ಕೊಡಗು: ಗುಂಡು ಹಾರಿಸಿ ನಿರ್ವಾಹಕನಿಗೆ ಕೊಲೆ ಬೆದರಿಕೆ, ಕೆಎಸ್ಆರ್‌ಟಿಸಿ ಚಾಲಕ ಅರೆಸ್ಟ್‌

By Girish Goudar  |  First Published Dec 10, 2024, 9:20 PM IST

ರೂಪೇಶ ಕುಮಾರ್ ಮೇಲಿನ ಸಿಟ್ಟಿಗೆ ಗಾಳಿಯಲ್ಲಿ ಶೂಟ್ ಮಾಡಿದ್ದಾನೆ. ಹೀಗಾಗಿ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ತನಿಖೆ ನಡೆಸಿ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಕೊಡಗು ಎಸ್ಪಿ ಕೆ. ರಾಮರಾಜನ್ ವೇಣುಗೋಪಾಲ್ 


ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಡಿ.10):  ತಾನು ನಿತ್ಯ ಬಸ್‌ ಚಲಾಯಿಸುತ್ತಿದ್ದ ಮಾರ್ಗವನ್ನು ಬದಲಾಯಿಸಿ ಬೇರೆ ಮಾರ್ಗಕ್ಕೆ ಕರ್ತವ್ಯಕ್ಕೆ ಹಾಕಿರುವುದಕ್ಕೆ ತನ್ನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ನಿರ್ವಾಹಕನೇ ಕಾರಣ ಎಂದು ನಿರ್ವಾಹಕನ ಮೇಲಿನ ಸೇಡಿಗೆ ಸಾರ್ವಜನಿಕ ಸ್ಥಳದಲ್ಲಿಯೇ ಗಾಳಿಯಲ್ಲಿ ಗುಂಡು ಹಾರಿಸಿ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಚಾಲಕನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. 

Tap to resize

Latest Videos

ವೇಣುಗೋಪಾಲ್ ಬಂಧಿತ ಆರೋಪಿ ಚಾಲಕ. ಕೆಎಸ್ಆರ್‌ಟಿಸಿ ಮಡಿಕೇರಿ ಘಟಕದಲ್ಲಿ ಚಾಲಕನಾಗಿರುವ ವೇಣುಗೋಪಾಲ್ ಮಡಿಕೇರಿಯಿಂದ ವಿರಾಜಪೇಟೆ, ಪೊನ್ನಂಪೇಟೆ ಮಾರ್ಗವಾಗಿ ಬಿರುನಾಣಿಗೆ ಬಸ್‌ ಚಾಲನೆ ಮಾಡುತ್ತಿದ್ದ. ಈತನೊಂದಿಗೆ ರೂಪೇಶ ಕುಮಾರ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಚಾಲಕ ವೇಣುಗೋಪಾಲ್ ಯಾವಾಗಲೂ ಒಂದು ಕೈಯಲ್ಲಿ ಮೊಬೈಲ್ ಬಳಕೆ ಮಾಡುತ್ತಲೇ ಬಸ್‌ ಚಾಲನೆ ಮಾಡುತ್ತಿದ್ದರು. 

ಕೊಡಗು: ಆಂಧ್ರದ ಮಾವುತರಿಗೆ ತರಬೇತಿ ನೀಡಿದ ದುಬಾರೆ ಸಾಕಾನೆಗಳು!

ಇದನ್ನು ಬಸ್ಸಿನ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಘಟಕ ಮ್ಯಾನೇಜರ್ ಅವರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಬಿರುನಾಣಿ ಮಾರ್ಗದಿಂದ ಬದಲಾಯಿಸಿ ಬೇರೆ ಮಾರ್ಗಕ್ಕೆ ಕರ್ತವ್ಯಕ್ಕೆ ಹಾಕಲಾಗಿತ್ತು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದಿದ್ದ ವೇಣುಗೋಪಾಲ್ ನನ್ನನ್ನು ಮಾರ್ಗ ಬದಲಾವಣೆ ಮಾಡುವುದಕ್ಕೆ ನಿರ್ವಾಹಕ ರೂಪೇಶ ಕುಮಾರನೇ ಕಾರಣ ಎಂದು ಸೋಮವಾರ ಸಂಜೆ ಘಟಕಕ್ಕೆ ಬಂದು ತನಗೆ ಜಮ್ಮಾ ಹಕ್ಕಿನಿಂದ ಬಂದಿರುವ ಕೋವಿಯನ್ನು ತಂದು ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಗಲಾಟೆ ಮಾಡುತ್ತಾ ಬಸ್‌ ಘಟಕದಿಂದ ಹೊರಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಕೊಲೆ ಬೆದರಿಕೆ ಹಾಕಿದ್ದನು. ಇದರಿಂದ ಭಯಗೊಂಡ ನಿರ್ವಾಹಕ ರೂಪೇಶ ಕುಮಾರ್ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು ಚಾಲಕ ವೇಣುಗೋಪಾಲನನ್ನು ಬಂಧಿಸಿದ್ದಾರೆ. ಶೂಟ್ ಮಾಡಿದ್ದ ಜಾಗಕ್ಕೆ ಇಂದು(ಮಂಗಳವಾರ) ಚಾಲಕ ವೇಣುಗೋಪಾಲನನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ. ಶೂಟ್ ಮಾಡಿದ್ದ ಸ್ಥಳದಲ್ಲಿ ಕೋವಿಯ ಕಾಟ್ರೇಜ್ ದೊರೆತ್ತಿದ್ದು ಅದನ್ನು ವಶಕ್ಕೆ ಪಡೆದಿದ್ದಾರೆ. 

ಈ ಕುರಿತು ಮಾತನಾಡಿದ ದೂರುದಾರ ನಿರ್ವಾಹಕ ರೂಪೇಶ ಕುಮಾರ್ ಈ ಹಿಂದೆಯೂ ಖಾಸಗಿ ಬಸ್‌ ಚಾಲಕರೊಂದಿಗೆ ಗಲಾಟೆ ಮಾಡಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಚಾಲಕ ವೇಣುಗೋಪಾಲ್‌ನನ್ನು ಪುತ್ತೂರು ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. 

ಸಹೋದ್ಯೋಗಿಗೆ ಜಾತಿನಿಂದನೆ ಮಾಡಿದ ಇಬ್ಬರು ಯುವತಿಯರು! ದೂರು ಕೊಟ್ಟರೂ ಕ್ರಮ ಇಲ್ಲ!

ಆದಾದ ಮೇಲೆ ನನ್ನೊಂದಿಗೆ ಮಡಿಕೇರಿಯಿಂದ ಬಿರುನಾಣಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಹಲವು ಬಾರಿ ಹಲವೆಡೆ ಚಿಕ್ಕಪುಟ್ಟ ಅಪಘಾತಗಳನ್ನು ಎಸಗಿದ್ದರು. ಇದರಿಂದ ಸಾರ್ವಜನಿಕರು ಇವರ ವಿರುದ್ಧ ಘಟಕಕ್ಕೆ ದೂರು ನೀಡಿದ್ದರು. ಆದರೆ ಇದನ್ನೆಲ್ಲಾ ನಾನೇ ಮಾಡಿದ್ದೇನೆ ಎಂದು ನನ್ನ ಮೇಲೆ ಶೂಟ್ ಮಾಡಲು ಯತ್ನಿಸಿದ್ದಾರೆ. ಅದರ ಭಾಗವಾಗಿಯೇ ಸಾರ್ವಜನಿಕ ಸ್ಥಳದಲ್ಲಿಯೇ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ದೂರು ನೀಡಿದ್ದೇನೆ ಎಂದಿದ್ದಾರೆ. 

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕೊಡಗು ಎಸ್ಪಿ ಕೆ. ರಾಮರಾಜನ್ ವೇಣುಗೋಪಾಲ್ ಅವರು, ರೂಪೇಶ ಕುಮಾರ್ ಮೇಲಿನ ಸಿಟ್ಟಿಗೆ ಗಾಳಿಯಲ್ಲಿ ಶೂಟ್ ಮಾಡಿದ್ದಾನೆ. ಹೀಗಾಗಿ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ತನಿಖೆ ನಡೆಸಿ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

click me!