ಜೈಲಲ್ಲೇ ಪತ್ರಕರ್ತ ಅನಿಲ್‌ ರಾಜ್‌ ಆತ್ಮಹತ್ಯೆ!

By Web DeskFirst Published Oct 17, 2019, 7:28 AM IST
Highlights

ಜೈಲ್‌ನಲ್ಲೇ ಅನಿಲ್‌ರಾಜ್‌ ಆತ್ಮಹತ್ಯೆ| ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ವಾಯ್ಸ್ ಆಫ್‌ ಯಲಹಂಕ ಪತ್ರಿಕೆ ಸಂಪಾದಕ

 ಬೆಂಗಳೂರು[ಅ.17]: ತಮ್ಮ ಮೇಲಿನ ಲೈಂಗಿಕ ಆರೋಪಗಳಿಂದ ಜಿಗುಪ್ಸೆಗೊಂಡು ‘ವಾಯ್‌್ಸ ಆಫ್‌ ಯಲಹಂಕ’ ಪತ್ರಿಕೆ ಸಂಪಾದಕ ಅನಿಲ್‌ರಾಜ್‌ (55) ಅವರು ತಾವು ಬಂಧಿಯಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾರಾಗೃಹದ 4ನೇ ಬ್ಯಾರಕ್‌ನ ಶಿವ ದೇವಾಲಯ ಪಕ್ಕದ ಶೆಡ್‌ನಲ್ಲಿ ಮಂಗಳವಾರ ರಾತ್ರಿ ಬೆಡ್‌ಶೀಟ್‌ನಿಂದ ಅನಿಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ತಕ್ಷಣವೇ ಆತನನ್ನು ರಕ್ಷಿಸಿದ ಜೈಲಿನ ಸಿಬ್ಬಂದಿ ಆವರಣದಲ್ಲಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಜೈಲು ಸಿಬ್ಬಂದಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅನಿಲ್‌ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಶಾಸಕರ ಜತೆ ಜಗಳ:

ಮೃತ ಅನಿಲ್‌ ರಾಜ್‌, ತನ್ನ ಕುಟುಂಬದ ಜತೆ ನೆಲೆಸಿದ್ದರು. ‘ವಾಯ್‌್ಸ ಆಫ್‌ ಯಲಹಂಕ’ ಪತ್ರಿಕೆ ನಡೆಸುತ್ತಿದ್ದ ಅವರನ್ನು ಇತ್ತೀಚಿಗೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯಲಹಂಕ ಪೊಲೀಸರು ಬಂಧಿಸಿದ್ದರು. ಬಳಿಕ ಅವರ ಮೇಲೆ ಮತ್ತೆ ಮೂವರು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಅತ್ಯಾಚಾರ ಕಳಂಕ ಹೊತ್ತು ಜೈಲು ಸೇರಿದ್ದ ಅವರನ್ನು ಮತ್ತೆರೆಡು ಪ್ರಕರಣಗಳಲ್ಲಿ ವಶಕ್ಕೆ ಪಡೆಯಲು ಪೊಲೀಸರು ನ್ಯಾಯಾಲಯದಿಂದ ಬಾಡಿ ವಾರೆಂಟ್‌ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಅನಿಲ್‌ ರಾಜ್‌, ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬರಲಾಗದೆ ಜಿಗುಪ್ಸೆಗೊಂಡಿದ್ದರು. ಈ ಯಾತನೆಯಲ್ಲೇ ಆತ್ಮಹತ್ಯೆ ನಿರ್ಧರಿಸಿರುವ ಅನಿಲ್‌, ತನ್ನ ಬ್ಯಾರೆಕ್‌ ಸಮೀಪದ ಶಿವ ದೇವಾಲಯದ ಪಕ್ಕದ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಲಹಂಕ ಕ್ಷೇತ್ರದ ವಿಚಾರವಾಗಿ ವರದಿ ಪ್ರಟಿಸಿದ ಸಂಬಂಧ ಸ್ಥಳೀಯ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಜತೆ ಅನಿಲ್‌ ರಾಜ್‌ ಗಲಾಟೆ ಮಾಡಿಕೊಂಡಿದ್ದರು. ತಮ್ಮ ವಿರುದ್ಧ ಆಧಾರರಹಿತ ವರದಿ ಪ್ರಕಟಿಸಿ ಅವಮಾನಗೊಳಿಸಿದ್ದಾರೆ ಎಂದು ಆರೋಪಿಸಿ ಶಾಸಕ ವಿಶ್ವನಾಥ್‌, ವಿಧಾನಮಂಡಲದಲ್ಲಿ ಹಕ್ಕು ಚ್ಯುತಿ ಸಹ ಮಂಡಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಪೀಕರ್‌, ಅನಿಲ್‌ ಅವರನ್ನು ವಾಗ್ದಂಡನೆಗೆ ಗುರಿಪಡಿಸಿದ್ದರು. ಈ ವಿವಾದ ಬಳಿಕ ಅತ್ಯಾಚಾರದ ಸುಳಿಗೆ ಸಿಲುಕಿದರು.

ಜೈಲಿನಲ್ಲಿ ಮಂಗಳವಾರ ಸಂಜೆ ಅನಿಲ್‌ ಅವರನ್ನು ಕುಟಂಬ ಸದಸ್ಯರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಅನಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಮ್ಯಾಜಿಸ್ಪ್ರೇಟ್‌ ತನಿಖೆ ನಡೆಯಲಿದೆ. ಅಲ್ಲದೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಕಾರಾಗೃಹ ಅಧಿಕಾರಿಗಳು ಹೇಳಿದ್ದಾರೆ.

click me!