
ಮಂಡ್ಯ(ನ.15): ಪತ್ನಿ ಹೆಸರಿನಲ್ಲಿದ್ದ ಕೋಟ್ಯಂತರ ರು. ಮೌಲ್ಯದ ಆಸ್ತಿ ಆಸೆಗಾಗಿ ಆಕೆ ಮಲಗಿದ್ದ ಸಮಯದಲ್ಲಿ ಉಸಿರುಗಟ್ಟಿಸಿ ಪತಿಯೇ ಹತ್ಯೆಗೈದಿರುವ ಘಟನೆ ನಗರದ ವಿ.ವಿ.ನಗರ ಬಡಾವಣೆಯಲ್ಲಿ ನಡೆದಿದೆ. ಎಸ್.ಶೃತಿ (32) ಎಂಬಾಕೆಯೇ ಕೊಲೆಯಾದವಳು. ಟಿ.ಎನ್.ಸೋಮಶೇಖರ್ (41) ಎಂಬಾತನೇ ಕೊಲೆ ಮಾಡಿದ ಪತಿ.
ಕೊಲೆಯಾದ ಎಸ್.ಶೃತಿ ಹೆಸರಿನಲ್ಲಿ ಮೈಸೂರಿನಲ್ಲಿ ಕೋಟ್ಯಂತರ ರು. ಬೆಲೆಬಾಳುವ ಆಸ್ತಿ ಇದ್ದು, ಈ ಆಸ್ತಿಯಲ್ಲಿ ಒಂದು ಆಸ್ತಿಯನ್ನು ಮಾರಾಟ ಮಾಡಲು ಆಕೆ ಪ್ರಯತ್ನಿಸುತ್ತಿದ್ದರಿಂದ ಇದನ್ನು ಒಪ್ಪದ ಪತಿ ಸೋಮಶೇಖರ್ ಎಲ್ಲ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ನ.10ರಂದು ರಾತ್ರಿ ಮಲಗಿದ್ದ ಸಮಯದಲ್ಲಿ ದಿಂಬು ಮತ್ತು ಬೆಡ್‌ಶೀಟನ್ನು ಶೃತಿಯ ಮುಖದ ಮೇಲೆ ಬಿಗಿಯಾಗಿ ಅದುಮಿ, ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಪೊಲೀಸರೆದರು ತಪ್ಪೊಪ್ಪಿಕೊಂಡಿದ್ದಾನೆ.
ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಗ್ಯಾಂಗ್‌ರೇಪ್, ಮೂವರು ಕಿರಾತಕರು ಬಂಧನ
ಘಟನೆ ವಿವರ:
ಮೈಸೂರಿನ ಹೆಬ್ಬಾಳ ಬಡಾವಣೆಯ ಪಿ.ಷಣ್ಮುಖಸ್ವಾಮಿ ಮತ್ತು ರಾಜೇಶ್ವರಿ ಪುತ್ರಿ ಎಸ್.ಶೃತಿಯನ್ನು ಮಂಡ್ಯದ ವಿ.ವಿ.ನಗರದಲ್ಲಿರುವ ನಾಗರಾಜಪ್ಪ ಅವರ ಮಗ ಟಿ.ಎನ್.ಸೋಮಶೇಖರ್ ಅವರಿಗೆ ಕೊಟ್ಟು 2013ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ನಂತರದಲ್ಲಿ ಒಂದು ವರ್ಷ ಇವರಿಬ್ಬರ ದಾಂಪತ್ಯ ಜೀವನ ಸುಖಕರವಾಗಿದ್ದು, ನಂತರದಲ್ಲಿ ಇಬ್ಬರ ನಡುವೆ ಕಲಹವೇರ್ಪಟ್ಟಿತ್ತು. ಪತಿ ಸೋಮಶೇಖರ್ ನಿತ್ಯ ಪತ್ನಿಗೆ ಕಿರುಕುಳ ಕೊಡುತ್ತಿದ್ದನು ಎನ್ನಲಾಗಿದೆ.
ಆಕೆ ಗರ್ಭಿಣಿಯಾಗಿದ್ದಾಗ ಹಳಸು ಮತ್ತು ತಂಗಳು ಆಹಾರ ನೀಡುತ್ತಿದ್ದರು. ತಂದೆ ತಾಯಿ ಇಲ್ಲದ ಶ್ರುತಿ ತನ್ನ ನೋವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು ನಾವು. ಅನೇಕ ಬಾರಿ ರಾಜೀ ಸಂಧಾನ ಮಾಡಿ ಸಮಾಧಾನಪಡಿಸಿ ಬರುತ್ತಿದ್ದರೂ ಸಹ ಆತ ಶೃತಿಗೆ ನೀಡುತ್ತಿದ್ದ ಕಿರುಕುಳವನ್ನು ಮುಂದುವರಿಸಿದ್ದನು ಎಂದು ಮೃತಳ ಚಿಕ್ಕಪ್ಪ ಪಿ.ಕುಮಾರಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶೃತಿ ಹೆಸರಿನಲ್ಲಿ ಮೈಸೂರಿನ ವಿಜಯನಗರ 1ನೇ ಹಂತದಲ್ಲಿ ಮೂರಂತಸ್ತಿನ ಮನೆಯನ್ನು ಕಟ್ಟಿಸಿಕೊಡಲಾಗಿತ್ತು. ಆ ನಂತರದಲ್ಲಿ ತಂದೆ ಷಣ್ಮುಖಸ್ವಾಮಿ, ತಾಯಿ ರಾಜೇಶ್ವರಿಯವರು ಕೇವಲ ಎರಡು ವರ್ಷದ ಅಂತರದಲ್ಲಿ ವಿಧಿವಶರಾದರು. 6 ತಿಂಗಳ ತರುವಾಯ ತಂಗಿ ಸುಶ್ಮಿತಾ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಎಲ್ಲ ಆಸ್ತಿಗಳನ್ನೂ ಶೃತಿ ಹೆಸರಿಗೆ ವರ್ಗಾಯಿಸಿಕೊಡಲಾಗಿತ್ತು.
ಶೃತಿಯ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡುವಂತೆ ಸೋಮಶೇಖರ್ ಪೀಡಿಸುತ್ತಿದ್ದನೆನ್ನಲಾಗಿದೆ. ಇದಕ್ಕೆ ಶೃತಿ ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ.
ಶೃತಿ ತನ್ನ ಹೆಸರಿನಲ್ಲಿದ್ದ ಎಲ್ಲ ಚರ ಮತ್ತು ಸ್ಥಿರಾಸ್ಥಿಗಳನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಬಯಸಿದ್ದಳು. ಆದರೆ ಇದನ್ನು ಬಲವಾಗಿ ಪತಿ ಟಿ.ಎನ್. ಸೋಮಶೇಖರ್ ವಿರೋಧಿಸಿ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರುತ್ತಿದ್ದನೆಂದು ದೂರಿನಲ್ಲಿ ವಿವರಿಸಿದ್ದಾರೆ.
ವಿಸಿ ನಾಲೆಗೆ ಬಿದ್ದ ಕಾರು, ಐವರೂ ದುರ್ಮರಣ: ಸೂಚನಾ ಫಲಕ, ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣ?
ಶೃತಿಯ ಹೆಸರಿನಲ್ಲಿದ್ದ ಕೋಟ್ಯಂತರ ರು. ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಸೋಮಶೇಖರ್ ಆಕೆಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವೆಂದು ಬಿಂಬಿಸಲು ಆರಂಭದಲ್ಲಿ ಪ್ರಯತ್ನಿಸಿದ್ದನು. ಆದರೆ, ಮೃತೆಯ ಸಾವಿನ ಬಗ್ಗೆ ಸಂಬಂಧಿ ಪಿ.ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿ ಪತಿ ಟಿ.ಎನ್.ಸೋಮಶೇಖರ್, ಅತ್ತೆ ನೀಲಾಂಬಿಕೆ, ಅತ್ತಿಗೆ ಹೇಮಲತಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಶವ ಪರೀಕ್ಷೆ ನಡೆಸಿ ಆರೋಪಿ ಸೋಮಶೇಖರನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಶೃತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ