ಯಶ್, ದುನಿಯಾ ವಿಜಯ್ ಗೂ ಬೆದರಿಕೆ : ಪ್ರಚಾರ ಪಡೆಯಲು ಯತ್ನಿಸಿದ್ದ ರೌಡಿ ಭರತ

By Suvarna NewsFirst Published Feb 28, 2020, 3:37 PM IST
Highlights

ಪೊಲೀಸರ ಗುಂಡಿಗೆ ಬಲಿಯಾದ ಪಾತಕ ಲೋಕದ ಕುಖ್ಯಾತ ರೌಡಿ ಸ್ಲಂ ಭರತ ಸ್ಯಾಂಡಲ್ ವುಡ್ ನಟರಾದ ಯಶ್ ಹಾಗೂ ದುನಿಯಾ ವಿಜಯ್ ಗೂ ಬೆದರಿಕೆ ಒಡ್ಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಯೋಜಿಸಿದ್ದ. 

ಬೆಂಗಳೂರು [ಫೆ.28]:  ಹದಿನಾಲ್ಕು ವರ್ಷಗಳಿಂದ ರಾಜಧಾನಿಯ ಪಾತಕಲೋಕದಲ್ಲಿ ಮೆರೆಯುತ್ತಿದ್ದ ಕುಖ್ಯಾತ ರೌಡಿ ಭರತ್‌ ಅಲಿಯಾಸ್‌ ಸ್ಲಂ ಭರತ್‌ (32)  ನಸುಕಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಇತ್ತೀಚಿಗೆ ರಾಜಗೋಪಾಲನಗರದಲ್ಲಿ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಭರತ್‌ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದ ಪೊಲೀಸರು ಬುಧವಾರ ಮಧ್ಯರಾತ್ರಿ 2.30ರ ಸುಮಾರಿಗೆ ನಗರಕ್ಕೆ ಕರೆ ತಂದಿದ್ದರು. ಈ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಸಿನಿಮೀಯ ಶೈಲಿಯಲ್ಲಿ ತನ್ನ ಸಹಚರರ ಜತೆ ಭರತ ತಪ್ಪಿಸಿಕೊಂಡಿದ್ದ. ಬಳಿಕ ಆತನನ್ನು ಹೆಸರುಘಟ್ಟಸಮೀಪ ಪತ್ತೆಹಚ್ಚಿದ ತನಿಖಾ ತಂಡ, ಭರತ್‌ನಿಗೆ ಶರಣಾಗುವಂತೆ ಸೂಚಿಸಿತು. ಆದರೆ ಈ ಮಾತಿಗೆ ಬಗ್ಗದೆ ಪೊಲೀಸರ ಮೇಲೆ ಪುನಃ ಗುಂಡಿನ ದಾಳಿಗಿಳಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್‌ಪೆಕ್ಟರ್‌ ಲೋಹಿತ್‌ ಹಾರಿಸಿದ ಗುಂಡುಗಳು ಭರತ್‌ನ ಎದೆ ಹಾಗೂ ಹೊಟ್ಟೆಗೆ ಹೊಕ್ಕಿವೆ. ಗಾಯಗೊಂಡು ಆತ ಮೃತಪಟ್ಟಿದ್ದಾನೆ.

ಯಶ್‌, ದುನಿಯಾ ವಿಜಯ್‌ಗೆ ಬೆದರಿಕೆ

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರಾದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ದುನಿಯಾ ವಿಜಯ್‌ ಅವರಿಗೆ ಜೀವ ಬೆದರಿಕೆ ಹಾಕಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಸ್ಲಂ ಭರತ್‌ ಯೋಜಿಸಿದ್ದ. ನಟರಿಗೆ ಬೆದರಿಸಿದ್ದಾಗಿ ತನ್ನ ಸಹಚರರಲ್ಲಿ ಆತ ಹೇಳಿಕೊಂಡಿದ್ದ. ಆದರೆ ಈ ರೀತಿ ಯಾವುದೇ ಪ್ರಕರಣಗಳು ವರದಿ ಆಗಿರಲಿಲ್ಲ. ಹಾಗಾಗಿ ಈ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ಡಿಸಿಪಿ ಶಶಿಕುಮಾರ್‌ ಸ್ಪಷ್ಟಪಡಿಸಿದ್ದಾರೆ.

4 ವರ್ಷಗಳ ಬಳಿಕ ಎನ್‌ಕೌಂಟರ್‌

ನಗರದಲ್ಲಿ ನಾಲ್ಕು ವರ್ಷ ಬಳಿಕ ಪೊಲೀಸರ ಎನ್‌ಕೌಂಟರ್‌ ನಡೆದಿದೆ. 2016ರಲ್ಲಿ ಜ್ಞಾನಭಾರತಿ ಸಮೀಪ ಆಶಿಕ್‌ ಎಂಬಾತ ಪೊಲೀಸರ ಗುಂಡಿನ ದಾಳಿಗೆ ಹತನಾಗಿದ್ದ. ಅಪರಾಧ ಪ್ರಕರಣದಲ್ಲಿ ಬಂಧನ ಕಾರ್ಯಾಚರಣೆ ನಡೆದಿತ್ತು. ಇದಕ್ಕೂ ಮುನ್ನ 2015ರಲ್ಲಿ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಪೊಲೀಸರ ಗುಂಡಿನ ದಾಳಿಗೆ ಜೀವ ತೆತ್ತಿದ್ದ.

12 ತಿಂಗಳಲ್ಲಿ 22 ಗುಂಡಿನ ದಾಳಿ

ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌, ತಮ್ಮ 12 ತಿಂಗಳ ಆಡಳಿತಾವಧಿಯಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ 22 ಪಾತಕಿಗಳ ವಿರುದ್ಧ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ರೌಡಿ ಭರತ ಎನ್‌ಕೌಂಟರ್‌ ಸಹ ಸೇರಿದೆ.

ಫೆಬ್ರವರಿ 28ರ ಟಾಪ್ 10 ಸುದ್ದಿಗಾಗಿ  ಇಲ್ಲಿ ಕ್ಲಿಕ್ ಮಾಡಿ: 

click me!