ಕೊಡಗಿನ ಚೇಲಾವರ ಜಲಪಾತ ನೋಡಲು ಬಂದ ಕೇರಳದ ಯುವಕ ಮುಳುಗಿ ಸಾವು

By Suvarna NewsFirst Published Feb 5, 2024, 5:58 PM IST
Highlights

ಕೊಡಗಿನ ನಾಪೋಕ್ಲು ಸಮೀಪದ ಚೆಯ್ಯ೦ಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಇಳಿದ ಯುವಕನೊಬ್ಬ ನೀರುಪಾಲಾದ ಘಟನೆ ನಡೆದಿದೆ.

 ನಾಪೋಕ್ಲು (ಫೆ.5): ಕೊಡಗಿನ ನಾಪೋಕ್ಲು ಸಮೀಪದ ಚೆಯ್ಯ೦ಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಇಳಿದ ಯುವಕನೊಬ್ಬ ನೀರುಪಾಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಕೇರಳದ ಕಣ್ಣೂರಿನ ಇರಿಟ್ಟಿಯ ಮಹಮ್ಮದ್ ಅಶ್ರಫ್ ಎಂಬವರ ಪುತ್ರ, ರಶೀದ್‌ (25) ಮೃತ ದುರ್ದೈವಿಯಾಗಿದ್ಧಾನೆ

ಕೇರಳದ ಕಣ್ಣೂರಿನಿಂದ ರಶೀದ್, ಮಹಮ್ಮದ್ ಶಾಲಿ ಹಾಗೂ ಇಬ್ಬರು ಯುವತಿಯರು ಭಾನುವಾರ ಬೆಳಗ್ಗೆ ಚೇಲಾವರ ಫಾಲ್ಸ್ ವೀಕ್ಷಣೆಗೆಂದು ಬಂದಿದ್ದರು. ಯುವತಿಯರು ಕ್ಯಾಲಿಕಟ್‌ನಲ್ಲೂ, ಯುವಕರು ಮಟ್ಟನೂರಿನಲ್ಲೂ ಖಾಸಗಿ ಪ್ರವಾಸಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ನೀಲಾಂಬೂರು– ನಂಜನಗೂಡು ರೈಲ್ವೆ ಮಾರ್ಗಕ್ಕೆ ಪ್ರತಾಪ್ ಸಿಂಹ ವಿರೋಧ

ಮಧ್ಯಾಹ್ನದ ಬಿಸಿಲಿನ ಝಳಕ್ಕೆ ರಶೀದ್, ಜಲಪಾತದ ಕೆಳಭಾಗದ ಹೊಂಡದಲ್ಲಿ ಸ್ನಾನ ಮಾಡಲು ಪ್ರಯತ್ನಿಸಿದ್ದು, ಸುಳಿಗೆ ಸಿಲುಕಿ ಮುಳುಗಿದ್ದಾನೆ. ಮಾಹಿತಿ ಅರಿತ ಪೊಲೀಸ್ ಸಿಬ್ಬಂದಿ ಭಾಗಮಂಡಲ ಹರ್ಷವರ್ಧನ್‌ ಮೃತದೇಹವನ್ನು ಹೊರಕ್ಕೆಳೆಯಲು ಪ್ರಯತ್ನಿಸಿದರಾದರೂ ವಿಫಲರಾದರು. ಬಳಿಕ ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಮಹಮ್ಮದ್, ನಂಜಪ್ಪ ಮತ್ತು ಶಾಹಿದ್ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲೆತ್ತಿದರು.

ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣದ ಬಗ್ಗೆ ಮೃತರ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್, ರೈಟರ್ ಪ್ರದೀಪ್‌ ಮತ್ತು ಸಿಬ್ಬಂದಿ ಶರತ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂದ್ದಾರೆ.

ಚೇಲಾವರ ಫಾಲ್ಸ್‌ಗೆ ಯಾವುದೇ ಭದ್ರತೆ ಇಲ್ಲ:

ಚೇಲಾವರ ಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಇಲ್ಲ. ಈ ಕಾರಣದಿಂದ ಆಗಿಂದಾಗ್ಗೆ ಇಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಇಲ್ಲಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆ ವ್ಯವಸ್ಥೆಯೂ ಇಲ್ಲ. ಫಾಲ್ಸ್‌ ಸುರಕ್ಷಿತವಾಗಿ ನೋಡಲು ತೂಗುಸೇತುವೆ ನಿರ್ಮಾಣ ಮಾಡಬೇಕೆಂಬ ಸ್ಥಳೀಯರ ಕೋರಿಕೆ ಕಸದ ಬುಟ್ಟಿ ಸೇರಿದೆ. ಬೇಲಿ ಅಳವಡಿಸಲಾಗಿದ್ದರೂ, ಫಾಲ್ಸ್ ನೋಡಲು ಬಂದವರು ಬೇಲಿಯನ್ನು ನುಸುಳಿ ಒಳ ಪ್ರವೇಶಿಸುತ್ತಾರೆ. ಬೇಲಿಗೆ ಜಾಲರಿ ಹಾಕಬೇಕೆಂಬ ಕೋರಿಕೆಯೂ ಇದೆ.

ವೇತನ ಹೆಚ್ಚಳ ಮತ್ತು ಬಡ್ತಿಗಾಗಿ ಉದ್ಯೋಗಿಗಳಿಗೆ ಷರತ್ತು ವಿಧಿಸಿದ ಐಟಿ ದಿಗ್ಗಜ ಟಿಸಿಎಸ್‌

ಜಲಪಾತದಲ್ಲಿ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಈ ಹಿಂದೆಯೇ ನಿರ್ಣಯ ಮಾಡಿತ್ತು. ಕಬ್ಬೆ ಬೆಟ್ಟಕ್ಕೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಚೇಲಾವರ ಜಲಪಾತಕ್ಕೂ ಬರುತ್ತಾರೆ. ಕೆಲವು ಸಮಯಗಳ ಹಿಂದೆ ಜಲಪಾತದ ಬಳಿ ಮುಖ್ಯ ರಸ್ತೆಗೆ ಗೇಟ್ ನಿರ್ಮಿಸಿ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಜಲಪಾತದಲ್ಲಿ ನೀರು ಕ್ಷೀಣಿಸಿದ್ದು, ಈ ಪ್ರದೇಶ, ಅಪರಿಚಿತರಿಗೆ ಮೃತ್ಯುತಾಣವಾಗಿ ಬದಲಾಗಿದೆ. ಚೇಲಾವರ ಜಲಪಾತವನ್ನು ಮರೆತಿರುವ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

click me!