ಕಲಬುರಗಿ: ಸಿದ್ಧತೆ ಇಲ್ಲದೆ ಗಾಂಜಾ ಗ್ಯಾಂಗ್‌ ಬೆನ್ನಟ್ಟಿತೆ ಕಲಬುರಗಿ ಖಾಕಿ ಪಡೆ?

By Kannadaprabha NewsFirst Published Sep 25, 2022, 12:15 PM IST
Highlights

ಪೂರ್ವಾಪರ ಗೊತ್ತಿರದ ಮಹಾ ಗಡಿಯಲ್ಲಿನ ಗಾಂಜಾ ಹೊಲಕ್ಕೆ ಹೋಗೋದು ತುಂಬ ರಿಸ್ಕಿ ಅಂತ ಪೊಲೀಸರಿಗೆ ಗೊತ್ತಾಗಲಿಲ್ಲ ಯಾಕೆ?

ಶೇಷಮೂರ್ತಿ ಅವಧಾನಿ

ಕಲಬುರಗಿ(ಸೆ.25): ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ತುಂಬ ಕ್ರಿಯಾಶೀಲವಾಗಿರುವ ಖತರ್‌ನಾಕ್‌ ಗಾಂಜಾಗ್ಯಾಂಗ್‌ ಬೇಟೆಗೆ ತೆರಳುವ ಮುನ್ನ ಕಲಬುರಗಿ ಪೊಲೀಸ್‌ ತಕ್ಕಮಟ್ಟಿನ ಹೋಮ್‌ವರ್ಕ್ ಮಾಡಿದ್ದರೆ?. ಗಾಂಜಾ ದಂಧೆಕೋರರ ಹೆಡಮುರಿ ಕಟ್ಟಲು ಹೋಗಿ ಕಪಾಳ ಮೋಕ್ಷಕ್ಕೊಳಗಾಗಿರುವ ಕಲಬುರಗಿ ಖಾಕಿ ಪಡೆ ಎದುರಿಸಿರುವ ಕಪಾಳಮೋಕ್ಷ ಪ್ರಸಂಗ ಇಂತಹದ್ದೊಂದು ಪ್ರಶ್ನೆ ಹುಟ್ಟುಹಾಕಿದೆ.

ಕಮಲಾಪುರ ಭಾಗದಿಂದ ಮೂರು ದಿನಗಳಿಂದ ಗಾಂಜಾ ಮಾರಾಟಗಾರರ ಬಂಧನ ಸುದ್ದಿ ಬರ್ತಾನೇ ಇತ್ತು. ಸೆರೆ ಸಿಕ್ಕವರಲ್ಲಿ ಕಲಬುರಗಿ ಮೂಲದ ನವೀನ್‌ ತಾನು ಮಹಾರಾಷ್ಟ್ರ ಗಡಿಯಲ್ಲಿರೋ ಹೊನ್ನಳ್ಳಿಯಿಂದ ಗಾಂಜಾ ತಂದಿರೋದಾಗಿ ಬಾಯಿ ಬಿಟ್ಟಿದ್ದೇ ತಡ ಸಿಪಿಐ ಶ್ರೀಮಂತ ಇಲ್ಲಾಳ ಗಾಂಜಾ ಮೂಲ ಜಾಲಾಡುವ ಸಂಕಲ್ಪ ಮಾಡಿ ತಮ್ಮೊಂದಿಗೆ ಮಹಾಗಾಂವ್‌ನ ಮಹಿಳಾ ಪಿಎಸ್‌ಐ ರಾಠೋಡ, ಮಹಿಳಾ ಪೇದೆ ಸೇರಿದಂತೆ 10 ಜನ ಸಿಬ್ಬಂದಿ ಜೊತೆ ಇಲ್ಲಿಂದ ಹೊರಟವರೇ ಗ್ಯಾಂಗ್‌ ಸದಸ್ಯರ ಹುಡುಕಿ ಹೆಡಮುರಿ ಕಟ್ಟೋ ಬದಲು ತಾವೇ ಥಳಿತಕ್ಕೊಳಗಾಗಿ ಜೀವನ್ಮರಣ ಹೋರಾಟ ಎದುರಿಸುವಂತಾಗಿರೋದು ಜಿಲ್ಲಾ ಪೊಲೀಸ್‌ ಇತಿಹಾಸದಲ್ಲಿ ಬಹುದೊಡ್ಡ ದುರಂತದ ಪ್ರಸಂಗವಾಗಿ ದಾಖಲಾಗಿದೆ.

ಗಾಂಜಾ ಮಾಫಿಯಾದಿಂದ ದಾಳಿ: ಕಲಬುರಗಿ ಇನ್ಸ್‌ಪೆಕ್ಟರ್‌ ಗಂಭೀರ..!

‘ಕನ್ನಡಪ್ರಭ’ ಸದರಿ ಘಟನೆ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದಾಗ ಎಲ್ಲರೂ ಆಗಿರುವ ಘಟನೆ ಬಗ್ಗೆ ತುಂಬ ಮರುಕ ಪಡುವುದರ ಜೊತೆಗೇ ಇಂತಹ ದಾಳಿಗೂ ಪೂರ್ವದಲ್ಲಿ ಹೋಮ್‌ವರ್ಕ್ ಮಾಡಿಕೊಳ್ಳೋದು ಮುಖ್ಯ. ಇಲ್ಲಾಳ್‌ ಹಲ್ಲೆಗೊಳಗಾದ ಪ್ರಸಂಗದಲ್ಲಿ ಪೂರ್ವಸಿದ್ಧತೆ ಕೊರತೆ ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು.

ಗೊತ್ತಿಲ್ಲದ ಪ್ರದೇಶದಲ್ಲಿ ರಾತ್ರಿ ದಾಳಿ ರಿಸ್ಕಿ:

ಕ್ರಿಮಿನಲ್‌ಗಳ ಚಲನವಲನ ಗಮನಿಸಿಯೇ ಪೊಲೀಸರು ಕಾರ್ಯಾಚರಣೆಗೆ ಮುಂದಾಗೋದು. ಅದರಲ್ಲೂ ಗಾಂಜಾ ಬೆಳೆಯೋ ಹೊಲಗದ್ದೆ, ಅದೂ ಮಹಾರಾಷ್ಟ್ರದಲ್ಲಿರೋ ಊರುಗಳೆಂದ ಮೇಲೆ ಅಲ್ಲಿನ ಭೌಗೋಳಿಕ ಸಂಗತಿ, ಗಾಂಜಾ ಬೆಳಯೋರ ಬಗ್ಗೆ ಪೂರ್ವಾಪರ ಮಾಹಿತಿ, ಅಲ್ಲಿನ ಸ್ಥಳೀಯ ಪೊಲೀಸರ ಸಹಕಾರ ಕೋರೋದು ದಾಳಿಗೂ ಮುನ್ನ ಅನುಸರಿಸಬೇಕಾದ ಕ್ರಮ.

ಲಭ್ಯ ಮಾಹಿತಿಗಳ ಪ್ರಕಾರ ಈ ಪ್ರಕರಣದಲ್ಲಿ ಪೊಲೀಸರು ಅಲ್ಲಿಗೆ ತೆರಳುವ ಮುನ್ನ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸರೊಂದಿಗೆ ಸಂಪರ್ಕಿಸಿದಾಗ ತಮಗೆ ಗೊತ್ತಿರುವ ಅಲ್ಲಿನ ಕೆಲವು ಸಂಗತಿಗಳನ್ನು ಅವರು ಹೇಳುತ್ತ ರಾತ್ರಿ ಹೋಗೋದು ಬೇಡ, ಬೆಳಗ್ಗೆ ಕಾರ್ಯಾಚರಣೆಗೆ ಸಲಹೆ ನೀಡಿದ್ದರೂ ಇದ್ಯಾವುದನ್ನೂ ಪರಿಗಣಿಸದ ಕಲಬುರಗಿ ಖಾಕಿಪಡೆ ತರೂರಿಗೆ ಹೋಗಿತ್ತು ಎನ್ನಲಾಗಿದೆ.

ಇನ್ನು ಇಲ್ಲಿಂದ ತೆರಳುವ ಮುನ್ನವೇ ಉಮರ್ಗಾ ಪೊಲೀಸರಿಗೆ ಮಾಹಿತಿ ಕೊಟ್ಟು ನೆರವು ಕೇಳಬೇಕಿತ್ತು. ಹಲವು ಕಾರಣಗಳಿಂದಾಗಿ ಈ ಕೆಲಸ ತಂಡ ಮಾಡಿಲ್ಲವೆಂದು ತಿಳಿಯೋದಾದರೂ ಹೆಚ್ಚಿನ ಬಲದೊಂದಿಗೆ ಯಾಕೆ ಅಲ್ಲಿಗೆ ತೆರಳಲಿಲ್ಲ? ಗಾಂಜಾ ಗ್ಯಾಂಗ್‌ ಖತರ್‌ನಾಕ್‌ ಎಂದು ಗೊತ್ತಾಗಿದ್ದರೂ ಅದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಲೇ ಇಲ್ಲ ಯಾಕೆ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್‌..?

ಮೂಲಗಳ ಪ್ರಕಾರ ಕಲಬುರಗಿ ಪೊಲೀಸರು ತರೂರು ತಲುಪಿದಾಗ ಸಂಜೆ 6 ಗಂಟೆ. ಈ ಹೊತ್ತಿಗೆ ಇನ್ನೂ ಬೆಳಕಿರುತ್ತದೆ. ಬೆಳಕಿರುವಾಗಲೇ ತಮ್ಮ ಕೆಲಸ ಮಾಡಿ ಮುಗಿಸಬೇಕಿತ್ತು. ಆದರಿಲ್ಲಿ ಹಾಗಾಗಿಲ್ಲ, ಉಮರ್ಗಾ ಪೊಲೀಸರಿಗಾಗಿ ಗಾಂಜಾ ಅಡ್ಡೆಯಾಗಿರೋ ಹೊಲದಲ್ಲೇ ಕಲಬುರಗಿ ಪೊಲೀಸರು ಕಾದು ಕುಳಿತುಕೊಂಡಿದ್ದೇ ಎಡವಟ್ಟಿಗೆ ಕಾರಣವಾಗಿದೆ. ಇದೇ ಸಮಯಕ್ಕಾಗಿ ಕಾದು ಕುಳಿತಂತಿದ್ದ ಗಾಂಜಾ ದಂಧೆಕೋರರು ರಾತ್ರಿ ಕಗ್ಗತ್ತಲು ಆವರಿಸುತ್ತಿದ್ದಂತೆಯೇ ಒಬ್ಬೊಬ್ಬರೆ ಹೊಲದಲ್ಲಿ ಗುಟ್ಟಾಗಿ ಜಮಾಯಿಸಿ ನೂರಾರು ಸಂಖ್ಯೆಯಲ್ಲಿ ಸೇರಿ ಏಕಾಏಕಿ ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ.

ಮಹಿಳಾ ಪೊಲೀಸರು ಸ್ವಲ್ಪದರಲ್ಲೇ ಬಚಾವ್‌!

ಗಾಂಜಾ ಗಾಂಗ್‌ ದಾಳಿ ಅದೆಷ್ಟುತೀವ್ರಾವಾಗಿತ್ತೆಂದರೆ ಸಿಪಿಐ ಇಲ್ಲಾಳರ ಸರ್ವಿಸ್‌ ರಿವಾಲ್ವರ್‌ ಸಹ ಗ್ಯಾಂಗ್‌ ಕಿತ್ತುಕೊಂಡು ಪರಾರಿಯಾಗಿರೋದು ಗಾಂಜಾ ಮಾಫಿಯಾದವರು ನಡೆಸಿರೋ ದಾಳಿಯ ತೀವ್ರತೆಗೆ ಕನ್ನಡಿ ಹಿಡಿದಿದೆ. ಪೊಲೀಸ್‌ ತಂಡದಲ್ಲಿದ್ದ ಮಹಿಳಾ ಪಿಎಸ್‌ಐ, ಪೇದೆ ಹಾಗೂ ಇನ್ನೂ ಕೆಲವರು ಹೊಲದಿಂದ ತುಸು ಆಚೆ ಹೋಗುವಷ್ಟರಲ್ಲೇ ಗಾಂಗ್‌ ದಾಳಿ ಮಾಡಿದೆ. ಹೀಗಾಗಿ ಇವರೆಲ್ಲರೂ ಸ್ವಲ್ಪದರಲ್ಲೇ ಭೀಕರ ದಾಳಿಯಿಂದ ಬಚಾವಗಿದ್ದಾರೆ. ಸಿಪಿಐ ಶ್ರೀಮಂತ ಇಲ್ಲಾಳ, ಪೇದೆಗಳಾದ ನಾಗರಾಜ್‌, ಕುಪೇಂದ್ರ, ರೆಡ್ಡಿ ಮಾತ್ರ ಹೊಲದಲ್ಲಿದ್ದರು. ದಾಳಿಕೋರರು ಇಲ್ಲಾಳ ಸೇರಿದಂತೆ ಎಲ್ಲರನ್ನು ಥಳಿಸಿದ್ದರೂ ಪೇದೆಗಳು ಹಲವರು ಅಲ್ಲಿಂದ ಬಚಾವ್‌ ಆಗಿರೋದು ಅದೃಷ್ಟ.

ಪಿಎಸ್‌ಐ ಬಂಡೆ ಸಾವಿನ ಘಟನೆ ನಂತರ ಮತ್ತೊಂದು ದುರಂತ ಘಟನೆ!

2014ರ ಜ.8ರಂದು ಕಲಬುರಗಿ ನಗರದಲ್ಲಿ ರೋಜಾ ಠಾಣೆ ವಾಪ್ತಿಲ್ಲಿ ನಡೆದ ಸುಪಾರಿ ಕಿಲ್ಲರ್‌ ಮುನ್ನಾ ದರ್ಬಾರಿ ಶೂಟೌಟ್‌ ಪ್ರಕರಣದಲ್ಲಿ ಸ್ಟೇಷನ್‌ ಬಜಾರ್‌ ಠಾಣೆ ಪಿಎಸ್‌ಆ ಆಗಿದ್ದ ಮಲ್ಲಿಕಾರ್ಜುನ ಬಂಡೆ ಗುಂಡೇಟು ತಗುಲಿ ಪ್ರಜ್ಞಾಹೀನರಾಗಿ ವಾರದ ನಂತರ ದಾರುಣ ಸಾವನ್ನಪ್ಪಿದ್ದರು. ಬುಲೆಟ್‌ ಪ್ರೂಫ್‌ ಜಾಕೇಟ್‌ ಯಾಕೆ ಧರಿಸಲಿಲ್ಲ ಎಂದು ಬಂಡೆ ಸಾವಿನ ಪ್ರಕರಣದಲ್ಲೂ ಪೂರ್ವಸಿದ್ಧತೆ ಕೊರತೆಯ ವಿಚಾರಗಳೇ ಚರ್ಚೆಯಲ್ಲಿದ್ದವು. ಇದೀಗ ಗಾಂಜಾ ಗ್ಯಾಂಗ್‌ ವಿರುದ್ಧದ ಶ್ರೀಮಂತ ಇಲ್ಲಾಳ್‌ ನೇತೃತ್ವದ ಪೊಲೀಸ್‌ ತಂಡ ನಡೆಸಿದ ಈ ಕಾರ್ಯಾಚರಣೆಯಲ್ಲೂ ಅವೇ ವಿಚಾರಗಳು ಕೇಳಿ ಬರುತ್ತಿವೆ. ರಾತ್ರಿ ದಾಳಿಯಲ್ಲಿ ಕನಿಷ್ಠ ಪ್ರಖರ ಬ್ಯಾಟರಿ ಸಹ ಪೊಲೀಸರ ಜೊತೆಗಿರಲಿಲ್ಲವಂತೆ! ಸಾಕಷ್ಟು ಫ್ಲಡ್‌ಲೈಟ್‌, ಬುಲೆಟ್‌ ಪ್ರೂಫ್‌ ಜಾಕೆಟ್‌, ಹೆಲ್ಮೆಟ್‌ ಎಲ್ಲವೂ ಇದ್ದರೂ ಪೂರ್ವಸಿದ್ಧತೆ ಇಲ್ಲದೆ ಹೋದರೆ ಹೇಗೆಂಬ ಸಂಗತಿಯೇ ಚರ್ಚೆಗೆ ಬಂದಿದ್ದು ಜಿಲ್ಲೆಯ ಖಾಕಿಪಡೆಗೆ ಮತ್ತೊಮ್ಮೆ ಎಚ್ಚರಿಕೆ ಗಂಟೆಯಂತಾಗಿದೆ.
 

click me!