
ಬೆಂಗಳೂರು (ಜೂ.01): ರಾಜಧಾನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಂಗ್ ಕಮಾಂಡರ್ ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆ ಮಾಡಿದ್ದ ಘಟನೆ ಹಸಿರಾಗಿರುವಾಗಲೇ ಮತ್ತೊಂದು ರೋಡ್ ರೇಜ್ ಘಟನೆ ನಡೆದಿದೆ. ಉತ್ತರ ಭಾರತೀಯ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಕನ್ನಡಿಗ ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯ ವರ್ತನೆಗೆ ನೆಟ್ಟಿಗರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬೆಳ್ಳಂದೂರು ವೃತ್ತದಲ್ಲಿ ಶನಿವಾರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ಘಟನೆ ಸಂಬಂಧ ದೊಡ್ಡಸೋಮನಹಳ್ಳಿ ನಿವಾಸಿಯಾಗಿರುವ ಆಟೋ ಚಾಲಕ ಲೋಕೇಶ್, ಅಪರಿಚಿತ ಮಹಿಳೆ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ವಿವರ: ಆಟೋ ಚಾಲಕ ಲೋಕೇಶ್ ಬೆಳ್ಳಂದೂರು ವೃತ್ತದಲ್ಲಿ ತೆರಳುವಾಗ ಬಲಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮಹಿಳೆ ಏಕಾಏಕಿ ದ್ವಿಚಕ್ರ ವಾಹನ ನಿಲ್ಲಿಸಿ, ಏಕೆ ದ್ವಿಚಕ್ರ ವಾಹನಕ್ಕೆ ಆಟೋ ತಾಗಿಸಿದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾನು ದ್ವಿಚಕ್ರ ವಾಹನಕ್ಕೆ ಆಟೋ ತಾಕಿಸಿಲ್ಲ ಎಂದರೂ ಕೇಳದ ಆ ಮಹಿಳೆ ಆಟೋ ಚಾಲಕನೊಂದಿಗೆ ವಾಗ್ವಾದ ಮಾಡಿದ್ದಾರೆ. ಬಳಿಕ ಆಟೋ ಚಾಲಕ ಲೋಕೇಶ್ ಆ ಮಹಿಳೆ ನಿಂದಿಸುವುದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮತ್ತಷ್ಟು ರೊಚ್ಚಿಗೆದ್ದ ಮಹಿಳೆ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದಾರೆ. ಬಳಿಕ ಏಕಾಏಕಿ ತನ್ನ ಚಪ್ಪಲಿ ತೆಗೆದು ಹಲವು ಬಾರಿ ಆಟೋ ಚಾಲಕ ಲೋಕೇಶ್ ಮೇಲೆ ಹಲ್ಲೆ ಮಾಡಿ ರಂಪಾಟ ಮಾಡಿದ್ದಾರೆ.
ಹಲವು ಬಾರಿ ಚಪ್ಪಲಿಯಿಂದ ಹಲ್ಲೆ: ಮಹಿಳೆಯ ಚಪ್ಪಲಿಯಲ್ಲಿ ಹಲ್ಲೆ ಮಾಡುವುದನ್ನು ನೋಡಿದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಮಹಿಳೆಯನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದರೂ ಆಕೆ ಆಟೋ ಚಾಲಕ ಲೋಕೇಶ್ ಅವರನ್ನು ನಿಂದಿಸುವುದನ್ನು ಮುಂದುವರೆಸಿದ್ದಾರೆ. ಸಾರ್ವಜನಿಕರು ಏನೇ ಇದ್ದರೂ ಪೊಲೀಸರಿಗೆ ತಿಳಿಸಿ ಎಂದರೂ ಕೇಳದ ಆ ಮಹಿಳೆ ಮತ್ತೆ ಆಟೋ ಚಾಲಕ ಲೋಕೇಶ್‌ಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ.
ನನ್ನದೇನೂ ತಪ್ಪಿಲ್ಲ: ಬಳಿಕ ಸ್ಥಳೀಯರ ಸಲಹೆ ಮೇರೆಗೆ ಆಟೋ ಚಾಲಕ ಲೋಕೇಶ್ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆ ಚಪ್ಪಲಿಯಿಂದ ಹಲ್ಲೆ ಮಾಡುವ ಹಾಗೂ ನಿಂದಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಾನು ಆ ಮಹಿಳೆಯ ದ್ವಿಚಕ್ರ ವಾಹನಕ್ಕೆ ತಾಕಿಸಿಲ್ಲ. ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಬಹುದು. ನಾನು ಏನೂ ತಪ್ಪು ಮಾಡದಿದ್ದರೂ ಆ ಮಹಿಳೆ ಹಲ್ಲೆ ಮಾಡಿ ನಿಂದಿಸಿದ್ದಾರೆ ಎಂದು ಲೋಕೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಆಟೋ ಚಾಲಕ ಲೋಕೇಶ್ ಅವರ ದೂರು ಆಧರಿಸಿ ಅಪರಿಚಿತ ಮಹಿಳೆಯ ವಿರುದ್ಧ ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಡಿಯೋದಲ್ಲಿ ಸೆರೆಯಾದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಮಹಿಳೆಯ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಶೀಘ್ರದಲ್ಲೇ ಆಕೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ