ಕೆಎಂಎಫ್‌ನಲ್ಲಿ ನಕಲಿ ಉದ್ಯೋಗ ಆಮಿಷ: ಕೋಟಿ ರು. ಮೊತ್ತ ವಂಚಿಸಿದ ವಂಚಕ ಸೆರೆ

By Suvarna News  |  First Published Aug 21, 2022, 3:30 PM IST

ಸಹಕಾರಿ ಸ್ವಾಮ್ಯದ ಕೆಎಂಎಫ್‌ ಡೇರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ 1.84 ಕೋಟಿ ರು.ಗೂ ಅಧಿಕ ಮೊತ್ತ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.


ಮಂಗಳೂರು (ಆ.21): ಸಹಕಾರಿ ಸ್ವಾಮ್ಯದ ಕೆಎಂಎಫ್‌ ಡೇರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ 1.84 ಕೋಟಿ ರು.ಗೂ ಅಧಿಕ ಮೊತ್ತ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಟ್ವಾಳ ಸಾಲೆತ್ತೂರಿನ ರಾಮಪ್ರಸಾದ್‌ ರಾವ್‌ (37)ಎಂಬಾತ ಬಂಧಿತ ಆರೋಪಿ. ಈತ ರಾಮಪ್ರಸಾದ್‌ ರಾವ್‌ ಎಂದಲ್ಲದೆ ಹರೀಶ್‌, ಕೇಶವ ಮತ್ತು ಶಶಿಧರ ಎಂಬ ಹೆಸರಿನಲ್ಲಿಯೂ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫರಂಗಿಪೇಟೆ ವಳಚ್ಚಿಲ್‌ ಪದವಿನ ದೇವಿಪ್ರಸಾದ್‌ ಎಂಬವರು ಪಿಯುಸಿ ವಿದ್ಯಾಭ್ಯಾಸ ಮಾಡಿ ಉದ್ಯೋಗ ಸಿಗದೆ ಮನೆಯಲ್ಲೇ ಇದ್ದರು. ಆ ಸಂದರ್ಭ ಅವರ ಸ್ನೇಹಿತ ಪ್ರೀತೇಶ್‌ ಕುಮಾರ್‌ ಎಂಬವರು ಕೆಎಂಎಫ್‌ ಡೇರಿಯಲ್ಲಿ ಉದ್ಯೋಗವಿದ್ದು ಗುಟ್ಟಾಗಿ ಹಣ ನೀಡಿದರೆ ಉದ್ಯೋಗ ದೊರೆಯುತ್ತದೆ. ಪಡೀಲ್‌ ನಿವಾಸಿ, ಕೆಎಂಎಫ್‌ ಉದ್ಯೋಗಿ ಚಂದ್ರಾವತಿ ಮೂಲಕ ಹಣ ನೀಡಬೇಕು ಎಂದು ತಿಳಿಸಿದ್ದ. ಇದನ್ನು ನಂಬಿದ ದೇವಿಪ್ರಸಾದ್‌ ಅವರು ಚಂದ್ರಾವತಿಯನ್ನು ಸಂಪರ್ಕಿಸಿದ್ದರು. ಆಗ ಚಂದ್ರಾವತಿ ಉದ್ಯೋಗ ನೀಡಲು 1.80 ಲ.ರು. ನೀಡಬೇಕು. ಅದರಲ್ಲಿ 80,000 ರು. ತುರ್ತಾಗಿ ನೀಡಬೇಕು ಎಂದಿದ್ದಳು. ಅದರಂತೆ ದೇವಿಪ್ರಸಾದ್‌ ಅವರು ಚಂದ್ರಾವತಿಗೆ ಹಣ ಪಾವತಿಸಿದ್ದರು. ಅದಕ್ಕೆ ಪ್ರತಿಯಾಗಿ ಚಂದ್ರಾವತಿ ಅವರು ದೇವಿಪ್ರಸಾದ್‌ ಅವರಿಗೆ ಕ್ಲರ್ಕ್ ನೇಮಕದ ನಕಲಿ ನೇಮಕಾತಿ ಆದೇಶ ಪತ್ರ ನೀಡಿದ್ದಳು.

ನಕಲಿ ವಿಸಿಟಿಂಗ್‌ ಕಾರ್ಡ್‌: 2021 ಡಿ.15ರಂದು ರಾಮಪ್ರಸಾದ್‌ ರಾವ್‌ ಎಂಬಾತ ಮಂಗಳೂರಿನ ಚಿಲಿಂಬಿಯ ಹಾಲ್‌ವೊಂದರಲ್ಲಿ ಸುಮಾರು 38 ಮಂದಿಗೆ ‘ಕೆಎಂಎಫ್‌ ತರಬೇತಿ’ ಆಯೋಜಿಸಿದ್ದ. ರಾಮ್‌ಪ್ರಸಾದ್‌, ಮೂಡಿಗೆರೆಯ ಡಾ.ಹೇಮಂತ್‌, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್‌ ಎಂಬವರು ತರಬೇತಿ ನೀಡಿದ್ದರು. ತರಬೇತಿಯಲ್ಲಿ ದೇವಿಪ್ರಸಾದ್‌ ಹಾಗೂ ಇತರ 37 ಮಂದಿ ಪಾಲ್ಗೊಂಡಿದ್ದರು. ತಮಗೆ ಉದ್ಯೋಗ ದೊರೆಯಿತು ಎಂಬ ಭರವಸೆ ಅವರಲ್ಲಿ ಮೂಡಿತ್ತು. ರಾಮ್‌ಪ್ರಸಾದ್‌ ತಾನು ‘ಕೆಎಂಎಫ್‌ನ ಡೈರೆಕ್ಟರ್‌ ಹರೀಶ್‌ ಕೆ.’ ಎಂಬುದಾಗಿ ಪರಿಚಯಿಸಿಕೊಂಡು ವಿಸಿಟಿಂಗ್‌ ಕಾರ್ಡ್‌ ನೀಡಿದ್ದ.

Tap to resize

Latest Videos

ಬಹುಮಂದಿಗೆ ವಂಚನೆ: ತನಗೆ ಉದ್ಯೋಗ ನೇಮಕಾತಿಯಾದ ವಿಚಾರವನ್ನು ದೇವಿಪ್ರಸಾದ್‌ 2022ರ ಜನವರಿಯಲ್ಲಿ ಸ್ನೇಹಿತರಾದ ಅಶ್ವಿನಿ ಮತ್ತು ದೀಕ್ಷಿತ್‌ಗೆ ತಿಳಿಸಿದ್ದರು. ಅವರು ಕೂಡ ತಮ್ಮನ್ನು ಸೇರ್ಪಡೆಗೊಳಿಸುವಂತೆ ಹೇಳಿದ್ದರು. ಈ ವಿಚಾರವನ್ನು ದೇವಿಪ್ರಸಾದ್‌ ಅವರು ಚಂದ್ರಾವತಿಗೆ ತಿಳಿಸಿದಾಗ ಅಶ್ವಿನಿ(ಅಸಿಸ್ಟೆಂಟ್‌ ಎಚ್‌ಆರ್‌ ಉದ್ಯೋಗಕ್ಕೆ) 2.60 ಲ.ರು., ದೀಕ್ಷಿತ್‌ (ಕ್ಲರ್ಕ್ ಉದ್ಯೋಗಕ್ಕೆ) 90,000 ರು. ನೀಡುವಂತೆ ತಿಳಿಸಿದ್ದರು. ಆ ಮೊತ್ತವನ್ನು ಕೂಡ ಚಂದ್ರಾವತಿಗೆ ಪಾವತಿ ಮಾಡಿದ್ದರು. 2022ರ ಮಾಚ್‌ರ್‍ನಲ್ಲಿ ದೇವಿಪ್ರಸಾದ್‌ ಅವರಲ್ಲಿ ಚಂದ್ರಾವತಿ ‘ಕೆಎಂಎಫ್‌ನಲ್ಲಿ 3 ಅಫೀಸರ್‌ ಉದ್ಯೋಗವಿದೆ’ ಎಂದು ತಿಳಿಸಿದ್ದು,. ಅದರಂತೆ ಭವ್ಯ ಕೆ., ಧನ್ಯಶ್ರೀ ಮತ್ತು ಯಕ್ಷಿತ್‌ ಉದ್ಯೋಗಕ್ಕೆ ಸೇರಲು ಮುಂದಾಗಿದ್ದರು. ಚಂದ್ರಾವತಿಯನ್ನು ಸಂಪರ್ಕಿಸಿ, ಮೂವರು ಕೂಡ ತಲಾ 3.50 ಲ.ರು. ನೀಡಿದ್ದರು.

ಹಣ ವಾಪಸ್‌ಗೆ ಒತ್ತಾಯ: 2022ರ ಮೇ ತಿಂಗಳವರೆಗೂ ನೇಮಕಾತಿ ಆಗದೇ ಇದ್ದಾಗ ದೇವಿಪ್ರಸಾದ್‌ ಮತ್ತು ಇತರರು ಚಂದ್ರಾವತಿಗೆ ಕರೆ ಮಾಡಿದ್ದರು. ಆಗ ಚಂದ್ರಾವತಿ ಅದನ್ನು ರಾಮಪ್ರಸಾದ್‌ಗೆ ತಿಳಿಸಿದ್ದಳು. ಆಗ ರಾಮಪ್ರಸಾದ್‌ ‘ನಿಮ್ಮ ಹಣಕ್ಕೆ ನಾನು ಇದ್ದೇನೆ’ ಎಂದಿದ್ದ. ಅನಂತರ ಕೆಲವು ದಿನಗಳ ಬಳಿಕವೂ ನೇಮಕಾತಿ ಆಗದಿದ್ದಾಗ ದೇವಿಪ್ರಸಾದ್‌ ಮತ್ತು ಇತರರು ಹಣ ವಾಪಸ್‌ ನೀಡುವಂತೆ ಚಂದ್ರಾವತಿಯನ್ನು ಒತ್ತಾಯಿಸಿದ್ದರು. 2022ರ ಮೇ 4 ರಂದು ಚಂದ್ರಾವತಿ 10.70 ಲ.ರು. ಮೊತ್ತದ ಚೆಕ್‌ನ್ನು ವಾಪಸ್‌ ನೀಡಿದ್ದಳು.

ಮತ್ತೆ ಹಣ ಪಡೆದ ಆರೋಪಿ: ಚಂದ್ರಾವತಿ ಹಣ ವಾಪಸ್‌ ನೀಡಿದ ಅನಂತರ ದೇವಿಪ್ರಸಾದ್‌ ಅವರಿಗೆ ರಾಮ್‌ಪ್ರಸಾದ್‌ ಕರೆ ಮಾಡಿ ‘ಚಂದ್ರಾವತಿ ನೀಡಿದ ಹಣದ ಪೈಕಿ 1 ಲ.ರು. ಮೊತ್ತ ತನ್ನ ಖಾತೆಗೆ ಹಾಕಬೇಕು. ಕೂಡಲೇ ಉದ್ಯೋಗ ನೀಡುತ್ತೇನೆ’ ಎಂದಿದ್ದ. ಇದನ್ನು ನಂಬಿದ ದೇವಿಪ್ರಸಾದ್‌ 1 ಲ.ರು. ಮತ್ತೆ 50,000 ರು.ಗೆ ಬೇಡಿಕೆ ಇಟ್ಟಿದ್ದು, ಅದನ್ನು ಕೂಡ ನೀಡಿದರು. ಆದರೂ ಉದ್ಯೋಗ ನೀಡಲಿಲ್ಲ. ಒಟ್ಟು ಸುಮಾರು 138ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳಿಂದ ಚಂದ್ರಾವತಿ ಮತ್ತು ಪುತ್ತೂರಿನ ರಮೇಶ್‌ ಎಂಬವರ ಮೂಲಕ ಸುಮಾರು 1.80 ಕೋ.ರು.ಗೂ ಅಧಿಕ ಹಣ ಪಡೆದು ವಂಚಿಸಿದ್ದಾನೆ.

ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಫ್‌ಐಆರ್‌ನಲ್ಲಿ ರಾಮಪ್ರಸಾದ್‌ ಅಲ್ಲದೆ ಮೂಡಿಗೆರೆಯ ಹೇಮಂತ್‌, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್‌ ಮತ್ತು ಇತರ ಹಲವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಈ ಪೈಕಿ ರಾಮಪ್ರಸಾದ್‌ನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಕ್ಯಾನ್ಸರ್‌ನಿಂದ ಕುಟುಂಬ ಅನಾಥವಾಗುವ ಭಯ, ಪತ್ನಿ ಹಾಗೂ ಕಂದನ ಕೊಲೆಗೈದ

ಸೂಕ್ತ ಕ್ರಮಕ್ಕೆ ಹಾಲು ಒಕ್ಕೂಟ ಮನವಿ: ಆರೋಪಿ ರಾಮಪ್ರಸಾದ್‌ನ ಬಂಧನ ವಿಚಾರ ತಿಳಿದುಕೊಂಡ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಪತ್ರಿಕಾ ಪ್ರಕಟಣೆ ಹೊರಡಿಸಿ, ತನಗೂ, ನಕಲಿ ವ್ಯಕ್ತಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಭೀಮಾತೀರದಲ್ಲಿ ಆತಂಕ ಸೃಷ್ಟಿಸಿದ ಆಯಿಲ್‌ ಗ್ಯಾಂಗ್: ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್!

ನಮ್ಮ ಸಂಸ್ಥೆ ರೈತರದ್ದಾಗಿದ್ದು, ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದೆ. ಹೊರಗಿನ ವ್ಯಕ್ತಿಗಳಿಂದ ನಡೆದ ಈ ಪ್ರಕರಣದಿಂದ ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆಯಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್‌ ಕಮಿಷನರ್‌ಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಮನವಿ ಸಲ್ಲಿಸಿದ್ದಾರೆ.

click me!