Bengaluru- ಯುವತಿ ಸಾವಿಗೆ ಕಾರಣವಾದ ಕಾರು ಚಾಲಕ ಅರೆಸ್ಟ್‌: ಬಿಬಿಎಂಪಿ ಅಧಿಕಾರಿಗಳ ಅರೆಸ್ಟ್‌ ಯಾವಾಗ?

By Sathish Kumar KH  |  First Published May 22, 2023, 5:06 PM IST

ಬೆಂಗಳೂರಿನ ಕೆ.ಆರ್. ಸರ್ಕಲ್‌ ಬಳಿಯ ಅಂಡರ್‌ಪಾಸ್‌ನ ನೀರಿನಲ್ಲಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ಚಾಲಕನನ್ನು ಬಂದಿಸಲಾಗಿದೆ.


ಬೆಂಗಳೂರು (ಮೇ 22): ಕೆ.ಆರ್. ಸರ್ಕಲ್‌ ಬಳಿಯ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಡೆಯಾಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿ ಸಹೋದರ ಕಾರಿನ ಚಾಲಕ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಲೂಸರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಬೆನ್ನಲ್ಲೇ ನಿನ್ನೆ ಸುಳ್ಳು ಕಥೆ ಕಟ್ಟಿದ್ದ ಕಾರು ಚಾಲಕ ಹರೀಶ್‌ ಅವರನ್ನು ಪೊಲೀಸರು ಬಂಧಿಸಿದ್ದು, ಈಗ ಬಿಬಿಎಂಪಿ ಅಧಿಕಾರಿಗಳನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಜನರು ಕೇಳುತ್ತಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಮಳೆಯಿಂದ ಕೆ.ಆರ್. ಸರ್ಕಲ್‌ ಬಳಿಯ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಡೆಯಾಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿ ಭಾನುರೇಖಾ (22) ಸಹೋದರ ಸಂದೀಪ್‌ ಅವರು ಹಲೂಸರು ಪೊಲೀಸ್‌ ಠಾಣೆಯಲ್ಲಿ ಕಾರಿನ ಚಾಲಕ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಆದರೆ, ಯುವತಿ ಸಾವಿನ ಘಟನೆಗೆ ಸಂಬಂಧಿಸಿದಂತೆ ನಾನು ಬೇಡವೆಂದರೂ ಕಾರು ಚಲಾಯಿಸುವಂತೆ ಕುಟುಂಬ ಸದಸ್ಯರೇ ತಿಳಿಸಿದ್ದರು ಎಂದು ಹೇಳಿದ KA 05 AG 4457 ನಂಬರ್ ಕಾರಿನ ಚಾಲಕ ಹರೀಶ್‌ ಅವರನ್ನು ಬಂಧಿಸಲಾಗಿದೆ. 

Tap to resize

Latest Videos

Bengaluru: ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು

ಎಫ್‌ಐಆರ್‌ನಲ್ಲಿ ಏನೇನಿದೆ? : ಮೃತ ಭಾನುರೇಖಾ ಸೇರಿದಂತೆ ಅಜ್ಜಿ ಸಾಮ್ರಾಜ್, ತಾಯಿ ಸ್ವರೂಪ, ಸಂಬಂಧಿಗಳಾದ ಸೋಹಿತಾ, ಸವಿತಾ ಸೇರಿ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿದ್ದೆವು. ಬೆಳಿಗ್ಗೆ 8 ಗಂಟೆಗೆ ಮಹೇಂದ್ರ ಜೈಲೋ ಕಾರು ಒಂದು ದಿನಕ್ಕೆ ಬುಕ್ ಮಾಡಿದ್ದೆವು. ಮಧ್ಯಾಹ್ನ 3:45 ಕ್ಕೆ ಕಬ್ಬನ್ ಪಾರ್ಕ್ ನೋಡಿಕೊಂಡು ಎಲೆಕ್ಟ್ರಾನಿಕ್ ಸಿಟಿ ಮನೆಗೆ ಹೊರಟಿದ್ದೆವು. ಕಾರಿನ ಹಿಂಭಾಗದ ಸೀಟಿನಲ್ಲಿ ಭಾನುರೇಖಾ ಕುಳಿತಿದ್ದಳು. ಕಾರು ಅಂಡರ್ ಪಾಸ್ ಹೋಗ್ತಾ ಇದ್ದಂತೆ ಬಂದ್‌ ಆಗಿದೆ. ಸ್ಟಾರ್ಟ್ ಮಾಡಲು ಪ್ರಯತ್ನ ಮಾಡಿದ್ರೂ ಸ್ಟಾರ್ಟ್ ಆಗಲಿಲ್ಲ. ಈ ವೇಳೆ ಕೂಗಾಡುತ್ತಾ ಡೋರ್ ಓಪನ್ ಮಾಡಲು ಯತ್ನಿಸಿದೆವು. ಆದರೆ ದುರಾದೃಷ್ಟವಶಾತ್ ಡೋರ್ ಕೂಡ ಓಪನ್ ಆಗಲಿಲ್ಲ. ನಂತರ ನಾನು ಕಾಲಿನಿಂದ ಕಾರು ಗ್ಲಾಸ್ ಹೊಡೆದು ಹೊರಗಡೆ ಬಂದು ಸಾರ್ವಜನಿಕರ ಸಹಾಯಕ್ಕೆ ಬೇಡಿಕೊಂಡೆನು. ಆಗ ಜನರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ನಮ್ಮನ್ನು ರಕ್ಷಣೆ ಮಾಡಲಾಯಿತು. 

ಬಿಬಿಎಂಪಿ ಅಧಿಕಾರಿಯ ಮೇಲೆ ಕ್ರಮವಿಲ್ಲ: ಆದರೆ, ಈ ವೇಳೆ ಭಯಗೊಂಡು ಭಾನುರೇಖಾ ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದರು. ತಕ್ಷಣವೇ ಆಟೋದಲ್ಲಿ ಭಾನುರೇಖಾನ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬಂದಿದ್ದೇ ವೈದ್ಯರು ನೋಡಿದಾಗ ಭಾನುರೇಖಾ ಸಾವನ್ನಪ್ಪಿದ್ದರು. ಈ ಘಟನೆಗೆ ಬಿಬಿಎಂಪಿ ಹಾಗೂ ಕಾರು ಚಾಲಕರೇ ನೇರ ಕಾರಣವೆಂದು ದೂರು ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಹಲಸೂರು ಗೇಟ್ ಪೊಲೀಸರು ನಂತರ ಎಫ್‌ಐಆರ್‌ ದಾಖಲಿಸಿಕೊಂಡು ಬಂಧಿಸಿದ್ದಾರೆ.  ಆದರೆ, ಬಿಬಿಎಂಪಿ ನಿರ್ಲಕ್ಷ್ಯತನ ಇದ್ದರೂ ಯಾವುದೇ ಅಧಿಕಾರಿಯ ಮೇಲೆ ಕ್ರಮವಾಗಿಲ್ಲ.

Bengaluru Rain:ಮಹಾಮಳೆಗೆ ಸಿಲುಕಿ ಯುವತಿ ಸಾವು: ಪ್ರವಾಸಕ್ಕೆ ಬಂದವಳು ದುರಂತ ಅಂತ್ಯ

ಪೊಲೀಸರ ಮುಂದೆ ನೋವು ತೋಡಿಕೊಂಡ ಚಾಲಕ ಹರೀಶ್‌: ಕಾರು ಚಾಲಕ ಹರೀಶ್ ನ ವಿಚಾರಣೆ ಮಾಡಿದ ಹಲಸೂರು ಗೇಟ್ ಪೊಲೀಸರ ಮುಂದೆ ಕಾರು ಚಾಲಕ ನೋವು ತೋಡಿಕೊಂಡಿದ್ದಾನೆ. ಅಂಡರ್‌ಪಾಸ್‌ನಲ್ಲಿ ಹೋಗುವಾಗ ಸಡನ್‌ ಆಗಿ ಕಾರು ಆಫ್‌ ಆಯಿತು. ಪುನಃ ಸ್ಟಾರ್ಟ್‌ ಆಗಲೇ ಇಲ್ಲ. ಆಗ ನೀರು ಕಾರಿನಲ್ಲಿ ಮುಳುಗಲು ಆರಂಭವಾಯಿತು. ನಾನು ಡೋರ್‌ ತೆಗೆಯಲು ಪ್ರಯತ್ನ ಮಾಡಿದರೂ ಆಗಲಿಲ್ಲವಾದ್ದರಿಂದ ಕಾರಿನ ಕಿಟಕಿ ಗಾಜನ್ನು ಒಡೆದು ಹೊರಬಂದೆನು. ನಂತರ ಎಲ್ಲರನ್ನು ಬದುಕಿಸೋದಕ್ಕೆ ತುಂಬಾ ಪ್ರಯತ್ನ ಮಾಡಿದೆ ಆಗಲಿಲ್ಲ.  ನೀರು ಕಾರಿನ ತುಂಬ ತುಂಬಿದ್ದ ಕಾರಣಕ್ಕೆ ದಿಢೀರಾಗಿ ರಕ್ಷಣೆ ಮಾಡಲು ಆಗಲಿಲ್ಲ. ಆದರೂ ಗ್ಲಾಸ್ ಹೊಡೆದ ಬಳಿಕ ಮುಂದೆ ಇದ್ದವರನ್ನು ಹೊರಗೆ ಎಳೆದುಕೊಳ್ಳಲಾಯಿತು. ಆದರೆ, ಭಾನುರೇಖಾ ಹಿಂದಿನ ಸೀಟಿನಲ್ಲಿದ್ದರಿಮದ ನೀರು ಸೇರಿಕೊಂಡು ಅದೇ ನೀರನ್ನು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ನಂತರ ಎಲ್ಲರೂ ಬಂದು ರಕ್ಷಣೆ ಮಾಡಿದರು. ಆದರೂ, ಯುವತಿ ಅಷ್ಟೋತ್ತಿಗೆ ಸಾವನ್ನಪ್ಪಿದ್ದರು. ನೀರು ಇದೆ ಅಂದಾಗ ಕಾರಿನಲ್ಲಿ ಇದ್ದವರು ಹೋಗಬಹುದು ಅನಿಸುತ್ತೆ ಎಂದರು. ಹೀಗಾಗಿ ನಾನು ಮುಂದಕ್ಕೆ ಹೋಗಬೇಕಾಯ್ತು ಅಂತ ಕಾರಿನ ಚಾಲಕ ಹರೀಶ್ ಹೇಳಿದ್ದಾರೆ.

ನಿರ್ಲಕ್ಷ್ಯತನದ ಕಾರು ಚಾಲನೆ ಪ್ರಕರಣದಡಿ ಬಂಧನ: ಇನ್ನು ಕೆ.ಆರ್.ಸರ್ಕಲ್ ಅಂಡರ್ ಪಾಸ್ ದುರಂತ ಪ್ರಕರಣದಲ್ಲಿ ಕಾರು ಚಾಲಕ ಹರೀಶ್‌ ಅವರ ನಿರ್ಲಕ್ಷ್ಯತನದ ಕಾರು ಚಾಲನೆಯಿಂದಲೇ ದುರಂತ ಸಂಭವಿಸಿದೆ ಎಂದು ಮೃತ ಯುವತಿಯ ಅಣ್ಣ ಸಂದೀಪ್‌ ದೂರು ನೀಡಿದ್ದರು. ಜೊತೆಗೆ, ಹಲಸೂರು ಗೇಟ್ ಪೊಲೀಸರಿಂದ ಕಾರು ಚಾಲಕ ಹರೀಶ್‌ ಅವರನ್ನು ಬಂಧನ ಮಾಡಲಾಗಿದೆ.

click me!