿಡಿಎ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನ ವಶಪಡಿಸಿಕೊಂಡಿದ್ದರು. ಇದರ ತನಿಖೆ ಸಹ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿ ಇರುವಾಗಲೇ ಈಗ ಮತ್ತೆ ಲೋಕಾಯುಕ್ತರು ದಾಳಿ ನಡೆಸಿ ಬಿಗ್ ಶಾಕ್ ಕೊಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ