ISIS Recruitment Racket: ಇದಿನಬ್ಬ ಮೊಮ್ಮಗನ ಬೆನ್ನಲ್ಲೇ, ದೀಪ್ತಿ ಮಾರ್ಲ ಕೂಡಾ ಅರೆಸ್ಟ್: ಯಾರೀಕೆ?

By Kannadaprabha News  |  First Published Jan 4, 2022, 5:33 AM IST

* ಉಳ್ಳಾಲ ಮಾಜಿ ಶಾಸಕರ ಮನೆಗೆ ಎನ್‌ಐಎ ದಾಳಿ

* ಐಸಿಸ್‌ ನಂಟು: ಇದಿನಬ್ಬ ಮೊಮ್ಮಗನ ಪತ್ನಿ ಬಂಧನ

* 5 ತಿಂಗಳ ಹಿಂದಷ್ಟೇ ಇದಿನಬ್ಬ ಮೊಮ್ಮಗನ ಅರೆಸ್ಟ್‌


 ಮಂಗಳೂರು(ಜ.04): ಐಸಿಸ್‌ ಉಗ್ರ ಸಂಘಟನೆ ಜತೆಗಿನ ನಂಟಿನ ಆರೋಪದಲ್ಲಿ ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ. ಇದಿನಬ್ಬ ಅವರ ಪುತ್ರ ಬಿ.ಎಂ.ಬಾಷಾ ಮನೆ ಮೇಲೆ ಸೋಮವಾರ ಎರಡನೇ ಬಾರಿ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು, ಬಾಷಾರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್‌ ಮರಿಯಂಳನ್ನು ಬಂಧಿಸಿದ್ದಾರೆ.

ಐದು ತಿಂಗಳ ಹಿಂದಷ್ಟೇ ಬಾಷಾ ಅವರ ಕಿರಿಯ ಮಗ ಅಮ್ಮರ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಈ ಬಾರಿ ಬಾಷಾರ ಇನ್ನೊಬ್ಬ ಪುತ್ರ ಉದ್ಯಮಿ ಅನಾಸ್‌ ಅಬ್ದುಲ್‌ ರೆಹಮಾನ್‌ನ ಪತ್ನಿ ಮರಿಯಂಳನ್ನು ಬಂಧಿಸಿದ್ದಾರೆ.

Tap to resize

Latest Videos

ವಿಚಾರಣೆಗೆ ದೆಹಲಿಗೆ:

ಉಳ್ಳಾಲದ ಮಾಸ್ತಿಕಟ್ಟೆಎಂಬಲ್ಲಿರುವ ಬಿ.ಎಂ.ಬಾಷಾ ಮನೆಗೆ ದೆಹಲಿಯಿಂದ ಬಂದಿದ್ದ ಎನ್‌ಐಎ ತನಿಖಾಧಿಕಾರಿ ಡಿಎಸ್ಪಿ ಕೃಷ್ಣಕುಮಾರ್‌ ನೇತೃತ್ವದ ಮೂವರು ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬೆಳಗ್ಗೆ ದಾಳಿ ನಡೆಸಿದೆ. ಮಧ್ಯಾಹ್ನದವರೆಗೆ ಮರಿಯಂಳನ್ನು ವಿಚಾರಣೆ ನಡೆಸಿದ್ದು, ಬಳಿಕ ಬಂಧಿಸಿದೆ. ಆನಂತರ ಆಕೆಯನ್ನು ಮಂಗಳೂರಿನ ವೆನ್‌ಲಾಕ್‌ ಜಿಲ್ಲಾಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಿದೆ. ನಗರದ 7ನೇ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲು ಒಪ್ಪಿಗೆ ಪಡೆದು ತೆರಳಿದೆ.

ಉಗ್ರ ಜಾಲದ ಭಾಗ:

ಭಾರತದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸ್ಥಾಪಿಸುವ ಗುರಿಯೊಂದಿಗೆ ಯುವಕರನ್ನು ಐಸಿಸ್‌ಗೆ ಸೇರಿಸಿಕೊಳ್ಳುವ ಜಾಲ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದೆ. ಅದರಂತೆ ಉಗ್ರಕೃತ್ಯಗಳಲ್ಲಿ ತೊಡಗುವಂತೆ ಯುವಕರನ್ನು ಪ್ರಚೋದಿಸಲು ಜಾಲತಾಣದಲ್ಲಿ ಸೀಮಿತ ಗುಂಪಿಗೆ ಚಾನಲ್‌ಗಳನ್ನು ಮಾಡಿ ಪ್ರಚಾರವನ್ನೂ ನಡೆಸಲಾಗುತ್ತಿದೆ. ಅಲ್ಲದೆ ಉಗ್ರ ಕೃತ್ಯಕ್ಕಾಗಿ ಧನ ಸಂಗ್ರಹದ ಕೆಲಸವೂ ಈ ಮೂಲಕ ನಡೆಯುತ್ತಿದೆ. ಬಂಧಿತ ಮರಿಯಂ ಕೂಡ ಈ ಗುಂಪಿನ ಭಾಗ ಎನ್ನಲಾಗಿದೆ. ದೇಶಾದ್ಯಂತ ಹರಡಿಕೊಂಡಿರುವ ಐಸಿಸ್‌ ಜಾಲದ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಮರಿಯಂಳ ಹೆಚ್ಚಿನ ವಿಚಾರಣೆ ಬಳಿಕ ಖಚಿತ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

ಕಳೆದ ಬಾರಿಯೇ ಅನುಮಾನ ಬಂದಿತ್ತು!

ಐದು ತಿಂಗಳ ಹಿಂದೆ ಆಗಸ್ವ್‌ ಮೊದಲ ವಾರ ಬಾಷಾ ಮನೆ ಮೇಲೆ ದಾಳಿ ನಡೆಸಿದ್ದ ಎನ್‌ಐಎ ತಂಡ, 2 ದಿನಗಳ ವಿಚಾರಣೆ ಬಳಿಕ ಬಾಷಾರ ಕಿರಿಯ ಪುತ್ರ ಅಮ್ಮರ್‌ನನ್ನು ಬಂಧಿಸಿತ್ತು. ಈ ವೇಳೆ ಮರಿಯಂ ಮೇಲೂ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಆದರೆ ಆಗ ಮರಿಯಂಗೆ ಸಣ್ಣ ಮಗುವಿದ್ದ ಕಾರಣ ಕೇವಲ ವಿಚಾರಣೆ ನಡೆಸಿ ಬಿಟ್ಟಿದ್ದರು. ಆದರೆ ಈ ಅವಧಿಯುದ್ದಕ್ಕೂ ತನಿಖೆಯ ಜಾಡು ಹಿಡಿದು ಸಾಗಿದ ಎನ್‌ಐಎ ಅಧಿಕಾರಿಗಳು, ಐಸಿಸ್‌ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಆರೋಪದಲ್ಲಿ ಕೊನೆಗೂ ಆಕೆಯನ್ನು ಬಂಧಿಸಿದ್ದಾರೆ.

ಯಾರೀಕೆ ದೀಪ್ತಿ ಮಾರ್ಲ?

ಮೂಲತಃ ಕೊಡಗಿನವಳಾದ ದೀಪ್ತಿ ಮಾರ್ಲ 10 ವರ್ಷಗಳ ಹಿಂದೆ ದೇರಳಕಟ್ಟೆಕಾಲೇಜಿನಲ್ಲಿ ಬಿಡಿಎಸ್‌ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಬಿ.ಎಂ. ಬಾಷಾ ಅವರ ಪುತ್ರ ಅನಾಸ್‌ನ ಜತೆ ಪ್ರೀತಿ ಮೂಡಿದ್ದು, ಬಳಿಕ ಮುಸ್ಲಿಂ ಆಗಿ ಮತಾಂತರಗೊಂಡು ವಿವಾಹವಾಗಿದ್ದಳು. ವಿವಾಹದ ಬಳಿಕ ಇಸ್ಲಾಮಿಕ್‌ ಮೂಲಭೂತವಾದಿಯಾಗಿ ಬದಲಾಗಿದ್ದ ದೀಪ್ತಿ ಮಾರ್ಲ ಅಲಿಯಾಸ್‌ ಮರಿಯಂ, ಉಗ್ರ ಸಂಘಟನೆ ಐಸಿಸ್‌ನೊಂದಿಗೆ ನಂಟು ಬೆಳೆಸಿಕೊಂಡಿದ್ದಳು ಎಂದು ಹೇಳಲಾಗಿದೆ. ಭಾರತದ ವಿವಿಧೆಡೆ ಇರುವ ಐಸಿಸ್‌ ಜಾಲದೊಂದಿಗೆ ಸಂಪರ್ಕ ಸಾಧಿಸಿ ಉಗ್ರ ಕೃತ್ಯಕ್ಕೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಳು. ಈ ಕುರಿತು ಬಲವಾದ ಸಾಕ್ಷ್ಯಗಳನ್ನು ಕಲೆಹಾಕಿದ ಎನ್‌ಐಎ ಅಧಿಕಾರಿಗಳು ಕೊನೆಗೂ ಆಕೆಯನ್ನು ಬಂಧಿಸಿದ್ದಾರೆ.

ಉಗ್ರ ನಂಟಿನ ಜಾಡು ಹಿಡಿದದ್ದು ಹೇಗೆ?

ಕೆಲ ವರ್ಷಗಳ ಹಿಂದೆ ಬಾಷಾರ ಪುತ್ರಿ ಅಜ್ಮಲ್‌ನ ಕುಟುಂಬ ದಿಢೀರ್‌ ನಾಪತ್ತೆಯಾಗುವುದರೊಂದಿಗೆ ಈ ಕುಟುಂಬದ ಉಗ್ರ ನಂಟಿನ ಮೇಲೆ ಎನ್‌ಐಎಗೆ ಅನುಮಾನ ಮೂಡಿತ್ತು. ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್‌ ಜತೆ ಅಜ್ಮಲ್‌ ವಿವಾಹವಾಗಿತ್ತು. ಬಳಿಕ ಈ ದಂಪತಿ ಸಿರಿಯಾಕ್ಕೆ ಹೋಗಿ ಐಸಿಸ್‌ ಸೇರಿದ್ದಾರೆಂದು ಶಂಕಿಸಲಾಗಿದೆ. ಅಲ್ಲದೆ, ವೈದ್ಯನಾಗಿದ್ದ ಸಿಯಾಝ್‌ನ ಸಹೋದರ ಕೂಡ ಕುಟುಂಬದೊಂದಿಗೆ ಸಿರಿಯಾಕ್ಕೆ ತೆರಳಿದ್ದ. ಈ ಬಗ್ಗೆ ಕೇರಳದ ಗುಪ್ತಚರ ಇಲಾಖೆ, ಎನ್‌ಐಎ ತನಿಖೆ ಆರಂಭಿಸಿತ್ತು. ತನಿಖೆಯ ಭಾಗವಾಗಿ ಅಜ್ಮಲ್‌ ತಂದೆ ಬಾಷಾ ಮನೆ ಮೇಲೆ 2 ಬಾರಿ ದಾಳಿ ನಡೆಸಲಾಗಿದೆ.

click me!