ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅವರು ನಡೆಸಿದ ಪರೀಕ್ಷೆಯಲ್ಲಿ ಅಕ್ರಮಕ್ಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಪೊಲೀಸರು, ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ತೀವ್ರಗೊಳಿಸಿದ್ದಾರೆ. ಈ ಕುರಿತಂತೆ ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಬೆಳಗಾವಿ (ಆ.25): ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅವರು ನಡೆಸಿದ ಪರೀಕ್ಷೆಯಲ್ಲಿ ಅಕ್ರಮಕ್ಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಪೊಲೀಸರು, ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ತೀವ್ರಗೊಳಿಸಿದ್ದಾರೆ. ಈ ಕುರಿತಂತೆ ಮತ್ತೆ ಮೂವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ಪ್ರಕರಣವನ್ನು ಬಗೆದಷ್ಟುಅಕ್ರಮ ಮಾಹಿತಿ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಆದೇಶ ಈರಪ್ಪ ನಾಗನೂರಿ (26), ಬೈಲಹೊಂಗಲ ತಾಲೂಕಿನ ನಾವಲಗಟ್ಟಿಗ್ರಾಮದ ಮಡಿವಾಳಪ್ಪ ಬಾಳಪ್ಪ ತೋರಣಗಟ್ಟಿ(36) ಹಾಗೂ ಬೈಲಹೊಂಗಲ ತಾಲೂಕಿನ ಹೊಸಕೋಟಿ ಗ್ರಾಮದ ಶಂಕರ ಕಲ್ಲಪ್ಪ ಉಣಕಲ್ (30) ಬಂಧಿತರು. ಆದೇಶ ನಾಗನೂರಿ ಎಂಬಾತ ಚಿಕ್ಕೋಡಿ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ, ಈತ ಗದಗ ಮುನ್ಸಿಪಲ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಹುಕ್ಕೇರಿ ತಾಲೂಕಿನ ಶಿರಹಟ್ಟಿಬಿ.ಕೆ. ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಅಡ್ಡಾ ಮಾಡಿಕೊಂಡಿದ್ದರಿಂದ ವಾಟ್ಸ್‌ಆ್ಯಪ್ ಮೂಲಕ ರವಾನೆಯಾಗಿದ್ದ ಪ್ರಶ್ನೆ ಪತ್ರಿಕೆ ಪಡೆದು ಉತ್ತರಗಳನ್ನು ಬಿಡಿಸುತ್ತಿದ್ದ ಎಂಬುವುದು ತಿಳಿದು ಬಂದಿದೆ.
ಕೆಪಿಟಿಸಿಎಲ್ ಅಕ್ರಮ: ಉತ್ತರ ಸಿದ್ಧಪಡಿಸುತ್ತಿದ್ದ ಉಪನ್ಯಾಸಕನ ಬಂಧನ
ನಂತರ ಈತ ಬಿಡಿಸಿ ಕೊಟ್ಟಿರುವ ಉತ್ತರ ಪತ್ರಿಕೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್‌ಗಳನ್ನು ಮಡಿವಾಳಪ್ಪ ತೋರಣಗಟ್ಟಿಹಾಗೂ ಶಂಕರ ಉಣಕಲ್ ಎಂಬುವರು ಚಿಕ್ಕೋಡಿ ಹಾಗೂ ರಾಮದುರ್ಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಗ್ಯಾಂಗ್‌ಗೆ ಹಸ್ತಾಂತರ ಮಾಡುತ್ತಿದ್ದರು. ಈ ಉತ್ತರಗಳನ್ನು ಅತ್ಯಾಧುನಿಕ ಬ್ಲೂಟೂತ್ ಡಿವೈಸ್‌ಗಳ ಮೂಲಕ ರವಾನಿಸುವ ಕಾರ್ಯವನ್ನು ಮಾಡುವ ಬಗ್ಗೆ ಯೋಜನೆ ರೂಪಿಸಿದ್ದರು. ಪೂರ್ವ ನಿಯೋಜನೆಯಂತೆ ಆದೇಶ ನಾಗನೂರಿ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಬಳಿ ಬಂದು ಇವರಿಬ್ಬರಿಗೆ ನೀಡಬೇಕಿತ್ತು. ಆದರೆ ಬ್ಲೂಟೂತ್ ಡಿವೈಸ್ ಕೊಡುವುದು ತಡವಾಗಿದ್ದರಿಂದ ಚಿಕ್ಕೋಡಿ ಹಾಗೂ ರಾಮದುರ್ಗಕ್ಕೆ ತೆಗೆದುಕೊಂಡು ಹೋಗುವುದು ವಿಳಂಭವಾಗಿದ್ದರಿಂದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಹೋಗಿದ್ದರಿಂದ ಇವರು ರೂಪಿಸಿದ ಯೋಜನೆ ವಿಫಲವಾಗುತ್ತದೆ. ಆದರೂ ಗ್ಯಾಂಗ್ ತಮ್ಮ ಯೋಜನೆಯನ್ನು ಕೈಬಿಡದೆ ಗೂಗಲ್ ಮೂಲಕ ಉತ್ತರಗಳನ್ನು ಪಡೆದು, ಈ ಮೊದಲು ಡಿವೈಸ್‌ಗಳನ್ನು ಇನ್ನಿತರ ಅಭ್ಯರ್ಥಿಗಳಿಗೆ ನೀಡಿದ್ದರಿಂದ ಅವರಿಗೆ ರವಾನಿಸುವ ಕಾರ್ಯವನ್ನು ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸ್ಮಾರ್ಟ್‌ವಾಚ್ ಬಳಸಿ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ: 9 ಜನರ ಬಂಧನ
ಈ ಅಕ್ರಮದ ಪ್ರಮುಖ ಆರೋಪಿಯಾಗಿರುವ ಸಂಜು ಬಂಡಾರಿ ಸಂಪರ್ಕದಲ್ಲಿದ್ದ ಇನ್ನಿತರ ಆರೋಪಿಗಳು ಹಾಗೂ ಅಭ್ಯರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು, ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಈ ಆರೋಪಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರಿಂದ, ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್ ಡಿವೈಸ್‌ಗಳು ದೊರೆತಿವೆ. ಅಲ್ಲದೆ ಈ ಪ್ರಕರಣದಲ್ಲಿ ಇನ್ನೂ ಹಲವು ಜನರು ಭಾಗಿಯಾಗಿರುವ ಬಗ್ಗೆ ದೃಢವಾದ ಶಂಕೆಯುಳ್ಳ ಪೊಲೀಸರು ಪರೀಕ್ಷಾ ಅಕ್ರಮದ ಹಿಂದಿರುವ ಹಾಗೂ ಭಾಗಿಯಾದವರ ಹೆಡೆಮುರಿ ಕಟ್ಟುವ ಕಾರ್ಯ ಮುಂದುವರೆಸಿದ್ದಾರೆ. ಬಂಧಿತರಿಂದ ಒಂದು ಕಾರು ಮತ್ತು ಎರಡು ಡಿವೈಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.