
ಆನೇಕಲ್ (ಅ.13): ಕೇರಳದಿಂದ ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದು ವಾಸವಾಗಿದ್ದ ಕುಟುಂಬದಲ್ಲಿ ಅಪ್ಪ ಮಗ ಇಬ್ಬರೂ ಒಟ್ಟಿಗೆ ಕುಳಿತು ಎಣ್ಣೆ ಹಾಕುವಷ್ಟು ಕ್ಲೋಸ್ ಆಗಿದ್ದಾರೆ. ಆದರೆ, ಇಬ್ಬರ ನಡುವೆ ಮಧ್ಯರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ಅಪ್ಪ ಎಂಬ ಚಾಪ್ಟರ್ ಅನ್ನೇ ಮಗ ಕ್ಲೋಸ್ ಮಾಡಿದ್ದಾನೆ.
ಹೌದು, ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿದೆ. ಬೆಂಗಳೂರಿನ ಹೊರವಲಯ ಬನ್ನೇರುಘಟ್ಟ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ವೇಲಾಯುದನ್(76) ಎನ್ನುವವರಾಗಿದ್ದಾರೆ. ಇವರನ್ನು ಕೊಲೆ ಮಾಡಿದ ಹಿರಿಯ ಮಗ ವಿನೋದ್ ಕುಮಾರ್ ಆರೋಪಿ ಆಗಿದ್ದಾನೆ. ಇವರು ಮೂಲತಃ ಕೇರಳ ಮೂಲದ ಏರಿಮಲೆಯವರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ತಾಯಿ : ಪ್ರಿಯಕರನಿಗಾಗಿ ಮಕ್ಕಳ ಬಲಿ
ಚೆಡ್ಡಿ ಬೇಡ, ಪಂಚೆ ಉಡಲು ಹೇಳಿದ್ದಕ್ಕೆ ಕೊಲೆ: ಇನ್ನು ಅಪ್ಪನಿಗೆ ವಯಸ್ಸಾಗಿದ್ದರಿಂದ ಅವರ ಇಬ್ಬರು ಮಕ್ಕಳೇ ಅವರನ್ನು ನೋಡಿಕೊಳ್ಳುತ್ತಿದ್ದರು. ಹಿರಿಯ ಮಗ ಅಪ್ಪನೊಂದಿಗೆ ಕುಳಿತು ಎಣ್ಣೆ ಹಾಕುವಷ್ಟು ಕ್ಲೋಸ್ ಆಗಿದ್ದನು. ಇಬ್ಬರೂ ಸೇರಿಕೊಂಡು ಎಣ್ಣೆ ಹಾಕುವುದಕ್ಕೆ ತನ್ನ ಮನೆಯಲ್ಲಿದ್ದ ಕಿರಿಮಗ ವಿಮಲ್ ಕುಮಾರನಿಗೆ ಹಣ ಕೊಟ್ಟು ಎಣ್ಣೆಯನ್ನು ತರಿಸುತ್ತಿದ್ದರು. ತಮ್ಮನಿಂದ ಎಣ್ಣೆ ತರಿಸಿ ತಂದೆ ಮಗ ಇಬ್ಬರೂ ಒಟ್ಟಿಗೆ ಕುಡಿದಿದ್ದಾರೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಇಬ್ಬರ ನಡುವೆ ನೀನು ಮನೆಗೆ ಹಿರಿಯ ಮಗನಾಗಿದ್ದು, ಚೆಡ್ಡು ಹಾಕುವುದನ್ನು ಪಂಚೆಯನ್ನು ತೊಟ್ಟುಕೊಳ್ಳಬೇಕು ಎಂದು ಹೇಳಿದ್ದಕ್ಕೆ ಗಲಾಟೆ ಆರಂಭವಾಗಿದೆ. ಇವರಿಬ್ಬರೂ ಕುಡಿದಾಗ ಸಣ್ಣ ಕಾರಣಕ್ಕೆ ಗಲಾಟೆ ಮಾಡುತ್ತಾ ಬೊಬ್ಬೆ ಹೊಡೆಯುವುದು ಸಾಮಾನ್ಯ ಎಂದು ಮನೆಯವರು ಹಾಗೂ ಅಕ್ಕಪಕ್ಕದವರು ಸುಮ್ಮನೆ ತಮ್ಮ ಪಾಡಿಗೆ ತಾವು ಮಲಗಿದ್ದಾರೆ.
ಆದರೆ, ತಂದೆ ಮಗನ ಜಗಳ ವಿಕೋಪಕ್ಕೆ ತಿರುಗಿದ್ದು, ಮಗ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಕೋಪದಲ್ಲಿ ತಂದೆ ಇರಿದಿದ್ದಾನೆ. ಇದರಿಂದ ಕೂಗಾಡುತ್ತಾ ನೆಲಕ್ಕೆ ಬಿದ್ದ ವೃದ್ಧ ವೇಲಾಯುದನ್ ರಕ್ತಸ್ರಾವದಲ್ಲಿಯೇ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಆಗ ಮನೆಯವರು ಬಂದು ನೋಡಿದಾಗ ಅದಾಗಲೇ ಅಪ್ಪ ವೇಲಾಯುದನ್ ಕೊಲೆ ಆಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ವೃದ್ಧನ ಮೃತದೇಹವನ್ನ ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ