
ಬೆಂಗಳೂರು (ಸೆ.11): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿ ಬಾಲಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಅಡಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಂಗಳೂರಿನ ಆರ್‌ಟಿ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಾಲಕನ ಪರ ಆತನ ತಂದೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಸಂತ್ರಸ್ತೆ ಹಾಗೂ ಆರೋಪಿಯ ಪೋಷಕರು ಪರಸ್ಪರ ರಾಜಿ ಮಾಡಿಕೊಂಡಿರುವುದನ್ನು ಪರಿಗಣಿಸಿ ಈ ಆದೇಶ ಮಾಡಿದೆ. ಕಳೆದ ವರ್ಷ ನ.21ರಂದು ಕಾಲೇಜಿಗೆ ತೆರಳಿದ್ದ ಪುತ್ರಿ ಮನೆಗೆ ಮರಳಿಲ್ಲ ಎಂದು ಅಪ್ರಾಪ್ತೆಯ ತಂದೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಮತ್ತು ಸಂತ್ರಸ್ತೆಯ ಫೋನ್ ಟ್ರ್ಯಾಕ್ ಮಾಡಿ ಇಬ್ಬರನ್ನೂ ಪತ್ತೆ ಹಚ್ಚಿದ್ದರು. ಬಳಿಕ, ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು. ಇದೀಗ ಸಂತ್ರಸ್ತೆ ಮತ್ತು ಆರೋಪಿಯ ಪೋಷಕರು ಪ್ರಕರಣಕ್ಕೆ ಅಂತ್ಯ ಹಾಡಲು ಬಯಸಿ, ವಿಚಾರಣೆ ರದ್ದುಪಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಒಂದೇ ತರಗತಿಯಲ್ಲಿ ಓದುತ್ತಿದ್ದ ಆರೋಪಿ ಹಾಗೂ ಸಂತ್ರಸ್ತೆ ಸ್ನೇಹಿತರಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಅವರು, ಮನೆಬಿಟ್ಟು ಚಿಕ್ಕಮಗಳೂರಿಗೆ ತೆರಳಿದ್ದರು. ಇಬ್ಬರ ನಡುವೆ ಮೂಡಿದ್ದ ಆಕರ್ಷಣೆಯಿಂದ ಈ ರೀತಿ ನಡೆದಿದೆ. ಸಂತ್ರಸ್ತೆಯೊಂದಿಗೆ ಪ್ರೀತಿಯಲ್ಲಿರುವ ಆರೋಪಿಯನ್ನು ಶಿಕ್ಷಿಸುವುದು ಪೋಕ್ಸೋ ಕಾಯ್ದೆಯ ಉದ್ದೇಶವಲ್ಲ ಎಂಜು ಈಗಾಗಲೇ ಹಲವು ನ್ಯಾಯಾಲಯಗಳು ಆದೇಶಿಸಿವೆ. ಆದ್ದರಿಂದ ಕಾನೂನಿನ ಪರಿಣಾಮಗಳ ಅರಿವಿನ ಕೊರತೆಯಿಂದ ಹದಿಹರೆಯದವರು ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡರೆ ನ್ಯಾಯಾಲಯವು ಮುಕ್ತ ಮನಸ್ಸಿನಿಂದ ನೋಡಬೇಕಾಗುತ್ತದೆ ಎಂದು ತಿಳಿಸಿದೆ.
ಪ್ರಕರಣದ ದಾಖಲೆ ಹಾಗೂ ಆರೋಪಿಯ ಪರೀಕ್ಷಾ ಅಂಕಪಟ್ಟಿನೋಡಿದರೆ ಆತ ಪ್ರತಿಭಾವಂತ ವಿದ್ಯಾರ್ಥಿ. ಉಭಯತ್ರರ ಪೋಷಕರು ರಾಜಿ ಮಾಡಿಕೊಂಡಿದ್ದು, ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಾಸ್ತವ ಪರಿಸ್ಥಿತಿ ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸುವುದು ಸೂಕ್ತ. ಇಲ್ಲವಾದರೆ ಆರೋಪಿಯ ಭವಿಷ್ಯ ಅಪಾಯಕ್ಕೆ ಸಿಲುಕಲಿದೆ. ಆದ್ದರಿಂದ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ 12ಕ್ಕೆ
ಚಿತ್ರದುರ್ಗ: ಲೈಂಗಿಕ ದೌಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಸೆಪ್ಪಂಬರ್ 12ಕ್ಕೆ ಮುಂದೂಡಲಾಗಿದೆ.
Bengaluru Crime: ಪ್ರೇಯಸಿಗಾಗಿ ಸ್ನೇಹಿತನನ್ನೇ ಕೊಂದ ಬಾಲ್ಯಸ್ನೇಹಿತ
ಮುರುಘಾ ಶ್ರೀಗಳ ರೆಗ್ಯುಲರ್ ಜಾಮೀನು ಅರ್ಜಿ ಗುರುವಾರ ಬೆಳಗ್ಗೆ ವಿಚಾರಣೆಗೆ ಬಂದಾಗ ನ್ಯಾಯಾಧೀಶರು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ, ಮುರುಅರ್ಜಿ ವಿಚಾರಣೆಯನ್ನು ಸೆಪ್ಟಂಬರ್ 12ಕ್ಕೆ ಮುಂದೂಡಿದರು. ಏತನ್ಮಧ್ಯೆ ವಾರ್ಡನ್ ರಶ್ಮಿ ಅವರ ಪೊಲೀಸ್ ಕಸ್ಟಡಿ ಕೂಡಾ ಅಂತ್ಯವಾಗಿದ್ದು, ಸೆ.14ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.
16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು
ಪ್ರಕರಣದ ಎ3 ಆರೋಪಿ ಮಠದ ಉತ್ತರಾಧಿಕಾರಿ ಹಾಗೂ ಎ4 ಆರೋಪಿ ಪರಮಶಿವಯ್ಯ, ಎ5ಆರೋಪಿ ಗಂಗಾಧರಯ್ಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.12ಕ್ಕೆ ಮುಂದೂಡಿ 2ನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ