ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಆರೋಪಿಯ ರೇಖಾಚಿತ್ರವನ್ನು ಬಿಡಿಸಲಾಗಿದ್ದು, ಈ ಚಹರೆಯನ್ನು ಹೊಂದಿರುವ ವ್ಯಕ್ತಿ ನಿಮಗೆ ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರು (ಮಾ.07): ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ನೆರವು ನೀಡಲು ಖ್ಯಾತ ಕಲಾವಿದ ಹರ್ಷ ಮುಂದಾಗಿದ್ದಾರೆ. ಬಾಂಬ್ ಸ್ಪೋಟಿಸಿದ ಆರೋಪಿಯ ರೇಖಾಚಿತ್ರವನ್ನು ಬಿಡಿಸಲಾಗಿದ್ದು, ಪೊಲೀಸರು ಬಿಡುಗಡೆ ಮಾಡಿದ ಫೋಟೋ ಆಧಾರದಲ್ಲಿ ಹೋಲಿಕೆ ಆಗುವಂತಹ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬಾಂಬ್ ಸ್ಪೋಟದ ಆರೋಪಿ ಇನ್ನೂ ನಮ್ಮ ನಿಮ್ಮ ನಡುವೆಯೇ ಇದ್ದಾನೆ. ಆತನನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶಂಕಿತ ಭಯೋತ್ಪಾದಕನ ಸುಳಿವಿಗಾಗಿ ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ಸಿಸಿಟಿವಿ ಕ್ಯಾಮರಾದ ವಿಡಿಯೋ ಆಧರಿಸಿ ಆತನ ಮುಖ ಕಾಣಿಸುವಂತಹ ಚಿತ್ರವನ್ನು ಸಾರ್ವಜನಿಕರಿಗೆ ನೀಡಿದ್ದರು. ಇನ್ನು ಈತನ ಬಗ್ಗೆ ಸುಳಿವು ನೀಡದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದರು. ಈಗ ಪೊಲೀಸರಿಗೆ ಕಲಾವಿದರು ಆಸರೆಯಾಗಿದ್ದಾರೆ. ಬಾಂಬ್ ಸ್ಫೋಟಿಸಿದ ಆರೋಪಿಯ ಒಂದು ಭಾಗದ ಮುಖಚರ್ಯೆಯನ್ನು ಆಧರಿಸಿ ಪೂರ್ಣ ಪ್ರಮಾಣದ ಮುಖದ ರೇಖಾಚಿತ್ರವನ್ನು ಬರೆದು ಪೊಲೀಸರಿಗೆ ನೀಡಿದ್ದಾರೆ. ಈ ಆರೋಪಿಯ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಪೊಲೀಸರು ಈ ರೇಖಾಚಿತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
Hope it will Be Useful,
Suspect Imagination Sketches. pic.twitter.com/cO5VdolqKn
undefined
ಇತ್ತೀಚಿನ ತನಿಖೆಯ ಪ್ರಕಾರ, ಬಾಂಬ್ ಸ್ಪೋಟಕ್ಕೆ ಆರೋಪಿಗಳು ಅಮೋನಿಯಂ ನೈಟ್ರೇಟ್ ಪುಡಿಯನ್ನು ಬಳಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ನೈಟ್ರೇಟ್ ಪುಡಿಗಳನ್ನು ಹಿಂಸಾಚಾರದ ಕೃತ್ಯಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆಯ ಕಾರಣ, ಇದನ್ನು ಸಾರ್ವಜನಿಕ ಮಾರಾಟಕ್ಕೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ, ಆರೋಪಿಗಳಿಗೆ ಹೇಗೆ ಅಮೋನಿಯಂ ನೈಟ್ರೇಟ್ ಸಿಕ್ಕಿದೆ ಎಂಬುದೂ ಕುತೂಹಲಕಾರಿ ಆಗಿದೆ. ಇನ್ನು ಬೆಂಗಳೂರಿನ ಸುತ್ತಮುತ್ತಲು ಸೇರಿದಂತೆ ವಿವಿಧೆಡೆ ಕಲ್ಲುಗಳನ್ನು ಸ್ಫೋಟಿಸಲು ಕಲ್ಲುಗಣಿಗಾರಿಕೆ ಮಾಡುವವರಿಗೆ ಮಾತ್ರ ನೈಟ್ರೇಟ್ ಪುಡಿ ಖರೀದಿಗೆ ಮಾತ್ರ ಅವಕಾಶವಿದೆ. ಆದರೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಂತಹ ಘಟನೆಗೆ ಈ ಪುಡಿ ಹೇಗೆ ಸಿಕ್ಕಿದೆ ಎಂಬುದನ್ನು ಶೋಧನೆ ಮಾಡಲಾಗುತ್ತಿದೆ.
ತುಮಕೂರಿನಲ್ಲಿಯೂ ಬಾಂಬ್ ಆರೋಪಿಗಾಗಿ ಶೋಧ:
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬಾಂಬರ್ ತುಮಕೂರಿನಲ್ಲಿ ಓಡಾಡಿದ್ದ ಎಂಬ ಅನುಮಾನ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಂಕಿತ ಬಾಂಬರ್ ಮಾರ್ಚ್ 1ರಂದು ತುಮಕೂರಿನಲ್ಲಿ ಓಡಾಡಿದ್ದ ಎಂಬ ಶಂಕೆ ಹಿನ್ನೆಲೆಯಲ್ಲಿ ಆತನ ಸುಳಿವಿಗಾಗಿ ತುಮಕೂರಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಇಬ್ಬರು ಡಿಸಿಪಿ ನೇತೃತ್ವದಲ್ಲಿ 28 ವಾಹನಗಳಲ್ಲಿ ಆಗಮಿಸಿದ ಪೊಲೀಸರು ತುಮಕೂರಿನ ರೈಲ್ವೆ ನಿಲ್ದಾಣ, ಮಂಡಿಪೇಟೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಶಂಕಿತನ ಹೆಜ್ಜೆ ಗುರುತು ಪತ್ತೆ ಹಚ್ಚಲು ಹುಡುಕಾಟ ನಡೆಸಿದ್ದಾರೆ. ನಗರದ ಬೇರೆ ಬೇರೆ ಭಾಗಗಳಲ್ಲಿ ಇರುವ ಹಲವು ಸಿಸಿ ಕ್ಯಾಮರಾಗಳ ದೃಶ್ಯವನ್ನು ಎನ್‌ಐಎ ಅಧಿಕಾರಿಗಳ ತಂಡ ವೀಕ್ಷಿಸಿದ್ದು, ತುಮಕೂರು ಪೊಲೀಸರ ಜೊತೆ ಶೋಧ ನಡೆಸಿದರು.
ಬಳ್ಳಾರಿಯಲ್ಲೂ ಬೀಡು ಬಿಟ್ಟ ಎನ್‌ಐಎ ತಂಡ: ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್ಐಎ ತಂಡ ಮಾಹಿತಿಯನ್ನ ಪಡೆದುಕೊಂಡಿದೆ. ಎನ್ಐಎ ತಂಡಕ್ಕೆ ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಾಥ್ ನೀಡಿದ್ದರು. ಆರೋಪಿ ಘಟನೆ ನಡೆದ ಬಳಿಕ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದಿದ್ದನಂತೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ ಗೋಕರ್ಣ ಬಸ್ ಮೂಲಕ ಭಟ್ಕಳಗೆ ತೆರಳಿದ್ದಾನೆ. ಹೀಗಾಗಿ ಎನ್ಐಎ ತಂಡ ಬಳ್ಳಾರಿ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದೆ.