* ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದ ಘಟನೆ
* ಪತ್ನಿಯ ಕುತ್ತಿಗೆಗೆ ನೇಣು ಬಿಗಿದು ಕೊಲೆಗೈದ ಪತಿ
* ಮದುವೆಯಾದಾಗಿನಿಂದಲೂ ಹೆಚ್ಚಿನ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಆರೋಪಿ
ಕುಷ್ಟಗಿ(ಜು.31): ಬೇರೆ ಮಹಿಳೆಯರೊಂದಿಗಿನ ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ಪತಿ ಮಂಜುನಾಥ ಕಟ್ಟಿಮನಿ ಎಂಬಾತ ತನ್ನ ಪತ್ನಿಯನ್ನು ಕೊಲೆಗೈದಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಕೊಲೆಯಾಗಿರುವ ಮಹಿಳೆಯನ್ನು ಮಂಜುಳಾ ಕಟ್ಟಿಮನಿ (25) ಎಂದು ಗುರುತಿಸಲಾಗಿದೆ. ಯಲಬುರ್ಗಾ ತಾಲೂಕು ಯಡ್ಡೋಣಿ ಗ್ರಾಮದವರಾದ ಮಂಜುಳಾ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ನಿವಾಸಿಯಾಗಿರುವ ಮತ್ತು ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಟೆಂಡರ್ ಆಗಿರುವ ಆರೋಪಿ ಮಂಜುನಾಥ ಕಟ್ಟಿಮನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಚಿಕ್ಕ ಮಕ್ಕಳನ್ನು ಹೊಂದಿರುವ ಈ ದಂಪತಿ ಪಟ್ಟಣದಲ್ಲಿಯೇ ವಾಸಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆಂದು ಮಂಜುಳಾ ಅವರನ್ನು ಕೊಪ್ಪಳ ರಸ್ತೆಯಲ್ಲಿ ಕರೆದೊಯ್ದ ಪತಿ ಮಂಜುನಾಥ ಆಕೆಯ ಕುತ್ತಿಗೆಗೆ ನೇಣು ಬಿಗಿದು ಕೊಲೆಗೈದು ನಂತರ ಪಕ್ಕದ ಸಜ್ಜೆ ಜಮೀನಿನಲ್ಲಿ ಶವ ಎಸೆದು ಹೋಗಿದ್ದಾನೆ. ನಂತರ ವಿಷಯ ಗೊತ್ತಾಗಿ ವಿಚಾರಿಸಲಾಗಿ ಕೊಲೆಗೈದಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
38ರ ಆಂಟಿಗೆ 19 ವರ್ಷದ ಇಬ್ಬರು ಬಾಯ್‌ಫ್ರೆಂಡ್ಸ್..! ಸೋಂಬೇರಿ ಪತಿ ಮರ್ಡರ್
ಗುರುವಾರ ರಾತ್ರಿಯಷ್ಟೇ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ನಂದಗೋಕುಲ ಹೋಟೆಲ್‌ನಲ್ಲಿ ಪತ್ನಿಯೊಂದಿಗೆ ಊಟ ಮಾಡಿದ ಚಿತ್ರವನ್ನು ಆರೋಪಿ ಸಾಮಾಜಿಕ ಜಾಲತಾಣದ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದ ಎನ್ನಲಾಗಿದೆ. ರಾತ್ರಿ ಇಬ್ಬರಿಗೂ ಜಗಳವಾಗಿ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ತಂದೆ ನೀಡಿರುವ ದೂರಿನ ಅನ್ವಯ ಇಲ್ಲಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆಯಾದಾಗಿನಿಂದಲೂ ಹೆಚ್ಚಿನ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಆರೋಪಿ ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಈ ವಿಷಯದಲ್ಲಿ ಇಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.