ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರನ್ನು ಸನ್ಮಾನಿಸಲು ಯಾಕಾದರೂ ಬಂದಿದ್ದೆವೋ ಎಂದು ಬೆಂಬಲಿಗರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಬೆಂಗಳೂರು (ಮಾ.07): ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಿದ ಬಗ್ಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರನ್ನು ಸನ್ಮಾನಿಸಲು ಯಾಕಾದರೂ ಬಂದಿದ್ದೆವೋ ಎಂದು ಬೆಂಬಲಿಗರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟದ ಪ್ರಕರಣ ಮತ್ತು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಪ್ರಕರಣ ಪೊಲೀಸರಿಗೆ ಭಾರಿ ತಲೆನೋವು ತಂದಿಟ್ಟಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಶತ ಪ್ರಯತ್ನ ಮಾಡುತ್ತಿದ್ದರೂ ಆರೋಪಿ ಮಾತ್ರ ಪತ್ತೆಯಾಗುತ್ತಿಲ್ಲ. ಆದರೆ, ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ವಿಡಿಯೋ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಿ ವರದಿ ತರಿಸಿಕೊಂಡಿದೆ. ಇದರಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಾದ ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಅವರನ್ನು ಅರೆಸ್ಟ್ ಮಾಡಿದ್ದಾರೆ.
undefined
ಈಗ ಅವರನ್ನು ಮೂರು ದಿನಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಡಗಿಯ ಮಹಮದ್ ನಾಶೀಪುಡಿ ಅವರು ನಾನು ದೇವರಾಣೆ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಹೇಳುತ್ತಿದ್ದಾರೆ. ನಾವು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ನಾಸೀಸ್ ಹುಸೇನ್ ಅವರಿಗೆ ಸನ್ಮಾನ ಮಾಡುವುದಕ್ಕೆ ಬಂದಿದ್ದೆವು. ಈಗ ಯಾಕಾದರೂ ವಿಧಾನಸೌಧಕ್ಕೆ ಬಂದೆವೋ ಎಂಬಂತಾಗಿದೆ. ನಾವು ಸನ್ಮಾನ ಮಾಡಲು ಬಂದು ಜೈಲು ಸೇರಿದ್ದೇವೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಈಗಾಗಲೇ ಪೊಲೀಸರಿಂದ ಘಟನೆಯ ವೇಳೆ ಅವರ ಅಕ್ಕಪಕ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ಮಾಡಿ ಸಾಕ್ಷಿಯನ್ನು ಪಡೆಯಲಾಗಿದೆ. ಇನ್ನು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ತಮ್ಮ ನಾಯಕ ಗೆಲುವು ಸಾಧಿಸಿದ ಜೋಶ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ. ಪೊಲೀಸರ ವಿಚಾರಣೆ ವೇಳೆ ಬ್ಯಾಡಗಿಯ ಮಹಮ್ಮದ್ ನಾಶಿಪುಡಿ ಅವರು ನಾವು ಜಿಂದಾಬಾದ್ ಜಿಂದಾಬಾದ್ ಅಂತ ಗೆಲುವಿನ ಜೋಶ್ ನಲ್ಲಿ ಜೈಕಾರ ಹಾಕಿದ್ದೇವೆ. ಆದರೆ, ಪಾಕಿಸ್ತಾನ ಪರ ಘೋಷಣೆ ಮಾತ್ರ ನಾವು ಕೂಗಿಲ್ಲವೆಂದು ಹೇಳಿದ್ದಾನೆ.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್‌ಗೂ ನೋಟಿಸ್: ಪಾಕ್ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಅಲ್ಲಿ ಸೇರಿದ್ದ ಎಲ್ಲರನ್ನು ವಿಚಾರಣೆ ಮಾಡಲಾಗಿದ್ದು, ಈಗ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನೂ ವಿಚಾರಣೆ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಪೊಲೀಸರು ಇನ್ನೆರಡು ದಿನದಲ್ಲಿ ನಾಸೀಸ್ ಹುಸೇನ್ಗೂ ನೋಟಿಸ್ ನೀಡುವ ಸಾಧ್ಯತೆಯಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಬಹುತೇಕ ಕೆಲ ಪೊಲೀಸ್ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ವಿಧಾನಸೌಧ ಭದ್ರತಾ ಸಿಬ್ಬಂದಿ ಅಸಮಾಧಾನ ತೋಡಿಕೊಂಡಿದ್ದಾರೆ. ವಿಧಾನಸೌಧಕ್ಕೆ ಬರುವ ಬಹುತೇಕರು ಶಾಸಕರ ಹಾಗೂ ಅಭ್ಯರ್ಥಿಗಳ ಕಾರುಗಳಲ್ಲಿ ಬಂದರು. ನಾವು ಅಡ್ಡ ಹಾಕಿದ್ರೆ ಅವಾಜ್ ಹಾಕಿ ಒಳ ಹೋಗ್ತಾರೆ. ಒಬ್ಬಂಟಿಯಾಗಿ ಬರೋ ಸಾರ್ವಜನಿಕರನ್ನ ಪಾಸ್ ಇಲ್ಲದಿದ್ರೆ ತಡೆಯಬಹುದು. ಆದ್ರೆ ಶಾಸಕರು ಹಾಗೂ ಸಚಿವರ ಹೆಸರೇಳಿಕೊಂಡು ಬರ್ತಾರೆ. ಒಳಗೆ ಬಿಡದಿದ್ದರೆ, ಶಾಸಕರಿಗೆ ಕರೆ ಮಾಡಿಸಿ ಒಳಗೆ ಹೋಗ್ತಾರೆ. ಆಗ ಪಾಸ್ ಪರಿಶೀಲನೆ ಮಾಡಲಾಗೊಲ್ಲ ಎಂದು ಭದ್ರತಾ ಪೊಲೀಸರು ಅಳಲು ತೋಡಿಕೊಂಡಿದ್ದಾರೆ.