ಮೈಸೂರಿನಿಂದ ವಿರಾಜಪೇಟೆಗೆ ತೆರಳುತ್ತಿದ್ದ KSRTC ಬಸ್ ದೇವರಪುರದ ಬಳಿ ಅಪಘಾತಕ್ಕೀಡಾಗಿದೆ. 17 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗೋಣಿಕೊಪ್ಪ ಮತ್ತು ವಿರಾಜಪೇಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡಿ ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಕೊಡಗು (ಡಿ.9): ಮೈಸೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ KSRTC ಬಸ್ ಅಪಘಾತಕ್ಕೀಡಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ದೇವರಪುರದ ಬಳಿ ನಡೆದಿದೆ.
ಇಂದು ರಾತ್ರಿ 8.30ರ ಸುಮಾರಿಗೆ ನಡೆದಿರುವ ದುರ್ಘಟನೆ. ಘಟನೆಯಲ್ಲಿ ಬಸ್ ಚಾಲಕ ಸೇರಿ 17 ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳಿಗೆ ಗೋಣಿಕೊಪ್ಪ, ವಿರಾಜಪೇಟೆ ಸೇರಿದಂತೆ ಅಕ್ಕಪಕ್ಕದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮರಕ್ಕೆ ಡಿಕ್ಕಿ ಹೊಡೆದಿರುವ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಗುಂಡಿ ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ:
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮೈಸೂರಿನಿಂದ ವಿರಾಜಪೇಟೆಗೆ ತೆರಳುತ್ತಿತ್ತು. ತಿತಿಮತಿ ಸಮೀಪದ ದೇವರಪುರ ದಲ್ಲಿ ಬರುತ್ತಿರುವಾಗ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ಸು ಚಾಲಕ ನಿರ್ಲಕ್ಷ್ಯದಿಂದಲೇ ಅಪಘಾತವಾಗಿದೆ. ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಆ ಬಳಿಕ ಉರುಳಿ ಬಿದ್ದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನು ಬಸ್ಸು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಸ್ಟೈರಿಂಗ್ ಮತ್ತು ಸೀಟಿನ ನಡುವೆ ಕಾಲು ಮುರಿತಕ್ಕೆ ಒಳಗಾಗಿ ಚಾಲಕ ಸಿಲುಕಿಕೊಂಡಿದ್ದ. ಬಳಿಕ ಸ್ಥಳೀಯರು ಆತನನ್ನು ಹೊರತೆಗೆದು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.