Bangalore University: ಸಹಸ್ರಾರು ಉತ್ತರ ಪತ್ರಿಕೆಗಳಲ್ಲಿ ಅಕ್ರಮ

By Kannadaprabha News  |  First Published Feb 18, 2022, 7:49 AM IST

*  2020ರಲ್ಲಿ ನಡೆದಿದ್ದ ಬಿಬಿಎಂ, ಬಿಬಿಎ 2, 4ನೇ ಸೆಮಿಸ್ಟರ್‌ ಪರೀಕ್ಷೆಯ ಫಲಿತಾಂಶದಲ್ಲಿ ವ್ಯತ್ಯಾಸ
*  ಸಿಐಡಿ ತನಿಖೆಗೆ ವಿವಿ ಆದೇಶ
*  ಈ ವೇಳೆ ಸಾವಿರಾರು ವಿದ್ಯಾರ್ಥಿಗಳ ಅಂಕ ತಿದ್ದಿರುವ ಅಂಶ ಬೆಳಕಿಗೆ
 


ಬೆಂಗಳೂರು(ಫೆ.18):  ಬೆಂಗಳೂರು ವಿಶ್ವವಿದ್ಯಾಲಯದ(Bangalore University) 804 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ (OMR) ಅಂಕಗಳ ತಿದ್ದುಪಡಿ ಅಕ್ರಮ ಸಂಬಂಧ ಸಿಐಡಿ(CID) ನಡೆಸಿದ ತನಿಖೆಯಲ್ಲಿ ಸಾವಿರಾರು ಒಎಂಆರ್‌ ಶೀಟ್‌ಗಳಲ್ಲಿ ಅಂಕಗಳನ್ನು ತಿದ್ದಿರುವುದು ಬಯಲಾಗಿದೆ. ಇದರ ಬೆನ್ನಲ್ಲೆ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ವಿವಿಯ ಸಿಬ್ಬಂದಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ತನಿಖೆ(Investigation) ನಡೆಸುತ್ತಿರುವ ಸಿಐಡಿ ಪೊಲೀಸರು(CID Police) ಪ್ರಕರಣ ಬೆಳಕಿಗೆ ಬಂದಾಗ ವಿವಿಯ ಮೌಲ್ಯಮಾಪನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಅಲ್ಲದೆ ತನಿಖೆಯಲ್ಲಿ ವಿವಿ ನೀಡಿದ 804 ಒಎಂಆರ್‌ಗಳಷ್ಟೇ ಅಲ್ಲ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ(Students) ಉತ್ತರ ಪತ್ರಿಕೆಗಳ ಅಂಕಗಳನ್ನು ತಿದ್ದಿರುವುದು ಬಯಲಾಗಿದೆ ಎಂದು ಸಿಐಡಿ ತನಿಖಾಧಿಕಾರಿಗಳು ಹೇಳುತ್ತಿರುವುದಾಗಿ ವಿವಿಯ ಮೂಲಗಳು ತಿಳಿಸಿವೆ. ಈ ಮೂಲಕ ಅಕ್ರಮವಾಗಿ(Illegal) ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಅಲ್ಲದೆ ಹಲವು ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿ ಅವರಿಗೆ ಇನ್ನೂ ಉತ್ತಮ ಅಂಕ ನೀಡಿ ಅವರನ್ನು ಉನ್ನತ ದರ್ಜೆಯಲ್ಲಿ ಅಕ್ರಮವಾಗಿ ಪಾಸ್‌ ಮಾಡಿರುವುದು ಬಯಲಾಗಿದೆ.

Tap to resize

Latest Videos

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2020ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನಡೆದ ವಿವಿಧ ಪದವಿ ಪರೀಕ್ಷೆಗಳಲ್ಲಿ 804 ಉತ್ತರ ಪತ್ರಿಕೆಗಳಲ್ಲಿನ(Answer Paper) ಅಂಕಗಳನ್ನು ತಿದ್ದಿರುವುದು ವಿವಿಯ ಆಂತರಿಕ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನು ವಿವಿಯ ಮೌಲ್ಯಮಾಪನ ಕುಲಸಚಿವ ದೇವರಾಜು ಅವರು ಆಡಳಿತ ಕುಲಸಚಿವರಾಗಿದ್ದ ಐಎಎಸ್‌ ಅಧಿಕಾರಿ ಜ್ಯೋತಿ ಅವರ ಗಮನಕ್ಕೆ ತಂದಿದ್ದರು. ಬಳಿಕ ಪರಿಶೀಲಿಸಿ ವಿವಿಯ ಆಂತರಿಕ ತನಿಖೆ ನಡೆಸಲಾಗಿತ್ತು. ಈ ವೇಳೆ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ ಕೊಡುವ ಗುತ್ತಿಗೆ ಪಡೆದಿದ್ದ ವಿಶ್ವವಿದ್ಯಾಲಯದ ಅಧಿಕೃತ ಏಜೆನ್ಸಿಯ ಕೆಲ ಸಿಬ್ಬಂದಿ ಮತ್ತು ವಿವಿಯ ಮೌಲ್ಯಮಾಪನ ವಿಭಾಗದ ಕೆಲ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಕಂಡುಬಂದಿತ್ತು. ಇದರ ಆಧಾರದ ಮೇಲೆ ಕುಲಸಚಿವರು ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು(Complaint)  ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿವಿಯು ಸಿಂಡಿಕೇಟ್‌ನಲ್ಲಿ ಚರ್ಚಿಸಿ ಸಿಐಡಿ ತನಿಖೆಗೆ ಒಪ್ಪಿಸಿತು.

 

ಬೆಂ.ವಿವಿ ಅಂಕ ಪಟ್ಟಿತಿದ್ದಿದ ಕೇಸ್‌ ಸಿಐಡಿಗೆ

ಡಮ್ಮಿ ಸಂಖ್ಯೆ ನೀಡಲು ಖಾಸಗಿ ಏಜೆನ್ಸಿಗೆ ಗುತ್ತಿಗೆ

ಮೌಲ್ಯಮಾಪಕರಿಗೆ ತಾವು ಮೌಲ್ಯಮಾಪನ ಮಾಡುವ ಉತ್ತರ ಪತ್ರಿಕೆಗಳ ವಿದ್ಯಾರ್ಥಿಗಳ ಹೆಸರು, ನೋಂದಣಿ ಸಂಖ್ಯೆ ತಿಳಿಯಬಾರದೆಂದು ಉತ್ತರ ಪತ್ರಿಕೆಗಳ ಮುಖಪುಟವನ್ನು ಬೇರ್ಪಡಿಸಿ ಡಮ್ಮಿ ಸಂಖ್ಯೆಯನ್ನು ನೀಡಲಾಗುತ್ತದೆ. ಮೌಲ್ಯಮಾಪನದ ನಂತರ ಡಮ್ಮಿ ಸಂಖ್ಯೆ ತೆಗೆದು ವಿದ್ಯಾರ್ಥಿಯ ನೈಜ ನೋಂದಣಿ ಸಂಖ್ಯೆ ಜೋಡಿಸಲಾಗುತ್ತದೆ. 2020ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನಡೆದಿದ್ದ 2 ಮತ್ತು 4ನೇ ಸೆಮಿಸ್ಟರ್‌ ಬಿಬಿಎಂ, ಬಿಬಿಎ ಕೋರ್ಸುಗಳ ಪುನರಾವರ್ತಿತ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆ ಈ ಡಮ್ಮಿ ಸಂಖ್ಯೆ ನೀಡುವ ಹಾಗೂ ಮೌಲ್ಯಮಾಪನದ ನಂತರ ನೈಜ ನೋಂದಣಿ ಸಂಖ್ಯೆ ಜೋಡಿಸುವ ಕಾರ್ಯವನ್ನು ಟಿಆರ್‌ಎಸ್‌ ಫಾರಂ ಆ್ಯಂಡ್‌ ಸವೀರ್‍ಸಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.

ವಿವಿಯ ದತ್ತಾಂಶ ಸಿಬ್ಬಂದಿ ಕರಾಮತ್ತು

ಏಜೆನ್ಸಿಯವರು ವಿವಿಯ ಇ-ಮೇಲ್‌ಗೆ ಕಳುಹಿಸಿದ ವಿದ್ಯಾರ್ಥಿಗಳ ಫಲಿತಾಂಶದ ಫೈಲನ್ನು ಡೌನ್‌ಲೋಡ್‌ ಮಾಡಿಕೊಂಡು ಡೇಟಾ ಬೇಸ್‌ ಸರ್ವರ್‌ಗೆ ಫಲಿತಾಂಶದ ಅಂಕಗಳನ್ನು ಅಪ್‌ಲೋಡ್‌ ಮಾಡಲು ಮತ್ತು ಪರಿಷ್ಕರಿಸಲು ಮಾಡಲು ವಿಶ್ವವಿದ್ಯಾಲಯದ ಪ್ರೋಗ್ರಾಮರ್‌ಗಳು ಮತ್ತು ದತ್ತಾಂಶ ನಮೂದಕರಿಗೆ ಅವಕಾಶವಿರುತ್ತದೆ. ನಮೂದಾದ ದತ್ತಾಂಶ ವೀಕ್ಷಿಸಿದಾಗ ಇಬ್ಬರು ವಿದ್ಯಾರ್ಥಿಗಳ ಅಂಕಗಳು ತಿದ್ದಿರುವುದು ಕಂಡುಬಂದಿತ್ತು. 41 ಅಂಕ ಪಡೆದಿದ್ದ ವಿದ್ಯಾರ್ಥಿಯ ಅಂಕ 50ಕ್ಕೆ ತಿದ್ದಲಾಗಿತ್ತು. ಅನುಮಾನಗೊಂಡ ವಿವಿ, ಈ ಸೆಮಿಸ್ಟರ್‌ನ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಪರಿಶೀಲಿಸಿದಾಗ 804 ವಿದ್ಯಾರ್ಥಿಗಳ ಅಂಕ ತಿದ್ದಿರುವುದು ಕಂಡುಬಂದಿತ್ತು.
 

click me!