ಪತ್ನಿ ಶರಣಮ್ಮಳನ್ನು ಬೈಕ್ ಮೇಲೆ ಕರೆದುಕೊಂಡು ಬಂದ ಪತಿ ಡಂಕನಕಲ್ ಬಳಿಯ ತುಂಗಭದ್ರಾ ಕಾಲುವೆಗೆ ನೂಕಿ ಕೊಲೆ ಮಾಡಿದ ಪತಿ. ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಗೆ ದೂರು ನೀಡಿದ ಮೃತ ಶರಣಮ್ಮಳ ಸಂಬಂಧಿಕರು.
ಗಂಗಾವತಿ(ಸೆ.27): ವರದಕ್ಷಿಣೆ ಕಿರುಕುಳದ ಜೊತೆ ದೈಹಿಕ, ಮಾನಸಿಕ ಹಿಂಸೆ ನೀಡಿ ಪತ್ನಿಯನ್ನು ಎಡದಂಡೆ ಕಾಲುವೆಗೆ ನೂಕಿ ಕೊಲೆಗೈದ ಘಟನೆ ತಾಲೂಕಿನ ಜಿರಾಳ ಕಲ್ಗುಡಿ ಡಂಕನಕಲ್ ಬಳಿ ಸೋಮವಾರ ಸಂಜೆ ನಡೆದಿದೆ. ಇಲ್ಲಿನ ನಿವಾಸಿ ಶರಣಮ್ಮ ಚಿದಾನಂದ ಕೊಲೆಯಾದ ಗೃಹಿಣಿ ಎಂದು ತಿಳಿದುಬಂದಿದೆ.
12 ವರ್ಷಗಳ ಹಿಂದೆ ಇರ್ಕಲ್ ಗಡಾದ ಶರಣಮ್ಮಳನ್ನು ಜಿರಾಳ ಕಲ್ಗುಡಿಯ ಚಿದಾನಂದ ಹನುಮಂತಪ್ಪ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ವೇಳೆ 3 ತೊಲೆ ಚಿನ್ನ, ₹50 ಸಾವಿರ ನಗದು ಮತ್ತು ವಾಚ್‌ನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ ಪತಿ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದನ್ನು ಸಹಿಸದ ಶರಣಮ್ಮಳ ಕುಟುಂಬದವರು ಮುಖಂಡರೊಂದಿಗೆ ಪಂಚಾಯಿತಿ ಮಾಡಿಸಿದ್ದರು. ಪತಿ ಮತ್ತೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದರಿಂದ ಮಗಳನ್ನು ತವರುಮನೆಯವರು ಇರ್ಕಲ್ ಗಡಾಕ್ಕೆ ಕರೆದುಕೊಂಡು ಬಂದಿದ್ದರು.
undefined
ರಾಯಚೂರು: ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ, ಪಾಲಕರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥ
ಸೋಮವಾರ ಇರ್ಕಲ್ ಗಡಾದಿಂದ ಪತ್ನಿ ಶರಣಮ್ಮಳನ್ನು ಬೈಕ್ ಮೇಲೆ ಕರೆದುಕೊಂಡು ಬಂದ ಪತಿ ಡಂಕನಕಲ್ ಬಳಿಯ ತುಂಗಭದ್ರಾ ಕಾಲುವೆಗೆ ನೂಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತು. ಇದರಿಂದ ಅನುಮಾನಗೊಂಡ ಶರಣಮ್ಮಳ ಸಂಬಂಧಿಕರು ಗಂಗಾವತಿ ಗ್ರಾಮೀಣ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರು.
ಪತಿ ಚಿದಾನಂದನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪತ್ನಿಯನ್ನು ಕಾಲುವೆಗೆ ನೂಕಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶರಣಮ್ಮಳ ಶವ ಸಿಂಧನೂರು ತಾಲೂಕಿನ ದುರ್ಗಾಕ್ಯಾಂಪ್ ಬಳಿ ಮಂಗಳವಾರ ಪತ್ತೆಯಾಗಿದೆ.