ನಟಿ ಸಂಜನಾ ಗಲ್ರಾನಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಇದೀಗ ದೂರು ದಾಖಲು ಮಾಡಲಾಗಿದೆ
ಬೆಂಗಳೂರು (ಡಿ.14): ನಟಿ ಸಂಜನಾ ಗಲ್ರಾನಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ವಕೀಲ ಎನ್.ಪಿ.ಅಮೃತೇಶ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾಟನ್ ಪೇಟೆ ಪೊಲೀಸ್ ಠಾಣೆ, ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ನೀಡಿದ್ದಾರೆ.
ನಟಿ ಸಂಜನಾ ಗಲ್ರಾನಿ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲುಮ್ ಶಾ ವಲಿಯುಲ್ಲಾ ಮಸೀದಿಯ ಮೌಲ್ವಿ ವಿರುದ್ಧ ದೂರು ನೀಡಲಾಗಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ದೂರು ಬಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.
ಜೈಲಿನಿಂದ ಹೊರ ಬಂದ ಸಂಜನಾ ಯಾರಿಗೂ ಸಿಗದೆ ರೆಸಾರ್ಟ್‌ಗೆ ಹೋಗಿದ್ಯಾಕೆ?
ವಕೀಲ ಅಮೃತೇಶ್ ನೀಡಿರುವ ದೂರಿನಲ್ಲಿ, ‘ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂಜನಾ ಗಲ್ರಾನಿ ಮೂಲ ಹೆಸರು ಅರ್ಚನಾ ಮನೋಹರ್ ಗಲ್ರಾನಿ. ಈ ಮಧ್ಯೆ 2018ರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ‘ಮಹಿರಾ’ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಆಕೆ ಕೂಡ ಎಲ್ಲಿಯೂ ಹೇಳಿಕೊಂಡಿಲ್ಲ. ಹೀಗಾಗಿ ಸಂಜನಾ ಗಲ್ರಾನಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಈ ಮಧ್ಯೆ ವೈದ್ಯ ಅಜೀಜ್ ಪಾಷಾ ಅವರನ್ನು ಮದುವೆಯಾಗಿದ್ದಾರೆ ಎಂದು ಅಮೃತೇಶ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ದೂರು ಬಂದರೆ ಪರಿಶೀಲನೆ ನಡೆಸಲಾಗುವುದು’ ಎಂದು ಅಧಿಕಾರಿ ತಿಳಿಸಿದ್ದಾರೆ.