ಬಾಡಿಗೆ ನೀಡಲು ಒಪ್ಪದ್ದಕ್ಕೆ ಗುಂಡು ಹೊಡೆದು ಕೊಲೆಗೆ ಯತ್ನ

By Kannadaprabha NewsFirst Published Sep 26, 2020, 7:36 AM IST
Highlights

ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಬಾಡಿಗೆದಾರ| ಗುಂಡು ಹಾರಿಸಿ ಮಾಲೀಕ ಪರಾರಿ| ಬೆಂಗಳೂರಿನ ಟಿ.ಬೇಗೂರಿನಲ್ಲಿ ನಡೆದ ಘಟನೆ| 

ಬೆಂಗಳೂರು(ಸೆ.26): ಲಾಕ್‌ಡೌನ್‌ ಅವಧಿಯಲ್ಲಿ ಮನೆ ಬಾಡಿಗೆ ನೀಡಲು ನಿರಾಕರಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಬಾಡಿಗೆದಾರನಿಗೆ ಮಾಲೀಕನೊಬ್ಬ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ನಗರದ ಟಿ.ಬೇಗೂರು ಸಮೀಪ ನಡೆದಿದೆ.

ಮುನಿರೆಡ್ಡಿ ಪಾಳ್ಯದ ನಿವಾಸಿ ಸೆಲ್ವಂ (35) ಮೇಲೆ ಗುಂಡಿನ ದಾಳಿ ನಡೆದಿದ್ದು, ಸೆಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವಿನ ದೇಹಕ್ಕೆ ಹೊಕ್ಕಿದ್ದ ಗುಂಡನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. ಸೆಲ್ವಂ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ.

ಈ ಕೃತ್ಯ ಎಸಗಿ ಪರಾರಿಯಾಗಿರುವ ಮನೆ ಮಾಲೀಕ ಆನಂದ ರೆಡ್ಡಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮನೆ ಬಾಡಿಗೆ ವಿಚಾರವಾಗಿ ಬಾಡಿಗೆದಾರ ಮತ್ತು ಮಾಲೀಕ ಮಧ್ಯೆ ಗುರುವಾರ ರಾತ್ರಿ ಜಗಳವಾಗಿದೆ. ಆಗ ಕೋಪಗೊಂಡು ತನ್ನ ಪರವಾನಿಗೆ ಇಲ್ಲದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬಾಡಿಗೆದಾರನ ಕೊಲೆಗೆ ಆನಂದ ರೆಡ್ಡಿ ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉದ್ಯಮಿ ಪುತ್ರನ ಅಪಹರಣ: ಪೊಲೀಸರ ಮೇಲೆ ಹಲ್ಲೆ, ಆರೋಪಿಗೆ ಶೂಟ್‌

ಕೆಲಸವಿಲ್ಲದೆ ನಷ್ಟವಾಗಿದೆ ಎಂದ ಬಾಡಿಗೆದಾರ:

ತಮಿಳುನಾಡು ಮೂಲದ ಸೆಲ್ವಂ, ತನ್ನ ಕುಟುಂಬದ ಜತೆ ಮುನಿರೆಡ್ಡಿಪಾಳ್ಯದಲ್ಲಿ ನೆಲೆಸಿದ್ದಾನೆ. ಕಾರು ಚಾಲಕನಾಗಿದ್ದ ಆತ, ಲಾಕ್‌ಡೌನ್‌ ವೇಳೆ ಕೆಲಸವಿಲ್ಲದ ಕಾರಣಕ್ಕೆ ಕುಟುಂಬ ಸಮೇತ ತವರೂರಿಗೆ ಹೋಗಿದ್ದ. ಇನ್ನು ಬೇಗೂರಿನ ಆನಂದರೆಡ್ಡಿ ಭೂ ಮಾಲೀಕನಾಗಿದ್ದು, ಆತನಿಗೆ ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳು ಸೇರಿದಂತೆ ಸಾಕಷ್ಟುಆಸ್ತಿ ಹೊಂದಿದ್ದಾನೆ. ತಿಂಗಳಿಗೆ ಲಕ್ಷಾಂತರ ರುಪಾಯಿ ಬಾಡಿಗೆ ರೂಪದಲ್ಲಿ ಆತನಿಗೆ ಆದಾಯವಿದೆ. ಮುನಿರೆಡ್ಡಿಪಾಳ್ಯದ ರೆಡ್ಡಿ ಮನೆಯಲ್ಲಿ ಸೆಲ್ವಂ ಬಾಡಿಗೆಯಲ್ಲಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಲಾಕ್‌ಡೌನ್‌ ತೆರವಾದ ಬಳಿಕ ಊರಿನಿಂದ ಸೆಲ್ವಂ ಮರಳಿದ್ದಾನೆ. ಆಗ ಬಾಡಿಗೆದಾರನಿಗೆ ಬಾಡಿಗೆ ಕೊಡು ಎಂದು ಆನಂದರೆಡ್ಡಿ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಅವರ ಮಧ್ಯೆ ಜಗಳವಾಗಿತ್ತು. ಅಂತೆಯೇ ಬುಧವಾರ ರಾತ್ರಿ 9ರ ಸುಮಾರಿಗೆ ಸೆಲ್ವಂ ಮನೆ ಬಳಿ ತೆರಳಿದ್ದ ಆನಂದ ರೆಡ್ಡಿ, ‘ಬಾಡಿಗೆ ಕೊಡು. ಇಲ್ಲವೇ ಮನೆಯನ್ನು ತಕ್ಷಣವೇ ಬೋಗ್ಯಕ್ಕೆ ಕರಾರು ಮಾಡಿಕೋ’ ಎಂದು ಪಟ್ಟು ಹಿಡಿದಿದ್ದಾನೆ. ಈ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸೆಲ್ವಂ, ಕೊರೋನಾ ಸೋಂಕು ಕಾರಣದಿಂದ ಕೆಲಸವಿಲ್ಲ. ಹಣದ ಸಮಸ್ಯೆಯಾಗಿದೆ. ಎಲ್ಲಿಂದ ಹಣ ತರಲಿ ಎಂದು ಅಳಲು ತೋಡಿಕೊಂಡಿದ್ದಾನೆ.

ಈ ಹಂತದಲ್ಲಿ ಇಬ್ಬರ ಮಧ್ಯೆ ಬಿರುಸಿನ ಮಾತುಕತೆ ನಡೆದಿದೆ. ಆಗ ಕೆರಳಿದ ಆನಂದ ರೆಡ್ಡಿ, ತನ್ನ ಪಿಸ್ತೂಲ್‌ನಿಂದ ಆನಂದ ರೆಡ್ಡಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಆ ಗುಂಡು ಸೆಲ್ವಂ ಭುಜಕ್ಕೆ ಹೊಕ್ಕಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ದು ದಾಖಲಿಸಿದ್ದಾರೆ. ಗಾಯಾಳು ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನಂದ ರೆಡ್ಡಿ ಅಕ್ರಮವಾಗಿ ಪಿಸ್ತೂಲ್‌ ಬಳಸಿದ್ದಾನೆ. ಹಾಗಾಗಿ ಎಲ್ಲಿಂದ, ಯಾವಾಗ ಮತ್ತು ಯಾರಿಂದ ಪಿಸ್ತೂಲ್‌ ಖರೀದಿಸಿದ್ದ ಎಂಬ ಬಗ್ಗೆ ತನಿಖೆ ನಡೆದಿದೆ. ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೊಲೆ ಆರೋಪದಡಿ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!