
ಬೆಂಗಳೂರು(ನ.18): ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿಗೆ ಗುಂಡಿಟ್ಟು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಖಾಸಗಿ ಸಂಸ್ಥೆ ಕಾವಲುಗಾರನೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರ ನಗರ ಸಮೀಪ ನಡೆದಿದೆ.
ಕಿರ್ಲೋಸ್ಕರ್ ಕಾಲೋನಿ 6ನೇ ಅಡ್ಡರಸ್ತೆ ನಿವಾಸಿ ಸುಮಿತ್ರಾ (62) ಹತ್ಯೆಗೀಡಾದ ದುರ್ದೈವಿ. ಕಾಳಪ್ಪ (68) ಪತ್ನಿ ಹತ್ಯೆಗೈದ ಆರೋಪಿ. ಶಸ್ತ್ರಚಿಕಿತ್ಸೆ ನಡೆಸಿದ್ದು, ಗಾಯಾಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಂಸಾರದ ವಿಚಾರವಾಗಿ ಸೋಮವಾರ ಬೆಳಗ್ಗೆ ದಂಪತಿ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಬ್ಲಿಕ್‌ನಲ್ಲಿ ಮೂತ್ರವಿಸರ್ಜಿಸಿದ ಎಂದು ಹೊಡೆದು ಕೊಂದೇ ಬಿಟ್ರು!
ಮಡಿಕೇರಿ ಜಿಲ್ಲೆಯ ಕಾಳಪ್ಪ ಹಾಗೂ ಸುಮಿತ್ರಾ ದಂಪತಿಗೆ ಮೂವರು ಮಕ್ಕಳಿದ್ದು, ಮದುವೆ ಬಳಿಕ ಮಕ್ಕಳೆಲ್ಲ ಪ್ರತ್ಯೇಕವಾಗಿ ನೆಲೆಸಿದ್ದಾರೆ. ನಾಲ್ಕೈದು ವರ್ಷಗಳಿಂದ ಕಿರ್ಲೋಸ್ಕರ್ ಕಾಲೋನಿಯಲ್ಲಿ ಕಾಳಪ್ಪ ದಂಪತಿ ನೆಲೆಸಿದ್ದರು. ಎಟಿಎಂ ಘಟಕಗಳಿಗೆ ಹಣ ಪೂರೈಸುವ ವಾಹನಗಳಿಗೆ ಕಾಳಪ್ಪ ಕಾವಲುಗಾರರಾಗಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಮನೆಯಲ್ಲಿ ಸಣ್ಣಪುಟ್ಟವಿಷಯಗಳಿಗೆ ಜಗಳವಾಗುತ್ತಿದ್ದವು. ಅಂತೆಯೇ ಭಾನುವಾರ ರಾತ್ರಿ ಸತಿ-ಪತಿ ಮಧ್ಯೆ ವಿರಸವಾಗಿದೆ.
ಮತ್ತೆ ಅದೇ ವಿಚಾರ ಕೆದಕಿ ಸೋಮವಾರ ಬೆಳಗ್ಗೆ 10.15ರಲ್ಲಿ ಇಬ್ಬರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದೆ. ಈ ಹಂತದಲ್ಲಿ ಕೆರಳಿದ ಕಾಳಪ್ಪ, ತನ್ನ ಪರವಾನಿಗೆ ಹೊಂದಿದ್ದ ಸಿಂಗಲ್ ಬ್ಯಾರೆಲ್ ಗನ್‌ನಿಂದ ಪತ್ನಿ ಎದೆಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟು ಬಿದ್ದು ಕೆಳಗೆ ಕುಸಿದು ಆಕೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಭೀತಿಗೊಂಡ ಕಾಳಪ್ಪ ಬಳಿಕ ಅದೇ ಗನ್‌ನಿಂದ ಎಡಗಡೆಯ ಪಕ್ಕೆಗೆ ಗುಂಡು ಹಾರಿಸಿಕೊಂಡಿಸಿದ್ದಾರೆ. ಈ ಗುಂಡಿನ ಶಬ್ದ ಕೇಳಿ ಬಂದ ನೆರೆಹೊರೆಯವರು, ಕಾಳಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಮಕ್ಕಳಿಗೆ ಮನೆ ಮಾಲೀಕರು ವಿಷಯ ತಿಳಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ