
ಬೆಂಗಳೂರು(ಜು.27): ಜಾಗತಿಕ ಮಟ್ಟದ ಅತ್ಯುಗ್ರ ಭಯೋತ್ಪಾದಕ ಸಂಘಟನೆ ಅಲ್‌ಖೈದಾಕ್ಕೆ ದೇಶದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನೇಮಕಾತಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ), ಈಗ ಸಿಸಿಬಿ ಸೆರೆ ಹಿಡಿದಿರುವ ಇಬ್ಬರು ಶಂಕಿತ ಅಲ್‌ಖೈದಾ ಉಗ್ರರ ಬಂಧನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ಅಲ್‌ಖೈದಾ ಸಂಘಟನೆ ಸೇರ್ಪಡೆಗೆ ಅಪ್ಘಾನಿಸ್ತಾನಕ್ಕೆ ತೆರಳಲು ಸಜ್ಜಾಗಿದ್ದರು ಎಂಬ ಮಾಹಿತಿ ಮೇರೆಗೆ ಬೆಂಗಳೂರಿನ ತಿಲಕನಗರ ಸಮೀಪ ನೆಲೆಸಿದ್ದ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಹಾಗೂ ತಮಿಳುನಾಡಿನ ಸೇಲಂನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ಮಂಡಲ್ ಅಲಿಯಾಸ್ ಜುಬಾನನ್ನು ಕಾರ್ಯಾಚರಣೆ ನಡೆಸಿ ಸಿಸಿಬಿ ಸೋಮವಾರ ಬಂಧಿಸಿತ್ತು. ಈ ಇಬ್ಬರು ಶಂಕಿತ ಉಗ್ರರ ಬಂಧನ ಸಂಬಂಧ ತನಿಖೆ ವಿಚಾರವಾಗಿ ಎನ್‌ಐಎಗೆ ಮಂಗಳವಾರ ಬೆಂಗಳೂರು ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಪತ್ರ ಬರೆದಿದ್ದಾರೆ.
ಈ ಶಂಕಿತ ಉಗ್ರ ಸಂಬಂಧ ಇದುವರೆಗೆ ಸಿಸಿಬಿ ನಡೆಸಿರುವ ತನಿಖೆಯನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿರುವ ಆಯುಕ್ತರು, ಶಂಕಿತರಿಗೆ ಸಂಪರ್ಕ ಜಾಲವು ಹೊರ ರಾಜ್ಯಗಳಲ್ಲಿ ಕೂಡ ವಿಸ್ತರಿಸಿರುವ ಮಾಹಿತಿ ಇದೆ. ಹೀಗಾಗಿ ಈ ಬಗ್ಗೆ ವಿಸ್ತಾರವಾದ ತನಿಖೆ ನಡೆಯುವುದು ಅಗತ್ಯವಿದೆ ಎಂದು ಎನ್‌ಐಎಗೆ ಹೇಳಿದ್ದಾರೆ. ಈ ಪತ್ರದ ಆಧರಿಸಿ ಎನ್‌ಐಎ, ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳುವ ಸಾಧ್ಯತೆಗಳಿದ್ದು, ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬೀಳಬಹುದು ಎಂದು ತಿಳಿದು ಬಂದಿದೆ.
ಬೆಂಗಳೂರು ಶಂಕಿತ ಉಗ್ರರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ರಾಷ್ಟ್ರದ ಭದ್ರತೆಗೆ ಆತಂಕ ತಂದೊಡ್ಡುವ ಭಯೋತ್ಪಾದಕ ಕೃತ್ಯಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ದಾಖಲಾಗುವ ಪ್ರಕರಣದ ಕುರಿತು ಎನ್‌ಐಎಗೆ ಮಾಹಿತಿ ನೀಡಬೇಕಾಗಿದೆ. ಅಂತೆಯೇ ಈಗಿನ ಶಂಕಿತ ಉಗ್ರರ ಬಂಧನ ಸಂಗತಿಯನ್ನು ಎನ್‌ಐಎ ಗಮನಕ್ಕೆ ಪತ್ರ ಮುಖೇನ ತರಲಾಗಿದೆ. ಮುಂದಿನ ತನಿಖೆ ಬಗ್ಗೆ ಎನ್‌ಐಎ ನಿರ್ಧರಿಸಲಿದೆ. ಅದುವರೆಗೆ ಸಿಸಿಬಿ ತನಿಖೆ ಮುಂದುವರೆಸಲಿದೆ. ಈಗಾಗಲೇ ಶಂಕಿತ ಉಗ್ರರ ಕುರಿತು ಸಾಕಷ್ಟುಮಾಹಿತಿಯನ್ನು ಕಲೆ ಹಾಕಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಉಗ್ರರ ಮಾಹಿತಿ ಕೋರಿದ ತನಿಖಾ ಸಂಸ್ಥೆಗಳು
ಸಿಸಿಬಿ ಬಂಧಿಸಿರುವ ಇಬ್ಬರು ಶಂಕಿತ ಉಗ್ರರ ಬಗ್ಗೆ ಎನ್‌ಐಎ, ಕೇಂದ್ರ ಗುಪ್ತದಳ (ಐಬಿ), ತೆಲಂಗಾಣ ರಾಜ್ಯದ ಹೈದ್ರಾಬಾದ್ ಪೊಲೀಸರ ಅಕ್ಟೋಪಸ್ ತಂಡ ಹಾಗೂ ರಾಜ್ಯ ಆಂತರಿಕ ಭದ್ರತಾ (ಐಎಸ್‌ಡಿ) ಸೇರಿದಂತೆ ಇತರೆ ತನಿಖಾ ಸಂಸ್ಥೆಗಳು ಮಾಹಿತಿ ಪಡೆದಿವೆ.
ಆಡುಗೋಡಿಯಲ್ಲಿರುವ ಸಿಸಿಬಿ ವಿಚಾರಣಾ ಕೇಂದ್ರದಲ್ಲಿ ಶಂಕಿತ ಉಗ್ರರನ್ನು ವಿಚಾರಣೆ ನಡೆಸಿ ಪ್ರಾಥಮಿಕ ಹಂತದ ಹೇಳಿಕೆಯನ್ನು ಎನ್‌ಐಎ ಹಾಗೂ ಐಬಿ ಅಧಿಕಾರಿಗಳು ಮಂಗಳವಾರ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ