ಸಾಲ ತೀರಿಸುವ ವಿಚಾರದಲ್ಲಿ ಶುರುವಾಗಿದ್ದ ಜಗಳ ಪತ್ನಿಯ ಕೊಲೆಯಲ್ಲಿ (Murder) ಅಂತ್ಯವಾದ ಪ್ರಕರಣ ಬೆಂಗಳೂರು ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು (ಜೂ. 22): ಸಾಲ ತೀರಿಸುವ ವಿಚಾರದಲ್ಲಿ ಶುರುವಾಗಿದ್ದ ಜಗಳ ಪತ್ನಿಯ ಕೊಲೆಯಲ್ಲಿ (Murder) ಅಂತ್ಯವಾದ ಪ್ರಕರಣ ಬೆಂಗಳೂರು ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ. ಟೈಲರಿಂಗ್ ಕೆಲಸ ಮಾಡುತ್ತಿದ್ದ ಧನೇಂದ್ರ ಪತ್ನಿಗೆ ಚಾಕುವಿನಿಂದ ಇರಿದು ನಿನ್ನೆ ಮಧ್ಯರಾತ್ರಿ ಕೊಲೆ ಮಾಡಿದ್ದಾನೆ. ಚಿತ್ತೂರು ಮೂಲದ ಧನೇಂದ್ರ 15 ವರ್ಷಗಳ ಹಿಂದೆ ಕೋಲಾರ ಮೂಲದ ಅನುಸೂಯ ಎಂಬಾಕೆಯನ್ನ ವಿವಾಹವಾಗಿದ್ದ. ದಂಪತಿ ಯಶವಂತಪುರದಲ್ಲಿ ಟೈಲರಿಂಗ್ (Tailoring) ಕೆಲಸ ಮಾಡಿಕೊಂಡಿದ್ರು. ಮಗಳ ವಿದ್ಯಾಭ್ಯಾಸಕ್ಕಾಗಿ ಅನುಸೂಯ ಚೀಟಿ ಕಟ್ಟಿ ಒಂದೂವರೆ ಲಕ್ಷ ಉಳಿಸಿದ್ರು. ಇದೇ ಹಣವನ್ನ ಪಡೆದಿದ್ದ ಗಂಡ ಧನೇಂದ್ರ ಖರ್ಚು ಮಾಡಿಕೊಂಡಿದ್ದ.
ಆ ಹಣವನ್ನ ಮಗಳ ವಿದ್ಯಾಭ್ಯಾಸಕ್ಕಾಗಿ (Education) ವಾಪಸ್ ನೀಡುವಂತೆ ಅನುಸೂಯ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಒಂದು ಲಕ್ಷ ಸಾಲ ಮಾಡಿಕೊಂಡಿದ್ದ ಧನೇಂದ್ರ. ಇತ್ತೀಚಿಗೆ ಟೈಲರಿಂಗ್ ನಿಂದ ಬರುವ ಸಂಪಾದನೆ ಹಾಗೂ ವ್ಯವಹಾರವನ್ನ (Business) ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಒಂದೂವರೆ ಲಕ್ಷ ವಾಪಸ್ ನೀಡಲು ಪತ್ನಿ ಜೂನ್ 22 ಡೆಡ್ ಲೈನ್‌ನೀಡಿದ್ರು. ಹಣ ವಾಪಸ್ ನೀಡಲಾಗದ ಧನೇಂದ್ರ ಪತ್ನಿಯನ್ನ ಕೊಲೆಮಾಡುವ ನಿರ್ಧಾರ ಮಾಡಿದ್ದ.
ಹೀಗಾಗಿ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದ ಧನೇಂದ್ರ ಪತ್ನಿ ಮಲಗಿದ್ದ ವೇಳೆ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಇದೇ ವೇಳೆ ಮಗಳ (Daughter) ಕುತ್ತಿಗೆಗೂ ಚಾಕುವಿಂದ ಚಿಚ್ಚಿ ಕೊಲೆಗೆ ಯತ್ನಿಸಿದ್ದ. ಚಾಕು ಇರಿದ ನಂತರ ಸತ್ತ ರೀತಿಯಲ್ಲಿ ನಾಟಕ ಆಡಿದ್ದ ಪುತ್ರಿ, ಬೆಳಗ್ಗೆವರೆಗೂ ನೋವು ಸಹಿಸಿಕೊಂಡೆ ಮಲಗಿದ್ದಳು. ಬೆಳಗ್ಗೆ 8 ಗಂಟೆಗೆ ಮಗಳು ಬದುಕಿದ್ದನ್ನ ಕಂಡು ದಂಗಾದ ಧನೇಂದ್ರ ಮದ್ಯದ ಅಮಲು ಕಡಿಮೆ ಆಗಿದ್ರಿಂದ ಮಗಳ ಮೇಲೆ ಮತ್ತೆ ಹಲ್ಲೆ ಮಾಡದೇ ಬಿಟ್ಟಿದ್ದ.
ಇದನ್ನೂ ಓದಿ: ರಾತ್ರಿ ಊಟ ಬಡಿಸಲಿಲ್ಲ ಎಂದು ಪತ್ನಿಯನ್ನು ಕೊಂದು ಶವದ ಪಕ್ಕದಲ್ಲೇ ಮಲಗಿದ ಪತಿ
ನೀನು ಬದುಕಿರೋದ್ರಿಂದ ಈಗ ನಾನೂ ಬದುಕಲೇಬೇಕೆಂದು ಮಗಳಿಗೆ ಹೇಳಿದ ಧನೇಂದ್ರ, 100 ಗೆ ಕರೆ ಮಾಡಿ ತಾನು ಕೊಲೆಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಧನೇಂದ್ರನನ್ನ ವಶಕ್ಕೆ ಪಡೆದು, ಬಾಲಕಿಯನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ 14 ವರ್ಷದ ಮಗಳು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆರೋಪಿ ಧನೆಂದ್ರನನ್ನ ವಶಕ್ಕೆ ಪಡೆದಿರುವ ಯಶವಂತಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ