ನನ್ನ ಮುಂಬೈಗೆ ಕಳಿಸಬೇಡಿ: ರವಿ ಪೂಜಾರಿ ರಚ್ಚೆ!

By Kannadaprabha News  |  First Published Feb 29, 2020, 7:45 AM IST

‘ನನಗೆ ಮುಂಬೈಯಲ್ಲಿ ದಾವೂದ್‌ ಇಬ್ರಾಹಿಂ ಸೇರಿದಂತೆ ಕೆಲವರಿಂದ ಜೀವಕ್ಕೆ ಅಪಾಯವಿದೆ. ನನ್ನ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಕರ್ನಾಟಕದಲ್ಲಿಯೇ ನಡೆಸಿ. ಅಲ್ಲಿಗೆ ಕರೆದೊಯ್ಯಬೇಡಿ’ ಎಂದು ಪೊಲೀಸರಿಗೆ ಭೂಗತ ಪಾತಕಿ ರವಿ ಪೂಜಾರಿ ಮನವಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.


ಬೆಂಗಳೂರು [ಫೆ.29]:  ಒಂದು ಕಾಲದಲ್ಲಿ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರವನ್ನು ನಡುಗಿಸುವ ಧಮಕಿಗಳನ್ನು ಹಾಕುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಈಗ ಅದೇ ನಗರಕ್ಕೆ ಹೋಗಲು ಅಂಜುತ್ತಿದ್ದಾನೆ!

ಹೌದು.. ಅಚ್ಚರಿಯಾದರೂ ಇದು ನಿಜ.

Latest Videos

undefined

‘ನನಗೆ ಮುಂಬೈಯಲ್ಲಿ ದಾವೂದ್‌ ಇಬ್ರಾಹಿಂ ಸೇರಿದಂತೆ ಕೆಲವರಿಂದ ಜೀವಕ್ಕೆ ಅಪಾಯವಿದೆ. ನನ್ನ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಕರ್ನಾಟಕದಲ್ಲಿಯೇ ನಡೆಸಿ. ಅಲ್ಲಿಗೆ ಕರೆದೊಯ್ಯಬೇಡಿ’ ಎಂದು ಪೊಲೀಸರಿಗೆ ಭೂಗತ ಪಾತಕಿ ರವಿ ಪೂಜಾರಿ ಮನವಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

‘ಹಲವು ವರ್ಷಗಳಿಂದ ನನ್ನ ಹತ್ಯೆಗೆ ಶತ್ರುಗಳು ಹೊಂಚು ಹಾಕಿದ್ದಾರೆ. ಎರಡ್ಮೂರು ಬಾರಿ ನನ್ನ ಮೇಲೆ ದಾಳಿಗಳು ಸಹ ನಡೆದಿದ್ದು, ದೇವರ ದಯೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದೆ. ಹೀಗಾಗಿ ಮುಂಬೈಗೆ ಹೋದರೆ ಮತ್ತೆ ನನ್ನ ಮೇಲೆ ಎದುರಾಳಿಗಳು ದಾಳಿ ನಡೆಸಬಹುದು’ ಎಂದು ಪೂಜಾರಿ ಹೇಳಿರುವುದಾಗಿ ಗೊತ್ತಾಗಿದೆ.

ಈ ಮನವಿಗೆ ಸಿಸಿಬಿ ಸ್ಪಷ್ಟಭರವಸೆ ನೀಡಿಲ್ಲ. ‘ಮುಂಬೈನಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿರುವ ಕಾರಣ ಪೂಜಾರಿಯನ್ನು ಕಾನೂನು ಪ್ರಕಾರ ಅಲ್ಲಿನ ಪೊಲೀಸರ ವಶಕ್ಕೆ ನೀಡಬೇಕಿದೆ. ಅಲ್ಲದೆ ಪೂಜಾರಿಯನ್ನು ಸುಪರ್ದಿಗೆ ಪಡೆಯುವ ಸಂಬಂಧ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮನವಿ ಮಾಡಿಕೊಳ್ಳಬಹುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ...

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಸಿಸಿಬಿ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರು, ‘ರವಿ ಪೂಜಾರಿ ವಿರುದ್ಧ ತನಿಖೆ ನಡೆದಿದೆ. ನಮ್ಮ ವಿಚಾರಣೆಗೆ ಆತ ಪೂರಕವಾಗಿ ಸ್ಪಂದಿಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆತನ ಕೃತ್ಯಗಳ ಸ್ಪಷ್ಟಚಿತ್ರಣ ಸಿಗಲಿದೆ’ ಎಂದು ಹೇಳಿದರು.

ಕುಟುಂಬ ಸದಸ್ಯರ ನೆನೆದು ಕಣ್ಣೀರು:

ಹಣಕ್ಕಾಗಿ ನಾನು ಅಪರಾಧ ಕೃತ್ಯಗಳನ್ನು ಎಸಗಿದ್ದೇನೆ. ಆದರೆ ಈ ಪ್ರಕರಣಗಳಿಗೂ ನನ್ನ ಕುಟುಂಬದ ಸದಸ್ಯರಿಗೂ ಸಂಬಂಧವಿಲ್ಲ. ಯಾವತ್ತೂ ಪತ್ನಿ ಮತ್ತು ಮಕ್ಕಳು ಪಾತ್ರ ವಹಿಸಿಲ್ಲ. ನನ್ನ ವ್ಯವಹಾರಗಳ ಬಗ್ಗೆ ಅವರಿಗೆ ಕಿಂಚಿತ್ತೂ ಗೊತ್ತಿಲ್ಲ ಎಂದು ಸಿಸಿಬಿ ವಿಚಾರಣೆ ವೇಳೆ ಪೂಜಾರಿ ಕಣ್ಣೀರು ಸುರಿಸಿದ್ದಾಗಿ ಮೂಲಗಳು ಹೇಳಿವೆ.

‘ನನ್ನ ಎದುರಾಳಿಗಳ ಭಯದಿಂದ ಕುಟುಂಬ ಸದಸ್ಯರನ್ನು ರಕ್ಷಿಸಿಕೊಳ್ಳಲು ವಿದೇಶದಲ್ಲೂ ಒಂದೆಡೆ ನೆಲೆ ನಿಲ್ಲದೆ ಓಡಾಡುತ್ತಿದ್ದೆ. ವಿದೇಶದಲ್ಲಿ ವಿವಾಹವಾಗಿ ನನ್ನ ಇಬ್ಬರು ಹೆಣ್ಣು ಮಕ್ಕಳು ಸುಖವಾಗಿದ್ದಾರೆ. ಸೆನೆಗಲ್‌ನಲ್ಲಿ ನನ್ನೊಂದಿಗೆ ಪತ್ನಿ ಮತ್ತು ಮಗ ಇದ್ದರು. ಅಪರಾಧ ಜಗತ್ತಿನಿಂದ ಮಗನನ್ನು ದೂರವಿಟ್ಟಿದ್ದೆ’ ಎಂದು ಪೂಜಾರಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

‘ನನ್ನ ಮೇಲಿನ ದ್ವೇಷದಿಂದ ಮಕ್ಕಳಿಗೆ ಭಯ ಮಾಡಬಹುದು. ಅವರ ರಕ್ಷಣೆಗೆ ಸಹ ಕ್ರಮ ತೆಗೆದುಕೊಳ್ಳಿ’ ಎಂದು ಪೂಜಾರಿ ವಿನಂತಿಸಿದ್ದಾನೆ ಎಂದು ತಿಳಿದು ಬಂದಿದೆ.

ಆದರೆ ‘ವಿಚಾರಣೆ ವೇಳೆ ಪೂಜಾರಿ ಕಣ್ಣೀರು ಸುರಿಸಿದ ಎಂಬೆಲ್ಲ ಸಂಗತಿಗಳು ವಂದತಿಗಳಷ್ಟೇ’ ಎಂದು ಡಿಸಿಪಿ ಕುಮಾರ್‌ ಜೈನ್‌ ಹೇಳಿದ್ದಾರೆ.

click me!