ಗುತ್ತಿಗೆದಾರನಿಗೆ ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಮುನಿರತ್ನ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು (ಸೆ.17): ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಅವ್ಯಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿರುವುದು ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ಮಾಡಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ಆದೇಶಿಸಿದೆ.
ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಮುನಿರತ್ನ ಅವರನ್ನು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯದ ಮುಂದೆ ವೈಯಾಲಿಕಾವಲ್ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಪ್ರಕರಣದ ತನಿಖೆಗಾಗಿ ಮುನಿರತ್ನ ಅವರನ್ನು ಮತ್ತೆ ಪೊಲೀಸರು ವಶಕ್ಕೆ ಕೋರಿದ್ದರು. ಆದರೆ, ಮುನಿರತ್ನ ಪರ ವಕೀಲರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿ, ಜಾಮೀನು ಅರ್ಜಿ ಕುರಿತು ವಾದ ಮಂಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಜಾಮೀನು ಅರ್ಜಿ ವಿಚಾರಣೆ ನಾಲೆಗೆ ಮುಂದೂಡಿಕೆ ಮಾಡಿದ ನ್ಯಾಯಾಲಯ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
undefined
ಮುನಿರತ್ನ ಬಂಧನದ ಹಿಂದೆ ಡಿಕೆಶಿ, ಡಿಕೆಸು ಕೈವಾಡ: ರಮೇಶ ಜಾರಕಿಹೊಳಿ
ಕುರುಕ್ಷೇತ್ರದ ಧುರ್ಯೋಧನನಾಯ್ತು; ಇದೀಗ ನಿರ್ಮಾಪಕನೂ ಜೈಲು: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿ ಕುರುಕ್ಷೇತ್ರದ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಈ ಕುರುಕ್ಷೇತ್ರದಲ್ಲಿ ನಟ ದರ್ಶನ್ ತೂಗುದೀಪ ಧುರ್ಯೋಧನನ ಪಾತ್ರ ಮಾಡಿದ್ದರು. ಇದಾದ ನಂತರ ಅವರಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಲೇ ಬಂದಿತ್ತು. ಕಳೆದ ಮೂರು ತಿಂಗಳ ಹಿಂದೆಯೇ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಪಾಲಾಗಿದ್ದಾರೆ. ಇದೀಗ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕ ಮುನಿರತ್ನ ಅವರು ಶಾಸಕರಾಗಿದ್ದರೂ, ತಮ್ಮ ಅಧಿಕಾರ ದರ್ಪದಿಂದ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡುತ್ತಾ ಜೀವ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಮೂರು ದಿನ ಪೊಲೀಸ್ ಕಸ್ಟಡಿ ಮುಗಿದಿದ್ದು, ಪುನಃ ಕೋರ್ಟ್ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯದ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಈ ಮೂಲಕ ಕುರುಕ್ಷೇತ್ರ ಸಿನಿಮಾ ನಟ ಸೇರಿದ ಜೈಲಿಗೆ ಇದೀಗ ನಿರ್ಮಾಪಕರೂ ಹೋಗುತ್ತಿದ್ದಾರೆ.