
ಬೆಂಗಳೂರು (ಮೇ.14) ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಸಿಗ್ನಲ್ ತೋರಿಸುತ್ತದೆ ಎಂದು ಮತದಾನದ ವೇಳೆ ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದ ಆರೋಪದ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಜರಿ ವ್ಯಾಪಾರಿ ಸೈಯದ್ ಇಮಾದುಲ್ಲಾ ಬಂಧಿತ. ಆಡುಗೋಡಿ ಸಮೀಪದ ಗುಜರಿ ವ್ಯಾಪಾರಿ ಸೈಯದ್, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಚಿನ್ನಯ್ಯಪಾಳ್ಯ ಶಾಲೆಯ ಮತಗಟ್ಟೆಗೆ ಬುಧವಾರ ಮಧ್ಯಾಹ್ನ ಸೈಯದ್ ಮತದಾನಕ್ಕೆ ತೆರಳಿದ್ದ. ಆಗ ನಾನು ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ಹಾಕಿದರೆ ಇವಿಎಂ ವಿಪ್ಯಾಟ್ ಯಂತ್ರದಲ್ಲಿ ಬಿಜೆಪಿ ಸಿಗ್ನಲ… ಬಂತು ಎಂದು ಸೈಯದ್ ಆರೋಪಿಸಿದ. ಇದರಿಂದ ಕೆಲ ಕಾಲ ಗೊಂದಲ ಸೃಷ್ಟಿಯಾಗಿ ಒಂದು ಗಂಟೆ ಅಧಿಕ ಹೊತ್ತು ಆ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಯಿತು. ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮತಗಟ್ಟೆಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಮತ ಯಂತ್ರವನ್ನು ಅಧಿಕಾರಿಗಳು ಪರಿಶೀಲಿಸಿದಾಗ ಸೈಯದ್ ಸುಳ್ಳು ಹೇಳಿದ್ದು ಬಯಲಾಯಿತು. ಉದ್ದೇಶ ಪೂರ್ವಕವಾಗಿ ಇವಿಎಂ ಯಂತ್ರಗಳ ಬಗ್ಗೆ ಸುಳ್ಳು ಪ್ರಚಾರಕ್ಕೆ ಸೈಯದ್ ಯತ್ನಿಸಿದ್ದ. ಈ ಬಗ್ಗೆ ಚುನಾವಣಾಧಿಕಾರಿ ನೀಡಿದ ದೂರಿನ ಮೇರೆಗೆ ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 10 ರಂದು ಮಧ್ಯಾಹ್ನ ಮತದಾನ ಮಾಡಲು ಆಡುಗೋಡಿಯ ಚಿನ್ನಯ್ಯನಪಾಳ್ಯದ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ್ದ ಆರೋಪಿ, ಮತದಾನದ ಬಳಿಕ ನಾನು ಇವಿಎಂ ಹ್ಯಾಕ್ ಆಗಿದೆ ಕಾಂಗ್ರೆಸ್ ಬಟನ್ ಒತ್ತಿದರೆ ಅದು ಬಿಜೆಪಿಗೆ ಹೋಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ಚುನಾವಣಾ ಅಧಿಕಾರಿಗಳು ಮತದಾನ ಪ್ರಕ್ರಿಯೆ ನಿಲ್ಲಿಸಿ ಇವಿಎಂ ಮತ್ತೊಮ್ಮೆ ಪರೀಕ್ಷೆಗೊಳಪಡಿಸಿದ್ದರು. ಇವಿಎಂನಲ್ಲಿ ಯಾವುದೇ ದೋಷ ಕಂಡುಬಂದಿರಲಿಲ್ಲ ಇದರಿಂದ ಒಂದು ಗಂಟೆ ಕಾಲ ಮತದಾನ ಸ್ಥಗಿತಗೊಂಡಿತ್ತು.
ಚುನಾವಣಾ ಕರ್ತವ್ಯಕ್ಕೆ ಅಡ್ಡಿ, ಗಲಭೆ ಸೃಷ್ಟಿಸುವ ಉದ್ದೇಶದಿಂದ ಸುಳ್ಳುಸುದ್ದಿ ಹಬ್ಬಿಸಿದ ಆರೋಪದ ಮೇಲೆ ಐಪಿಸಿ 177 ಅಡಿ ಪ್ರಕರಣ ದಾಖಲಿಸಿ ಸೈಯದ್ ಇಮಾದ್ದುಲ್ಲಾನ ಬಂಧನವಾಗಿದೆ.
ಇವಿಎಂ ಗೊಂದಲ, ಅನುಮಾನವೆಲ್ಲಾ ಮುಗಿದ ಅಧ್ಯಾಯ: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ