ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ: ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

By Suvarna News  |  First Published Aug 5, 2022, 6:03 PM IST

Belagavi News: ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಸಾವು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಆ. 05): ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಸಾವು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿ ಖನಗಾವಿ ಕೆ.ಹೆಚ್. ಗ್ರಾಮದಲ್ಲಿ  ನಡೆದಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಇಂದು (ಶುಕ್ರವಾರ) ಚಿರತೆ ದಾಳಿ ಮಾಡಿತ್ತು‌. ಕಟ್ಟಡ ಕಾರ್ಮಿಕನ ಬೆನ್ನಿಗೆ ಪರಚಿದ ಗಾಯ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಚಿರತೆ ದಾಳಿಯಿಂದ ಸಿದರಾಯಿ ಮಿರಜಕರ್‌ಗೆ ಸಣ್ಣಪುಟ್ಟ ಗಾಯ ಆಗಿತ್ತು. 

Tap to resize

Latest Videos

ಮಗ ಸಿದರಾಯಿ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಶಾಂತಾ ಅವರಿಗೆ ಹೃದಯಾಘಾತವಾಗಿದೆ. ಹೃದಯಾಘಾತದಿಂದ ಶಾಂತಾ ಮಿರಜಕರ್(65) ಸಾವನಪ್ಪಿದ್ದಾರೆ. ಖನಗಾವಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  

ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ:  ಇಂದು ಮಧ್ಯಾಹ್ನ 12.25ರ ಸುಮಾರಿಗೆ ಜಾಧವ್ ನಗರದ ಮನೆಯೊಂದರ ಕಾಂಪೌಂಡ್‌ನಿಂದ ಹಾರಿ ಬಂದ ಚಿರತೆ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಖನಗಾವಿ ಕೆ.ಹೆಚ್‌. ಗ್ರಾಮದ ನಿವಾಸಿ 38 ವರ್ಷದ ಸಿದರಾಯಿ ಲಕ್ಷ್ಮಣ ಮಿರಜಕರ್ ಮೇಲೆ ದಾಳಿ ಮಾಡಿದೆ. 

ಸಿದರಾಯಿ ಭುಜಕ್ಕೆ ಪರಚಿ ಮತ್ತೋರ್ವ ಕಾರ್ಮಿಕನ ಬೆನ್ನಟ್ಟಿದೆ. ಆತ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ಪಕ್ಕದಲ್ಲೇ ಇದ್ದ  ಪೊದೆಯಲ್ಲಿ ಅವಿತುಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಚಿಕ್ಕಬಳ್ಳಾಪುರ: ಚಿರತೆ ಕಾಟದಿಂದ ಬೇಸತ್ತ ರೈತರು, ಆತಂಕದಲ್ಲಿ ಜನತೆ

ಜಾಧವ ನಗರ ನಿವಾಸಿ ಯಶೋಧನ್ ಜಾಧವ್ ಎಂಬುವರ ಮನೆಯ ಸಿಸಿ ಕ್ಯಾಮರಾದಲ್ಲಿ ಚಿರತೆಯ ಚಲನವಲನಗಳು ಪತ್ತೆಯಾಗಿದ್ದು ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಇನ್ನು ಚಿರತೆ ದಾಳಿಯಿಂದ ಗಾಯಗೊಂಡಿದ್ದ ಕಾರ್ಮಿಕ ಸಿದರಾಯಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕಟ್ಟಡ ಕಾರ್ಮಿಕ ಸಿದರಾಯಿ, ನಾವು ಎಂಟತ್ತು ಜನ ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿದ್ದೆವು. ಪೋಸ್ಟ್ ಮ್ಯಾನ್ ಬಂದಿದ್ರು. ಅವರು ಪಕ್ಕದ ಮನೆಯೊಳಗೆ ಓಡಿ ಹೋದರು. ಬಳಿಕ ಚಿರತೆ ನನ್ನ ಮೇಲೆ ದಾಳಿ ಮಾಡಿತು. ಈ ವೇಳೆ ಭುಜಕ್ಕೆ ಪರಿಚಿದ ಗಾಯ ಆಯ್ತು. ಮತ್ತೋರ್ವ ಕಾರ್ಮಿಕನ ಬೆನ್ನಟ್ಟಿದಾಗ ಆತ ತಪ್ಪಿಸಿಕೊಂಡ ಬಳಿಕ ಚಿರತೆ ಪೊದೆಯೊಳಗೆ ಹೋಯಿತು' ಅಂತಾ ತಿಳಿಸಿದ್ದಾರೆ.

ಮನೆಯಿಂದ ಮಕ್ಕಳನ್ನು ಹೊರಬಿಡಬೇಡಿ: ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಎಪಿಎಂಸಿ ಠಾಣೆ ಪೊಲೀಸರು, ಅಗ್ನಿಶಾಮಕ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಆಗಮಿಸಿ ಚಿರತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಎಪಿಎಂಸಿ ಠಾಣೆ ಪೊಲೀಸರು ಚಿರತೆ ಸಿಗುವವರೆಗೂ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. 

ಚಿರತೆ ಪ್ರತ್ಯಕ್ಷವಾದ ಸ್ಥಳದ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ 'ಚಿರತೆ ಪ್ರತ್ಯಕ್ಷ ಆಗಿದೆ ಅಂತಾ ಸ್ಥಳೀಯರು ತಿಳಿಸಿದ್ದಾರೆ. 

ಚಿರತೆ ದಾಳಿಗೆ ಬಲಿಯಾದ ಕರು ಪತ್ತೆ ಹಚ್ಚಿದ ತಾಯಿ ಹಸು!

ಅದು ಸೆರೆ ಸಿಗುವವರೆಗೂ ಯಾರು ಮನೆಯಿಂದ ಹೊರಬರಬೇಡಿ. ವಿಶೇಷವಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಮಕ್ಕಳನ್ನು ಹೊರಬಿಡಬೇಡಿ. ಜನಸಂದಣಿ ನಿಯಂತ್ರಿಸಲು ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ' ಎಂದು ತಿಳಿಸಿದ್ದಾರೆ‌.

ಚಿರತೆ ಅನ್ನೋದು ಕನ್ಫರ್ಮ್ ಆಗಿಲ್ಲ: ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಎಫ್ಐ ರಾಕೇಶ ಅರ್ಜುನವಾಡ, 'ಕಾರ್ಮಿಕನ ಮೇಲೆ ದಾಳಿ ಮಾಡಿದ್ದು ನೋಡಿದ್ರೆ ಅದು ಚಿರತೆ ಅಂತಾ ಅನಿಸಲ್ಲ. ಆದರೆ ಸಿಸಿ ಕ್ಯಾಮರಾದಲ್ಲಿ ನೋಡಿದ್ರೆ ಸೈಜ್ ದೊಡ್ಡದಿದೆ. ಚಿರತೆ ಹಾಗೂ ಕಾಡು ಬೆಕ್ಕಿಗೆ ಗಾತ್ರದಲ್ಲಿ ಮಾತ್ರ ವ್ಯತ್ಯಾಸ ಇರುತ್ತೆ. 

ಉಳಿದಿದ್ದೆಲ್ಲ ಸೇಮ್ ಇರುತ್ತೆ. ಆದ್ರೆ ಕಾರ್ಮಿಕನ ಮೇಲೆ ದಾಳಿ ಮಾಡಿದ್ದು ಚಿರತೆ ಅನ್ನೋದು ಕನ್ಫರ್ಮ್ ಆಗಿಲ್ಲ.‌ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸ್ಪಷ್ಟವಾಗಿಲ್ಲ.ಜನಸಂದಣಿ ನಿಯಂತ್ರಿಸಲು ಪೊಲೀಸರಿಗೆ ಮನವಿ ಮಾಡಿದ್ದೇವೆ. ಜನರು ಹೊರಗೆ ಬರದಂತೆ ನಾವು ಮನವಿ ಮಾಡ್ತಿದ್ದೇವೆ. ಚಿರತೆ ಸೆರೆಗೆ ಗದಗದಿಂದ ತಜ್ಞ ಸಿಬ್ಬಂದಿಯನ್ನು ಕರೆಸುತ್ತಿದ್ದೇವೆ. ಚಿರತೆ ಹೆಜ್ಜೆ ಗುರುತು ಕಂಡು ಬಂದಿಲ್ಲ' ಎಂದು ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೂರು ಅಡಿ ಎತ್ತರದ ಚಿರತೆ ಇತ್ತು ಅಂತಾ ಹೇಳುತ್ತಿದ್ದಾರೆ. ಇತ್ತ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ಆಧರಿಸಿ ಅರಣ್ಯ, ಪೊಲೀಸ್, ಅಗ್ನಿಶಾಮಕ, ಎಸ್‌ಡಿಆರ್‌ಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ʼ

ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ ಪ್ರಾಣಿ ಚಿರತೆಯೋ ಅಥವಾ ಕಾಡು ಬೆಕ್ಕು ಎಂಬುದು ಸೆರೆ ಹಿಡಿದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ ಜಾಧವ್ ನಗರ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ.

click me!