
ಬೆಂಗಳೂರು (ಸೆ.20): ಮದುವೆಯಾದ 11 ವರ್ಷಗಳ ನಂತರವೂ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದ ವ್ಯಕ್ತಿ, ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಪ್ರಸನ್ನ ಅಲಿಯಾಸ್ ಚಂದು, ತನ್ನ ಪತ್ನಿ ದೇವಿಕಾಳನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಲವು ವರ್ಷಗಳಿಂದ ಈ ಜೋಡಿ ಪ್ರತ್ಯೇಕವಾಗಿ ವಾಸ ಮಾಡುತ್ತಿತ್ತು. ಹಾಗಿದ್ದರೂ, ಪತ್ನಿಗೆ ಪತಿಯ ಕಿರುಕುಳ ಮುಂದುವರಿದಿತ್ತು ಎನ್ನಲಾಗಿದೆ.
ಗಂಡನ ಮದ್ಯಪಾನದ ಚಟ ಹಾಗೂ ನಿರಂತರ ಕಿರುಕುಳದಿಂದ ಬೇಸತ್ತಿದ್ದ ದೇವಿಕಾ, ಐದಾರು ವರ್ಷಗಳ ಹಿಂದೆ ಗಂಡನನ್ನು ತೊರೆದು ಬೇರೆ ಮನೆ ಮಾಡಿಕೊಂಡು, ಮಕ್ಕಳನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು. ಆಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಪೇಷೆಂಟ್ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಪ್ರಸನ್ನ ಆಗಾಗ ಆಕೆಯ ಕೆಲಸದ ಸ್ಥಳಕ್ಕೆ ಬಂದು ಗಲಾಟೆ ಮಾಡುವುದಲ್ಲದೆ, ಕೊಲೆ ಮಾಡುವ ಬೆದರಿಕೆಯನ್ನೂ ಹಾಕುತ್ತಿದ್ದ.
ಕಳೆದ ಸೆಪ್ಟೆಂಬರ್ 17ರಂದು ಪ್ರಸನ್ನ, ದೇವಿಕಾಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರುದಿನ, ಸೆಪ್ಟೆಂಬರ್ 18ರಂದು ಮಧ್ಯಾಹ್ನ ಆಕೆಯ ಮನೆ ಬಳಿ ಬಂದ ಆತ, ಚಾಕುವಿನಿಂದ ದೇವಿಕಾಳ ಕುತ್ತಿಗೆ ಮತ್ತು ಕೈಗೆ ಇರಿದು ಕೊಲೆಗೆ ಪ್ರಯತ್ನಿಸಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆ, ಮನೆಯ ಮಾಲೀಕರು ಸಮಯಕ್ಕೆ ಸರಿಯಾಗಿ ಮಧ್ಯ ಪ್ರವೇಶಿಸಿ ದೇವಿಕಾಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ತನ್ನ ಪತ್ನಿ ಬೇರೆ ಯಾರೊಂದಿಗೋ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಅನುಮಾನವೇ ಈ ಕೃತ್ಯಕ್ಕೆ ಕಾರಣವಾಗಿದೆ. ಪತಿ ಆಗಾಗ ಮನೆಗೆ ಬಂದು 'ಮನೆಯಲ್ಲಿ ಬೇರೆ ಯಾರೋ ಇದ್ದಾರೆ' ಎಂದು ಗಲಾಟೆ ಮಾಡುತ್ತಿದ್ದ ಎಂದು ದೇವಿಕಾ ತಿಳಿಸಿದ್ದಾರೆ. ಪ್ರಸನ್ನ ದೇವಿಕಾಳ ಚಿನ್ನವನ್ನೂ ಅಡವಿಟ್ಟಿದ್ದ. ಈ ಎಲ್ಲ ಕಿರುಕುಳಗಳ ಕುರಿತು ದೇವಿಕಾ ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಂದು ಕ್ಷಣ ಯಡವಿದ್ದರೂ ಪ್ರಸನ್ನ ತನ್ನ ಹೆಂಡತಿಯ ಪ್ರಾಣ ತೆಗೆದು ತಪ್ಪಿಸಿಕೊಳ್ಳುತ್ತಿದ್ದ. ಸದ್ಯ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಸನ್ನ ಅಲಿಯಾಸ್ ಚಂದು ಬಂಧನದಲ್ಲಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ