ಸಿಬಿಎಸ್‌ಇ ಫಲಿತಾಂಶ ಬೆನ್ನಲ್ಲೇ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಮೇ.12ರಂದು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಸತತ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇದೀಗ ಪೋಷಕರ ಆಕ್ರಂದನ ಮುಗಿಲ ಮುಟ್ಟಿದೆ.
ದೆಹಲಿ(ಮೇ.14): ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸತತವಾಗಿ ಪರಿಶ್ರಮ ಪಟ್ಟಿದ್ದಳು. ಆದರೆ ಫಲಿತಾಂಶ ನೋಡಿದಾಗ ಆಘಾತವಾಗಿದೆ. ಎರಡು ವಿಷಯದಲ್ಲಿ ಫೇಲ್ ಆಗಿದ್ದಾಳೆ. ಇದರ ಬೆನ್ನಲ್ಲೇ ನಾಪತ್ತೆಯಾಗಿದ್ದ 12ನೇ ತರಗತಿ ವಿದ್ಯಾರ್ಥಿನಿ ಇದೀಗ ಶವವಾಗಿ ಪತ್ತೆಯಾದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಅಮನ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೇ.12ರಂದು 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಫಲಿತಾಂಶ ತನ್ನ ಪರವಾಗಿ ಬಂದಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿ ಮಧ್ಯಾಹ್ನ 3.30ರ ವೇಳೆಗೆ ನಾಪತ್ತೆಯಾಗಿದ್ದಳು. ಸಂಜೆಯಾದರು ಮಗಳು ಮನೆಗೆ ಬಾರದ ಹಿನ್ನಲೆಯಲ್ಲಿ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪರೀಕ್ಷೆ ಫಲಿತಾಂಶದ ಮಾಹಿತಿ ಪಡೆದ ಪೊಲೀಸರು ತೀವ್ರವಾಗಿ ಹುಡುಕಾಟ ಆರಂಭಿಸಿದ್ದಾರೆ.
CBSE Class 10 Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್‌ಗಾಗಿ ಇಲ್ಲಿ ಚೆಕ್ ಮಾಡಿ!
ಸತತ ಹುಡುಕಾಟ ನಡೆಸಿದರೂ ವಿದ್ಯಾರ್ಥಿನಿಯ ಸುಳಿವು ಪತ್ತೆಯಾಗಲಿಲ್ಲ. ಎಲ್ಲಾ ಬಸ್ ನಿಲ್ದಾಣ, ರೈಲು ನಿಲ್ದಾಣಕ್ಕೆ ಮಾಹಿತಿ ರವಾನಿಸಿಸಲಾಗಿತ್ತು. ಚೆಕ್ ಪೋಸ್ಟ್‌ಗಳಲ್ಲಿ ಅಲರ್ಟ್ ಮಾಡಲಾಗಿತ್ತು. ಕಂಟ್ರೋಲ್ ರೂಂ ಮೂಲಕ ಹುಡುಕಾಟದ ಪ್ರಯತ್ನವನ್ನೂ ಮಾಡಲಾಗಿತ್ತು. ಇತ್ತ ಪೋಷಕರು ಮಗಳನ್ನು ಕಾಣದೆ ಕಂಗಾಲಾಗಿದ್ದರು. ಇದರ ನಡುವೆ ಇಂದು ಪೊಲೀಸ್ ಠಾಣೆಗೆ ಅಮನ್ ವಿಹಾರ್ ವಲಯದಲ್ಲಿನ ಕೊಳಚೆ ನೀರು ತುಂಬಿದ್ದ ಕೆರೆಯಲ್ಲಿ ಶವವೊಂದು ತೇಲುತ್ತಿದೆ ಅನ್ನೋ ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಲ್ಲಿ ಮೃತದೇಹ ಹೊರಕ್ಕೆ ತೆಗೆದಿದ್ದಾರೆ. ಈ ವೇಳೆ ಇದು ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮೃತದೇಹ ಅನ್ನೋದು ಖಚಿತವಾಗಿದೆ. ಈ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿನಿ ಹುಡುಕಾಟದ ಜೊತೆಯಲ್ಲಿ ಆಕೆ ಬರೆದ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿರುವ ಕಾರಣ ಮನನೊಂದು ಈ ನಿರ್ಧಾರ ಮಾಡಿರುವುದಾಗಿ ವಿದ್ಯಾರ್ಥಿನಿ ಬರೆದುಕೊಂಡಿದ್ದಾಳೆ.
CBSE Class 12 Result: ತಿರುವನಂತಪುರ ಟಾಪ್, ಬೆಂಗಳೂರಿಗೆ 2ನೇ ಸ್ಥಾನ!
ಕಳೆದ ಫೆಬ್ರವರಿ ಹಾಗೂ ಮಾಚ್‌ರ್‍ನಲ್ಲಿ 10 ಮತ್ತು 12ನೇ ಕ್ಲಾಸ್ ಪರೀಕ್ಷೆಯನ್ನು ನಡೆಸಲಾಗಿತ್ತು. ಶುಕ್ರವಾರ ಸಿಬಿಎಸ್‌ಇ 10 ಹಾಗೂ 12ನೇ ಕ್ಲಾಸ್ ಫಲಿತಾಂಶವೂ ಪ್ರಕಟವಾಗಿತ್ತು. ಕಳೆದ ಸಲಕ್ಕಿಂತ ಫಲಿತಾಂಶ ಕ್ರಮವಾಗಿ ಶೇ.1 ಹಾಗೂ ಶೇ.5ರಷ್ಟುಇಳಿದಿತ್ತು. ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಎರಡೂ ಫಲಿತಾಂಶಗಳು ಶುಕ್ರವಾರ ಹೊರಬಿದ್ದಿದ್ದು, ಬೆಂಗಳೂರು ಪ್ರಾದೇಶಿಕ ವಿಭಾಗವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯ ಮಟ್ಟದಲ್ಲಿ ಕರ್ನಾಟಕ 6ನೇ ಸ್ಥಾನ ಪಡೆದುಕೊಂಡಿದೆ.