
ಬೆಂಗಳೂರು(ಡಿ.14): ಬಾಲಿವುಡ್ ನಟ ಬೊಮ್ಮನ್ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿಗಳಾದ ಮೇರಿ ಅಲಿಸ್ ಹಾಗೂ ಈಕೆಯ ಪುತ್ರ ಮೈಕೆಲ್ ವಿನ್ಸೆಂಟ್ ಬಂಧಿತರು. ಅಬ್ಬಾಸ್ ಅಲಿ ರಸ್ತೆಯಲ್ಲಿರುವ ಎಂಬೆಸ್ಸಿ ಕ್ರೌನ್ ಅಪಾರ್ಟ್‌ಮೆಂಟ್ ನಿವಾಸಿಯೂ ಆದ ಬಾಲಿವುಡ್ ನಟ ಬೊಮನ್ ಇರಾನಿ ಸೋದರ ಸಂಬಂಧಿ ಖುರ್ಷೀದ್ ಇರಾನಿ ಅವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಖುರ್ಷೀದ್ ಇರಾನಿ ಅವರು ಅವರ ಕುಟುಂಬ ಅಬ್ಬಾಸ್ ಅಲಿ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ನೆಲೆಸಿದೆ. ಕಳೆದ 28 ವರ್ಷಗಳಿಂದ ಬಂಧಿತೆ ಮೇರಿ ಖುರ್ಷಿದ್ ಅವರ ಮನೆ ಕೆಲಸ ಮಾಡಿಕೊಂಡಿದ್ದಳು. ಹಲವು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೇರಿ ಮನೆಯವರು ನಂಬಿಕೆಗಳಿಸಿದ್ದ ಕಾರಣ, ಆಕೆ ಮನೆಯಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು.
ಐಷಾರಾಮಿ ಜೀವನಕ್ಕೆ ಅಡ್ಡದಾರಿ ಹಿಡಿದ ಚಾಲಾಕಿ ಮಹಿಳೆ
ಖುರ್ಷೀದ್ ಅವರು ಮನೆಯ ಲಾಕರ್‌ನಲ್ಲಿ 100 ಗ್ರಾಂ ತೂಕದ ಒಂಬತ್ತು ಚಿನ್ನದ ಬಿಸ್ಕೆಟ್, .85 ಲಕ್ಷ ನಗದು ಹಾಗೂ .11 ಲಕ್ಷ ಮೌಲ್ಯದ 15 ಸಾವಿರ ಯುಎಸ್ ಕರೆನ್ಸಿಗಳನ್ನು ಇಟ್ಟಿದ್ದರು. ನ.29ರಂದು ಲಾಕರ್ ನೋಡಿದಾಗ ಚಿನ್ನದ ಬಿಸ್ಕೆಟ್, ನಗದು ಹಾಗೂ ವಿದೇಶಿ ಕರೆನ್ಸಿ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಖುರ್ಷೀದ್ ಅವರು ಮನೆ ಕೆಲಸ ಮಾಡುತ್ತಿದ್ದ ಮೇರಿ ಮೇಲೆ ನೇರವಾಗಿ ಆರೋಪ ಹೊರಿಸಿ ಹಲಸೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ವೆಂಕಟಾಚಲಪತಿ ನೇತೃತ್ವದ ತಂಡ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಳು. ಈಕೆ ಕೊಟ್ಟಮಾಹಿತಿ ಮೇರೆಗೆ ಆಕೆಯ ಪುತ್ರನನ್ನು ಬಂಧಿಸಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದ
ಮೈಕೆಲ್ ವಿನ್ಸೆಂಟ್ ಪಿಯುಸಿ ವ್ಯಾಸಂಗ ಮಾಡಿದ್ದು, ಅನಿಮೇಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೋಜಿನ ಜೀವನಕ್ಕೆ ಒಳಗಾಗಿದ್ದ ವಿನ್ಸೆಂಟ್ ಐಪಿಎಲ್ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರುಪಾಯಿ ಹಣ ಕಳೆದುಕೊಂಡು ಸಾಲ ಮಾಡಿದ್ದ. ಈ ಸಾಲ ತೀರಿಸಲು ತಾಯಿ ಮೇಲೆ ಒತ್ತಡ ಹೇರಿದ್ದ ಎನ್ನಲಾಗಿದೆ. ಸ್ವತಃ ತಾಯಿಯೇ ಕೆಲಸಕ್ಕಿದ್ದ ಮನೆಯಲ್ಲಿ ಕಳ್ಳತನ ಮಾಡಿ ಚಿನ್ನದ ಬಿಸ್ಕೆಟ್ ಹಾಗೂ ಹಣವನ್ನು ಪುತ್ರನಿಗೆ ನೀಡಿದ್ದರು. ವಿನ್ಸೆಂಟ್ ಚಿನ್ನದ ಬಿಸ್ಕೆಟನ್ನು ಕೆಲ ಮಳಿಗೆಯಲ್ಲಿ ಮಾರಾಟ ಮಾಡಿದ್ದ. ಕಳ್ಳತನ ಮಾಡಿದ್ದ ಹಣ ಜಪ್ತಿ ಮಾಡಬೇಕಿದೆ ಎಂದು ಪೂರ್ವ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ