ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಿದ ಪ್ರಕರಣದಲ್ಲಿ 7 ಜೈಲು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಘಟನೆಯಿಂದ ಸರ್ಕಾರಕ್ಕೆ ಯಾವುದೇ ಮುಜುಗರವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಜೊತೆ ಜೈಲು ಸಿಬ್ಬಂದಿ ಇರುವ ಫೋಟೋ ವೈರಲ್ ಆಗಿದ್ದು, ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು (ಆ.26): ಕಿಲ್ಲಿಂಗ್ ಸ್ಟಾರ್ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ಪ್ರಕರಣದಕ್ಕೆ ಸಂಬಂಧಪಟ್ಟಂತೆ 7 ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರವಾಗಿಲ್ಲ ಎಂದು ತಿಳಿಸಿದ್ದಾರೆ. ಒಂದೆಡೆ ದರ್ಶನ್ ವಿಚಾರದಲ್ಲಿ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರವಾಗಿದ್ದು ಖಚಿತವಾಗಿದ್ದರೆ, ಇನ್ನೊಂದೆಡೆ ಜೈಲಿನಲ್ಲಿ ದರ್ಶನ್ ಪಡೆದುಕೊಳ್ಳುತ್ತಿರುವ ಆತಿಥ್ಯ ಉಪಚಾರಗಳು ಒಂದೊಂದೆ ಹೊರಗೆ ಬರುತ್ತಿವೆ. ಜೈಲಿನಿಂದಲೇ ಮಾಡಿರುವ ವಿಡಿಯೋ ಕಾಲ್‌ಗಳ ಡಿಟೇಲ್‌ಗಳು ಸಿಗುತ್ತಿವೆ. ಪ್ರಕರಣದಲ್ಲಿ ಶರವಣ, ಶರಣ ಬಸಪ್ಪ ಅಮೀನ ಗಡ್, ಪ್ರಭು ಎಸ್, ಶ್ರೀಂಕಾತ್ ತಲವಾರ, ಎಲ್ ಎಸ್ ತಿಪ್ಪೇಸ್ವಾಮಿ, ವೆಂಕಪ್ಪ, ಸಂಪತ್ ಕುಮಾರ್ ಹಾಗೂ ಬಸಪ್ಪ ತೇಲಿಯನ್ನು ಅಮಾನತು ಮಾಡಲಾಗಿದೆ.
4.30 ಕ್ಕೆ ಸುದ್ದಿ ಬಂತು ಈ ಕುರಿತಾಗಿ ತನಿಖೆ ಆಗಿದೆ. ಜೈಲಿನಲ್ಲಿ ದರ್ಶನ್ ಮತ್ತು ಅವರ ಸ್ನೇಹಿತರ ಜೊತೆ ಟೀಂ ಜೊತೆಗಿರುವ ಫೋಟೋ ವೈರಲ್ ಆಗಿದೆ. 7 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ನಿನ್ನೆ ರಾತ್ರಿ 1 ಗಂಟೆಯವರೆಗೆ ತನಿಖೆ ಆಗಿದೆ. ಇದು ಹೇಗೆ ಸಾಧ್ಯವಾಯಿತು ಅನ್ನೋ ನಿಟ್ಟಿನಲ್ಲಿ ಜೈಲಿನಿಂದ ವರದಿಯನ್ನೂ ಕೇಳಿದ್ದೇನೆ. ಈ 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಮೇಲೆ ಕ್ರಮ ಆಗಿದೆ. ಜೈಲ್ ಸೂಪರಿಂಟೆಂಡೆಂಟ್ ಅವರನ್ನ ಶಿಫ್ಟ್ ಮಾಡಲಿದ್ದೇವೆ. ಇಂತಹ ಘಟನೆ ನಡೆಯಬಾರದು. ಪದೇ ಪದೇ ಈ ರೀತಿ ಆಗಬಾರದು. ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದರೂ ಅವರ ವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಎಲ್ಲಾ ಜೈಲ್ ಗಳಲ್ಲಿ ಜಾಮರ್, ಕ್ಯಾಮರಾ ಹಾಕಿದ್ರೂ ಹೀಗೆ ಆಗೋದು ಸರಿಯಲ್ಲ. ತನಿಖೆ ಬಳಿಕ ಫೋನ್ ಎಲ್ಲಿಂದ ಬಂತು, ಸಿಗರೇಟ್ ಹೇಗೆ ಬಂತು ತನಿಖೆ ಮಾಡಿ ಕ್ರಮ ತೆಗೆದುಕೊಳ್ತೀವಿ. 24 ಗಂಟೆ ಮಾನಿಟರ್ ನಡೆಯುತ್ತಿರುತ್ತದೆ. ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.
ಜೈಲಲ್ಲಿ ದರ್ಶನ್‌ಗೆ ವಿಐಪಿ ಟ್ರೀಟ್‌ಮೆಂಟ್: ಮತ್ತೊಂದು ಫೋಟೋ ವೀಡಿಯೋ ವೈರಲ್
ಘಟನೆ ಹೇಗೆ ನಡೆದಿದೆ ಎಂದು ವರದಿ ಕೇಳಿದ್ದೇನೆ. ಬಂಧೀಖಾನೆ ಡಿಜಿ ಕೂಡ ಸ್ಥಳಕ್ಕೆ ಹೋಗಿದ್ದಾರೆ. ಏಳು ಜನ ಅಮಾನತು ಆದವರು ಅವಕಾಶ ಮಾಡಿಕೊಟ್ಟವರಲ್ಲಿ ಭಾಗಿಯಾಗಿದ್ದಾರೆ. ಮುಂದಿನ ಕ್ರಮ ತೆಗೆದುಕೊಳ್ತೀವಿ. ಜೈಲ್ ಸೂಪರಿಡೆಂಟ್ ಕೂಡ ವರ್ಗಾವಣೆ ಮಾಡುತ್ತೇವೆ. ಅವರ ವಿರುದ್ದ ಕೂಡ ಕ್ರಮ ಆಗಲಿದೆ. ಜಾಮರ್ ಹಾಕಿದಿವಿ ಸಿಸಿಟಿವಿ ಹಾಕಿದಿವಿ, ಆದರೂ ಇಂಥ ಘಟನೆ ನಡೆದರೆ ಪೊಲೀಸ್ ಅಧಿಕಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜೈಲ್ ಸೂಪರಿಡೆಂಡ್ ಭಾಗಯಾಗಿದ್ರೆ ಅವರ ಮೇಲೂ ಕೂಡ ಕಠಿಣ ಕ್ರಮ. ನೀವು ಪ್ರಶ್ನೆ ಮಾಡಿದ ವೇಳೆ ಚಿಕನ್ ಬಿರಿಯಾನಿ ಕೊಟ್ಟಿರಲಿಲ್ಲ. ಈ ಘಟನೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಯಾರ ಮೊಬೈಲ್ ನಲ್ಲಿ ಫೋಟೋ ಇದೆ, ಹೇಗೆ ಮೊಬೈಲ್ ಒಳಗೆ ಹೋಯ್ತು ಎಲ್ಲವೂ ತನಿಖೆ ಆಗುತ್ತಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಎಲ್ಲರೂ ಕೂಡ ದರ್ಶನ್ ಭೇಟಿಗೆ ಹೋಗುತ್ತಿಲ್ಲ. ತನಿಖೆಯಲ್ಲಿ ಯಾರೆಲ್ಲ ದರ್ಶನ್ ಭೇಟಿ ಮಾಡುತ್ತಿದ್ದಾರೆ ಅದೂ ಕೂಡ ಹೊರಗೆ ಬರುತ್ತದೆ. ಇಂಥ ಇನ್ಸಿಡೆಂಟ್ ಆದಾಗ ಹಿರಿಯ ಅಧಿಕಾರಿಗಳು ಅದನ್ನು ನೋಡಲೇಬೇಕು. ಮಾನಿಟರಿಂಗ್ ನಲ್ಲಿ ಲ್ಯಾಪ್ಸ್ ಆದಾಗ ಇಂಥ ಘಟನೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಹೊಣೆಗಾರರಾಗಿದ್ದರೆ ಅವರನ್ನೂ ಕೂಡ ಅಮಾನತು ಮಾಡ್ತೇವೆ. ಮೊನ್ನೆ ಸಿಸಿಬಿ ರೇಡ್ ಮಾಡಿದಾಗ ಏನೂ ಸಿಗಲಿಲ್ಲ ಅಂತ ಹೇಳಿದ್ದಾರೆ. ಅದನ್ನೂ ಕೂಡ ತನಿಖೆ ಮಾಡ್ತೇವೆ. ರೇಡ್ ಆಗುವ ಮೂರು ದಿನ ಮುಂಚೆ ಸಿಸಿಟಿವಿ ಚೆಕ್ ಮಾಡ್ತಿದ್ದೇವೆ. ಮಾಹಿತಿ ಸೋರಿಕೆ ಆಗಿತ್ತಾ ಎಂಬ ಬಗ್ಗೆಯೂ ವೆರಿಫೈ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
24 ಗಂಟೆ ಮಾನಿಟರಿಂಗ್ ನಡೆಯುತ್ತಿರುತ್ತದೆ. ಸಿಸಿಟಿವಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಹೋಗುತ್ತಾ ಇರುತ್ತದೆ. ಅದನ್ನು ಹೊರತುಪಡಿಸಿ ಕೂಡ ಈ ಘಟನೆ ನಡೆದಿದೆ. ಯಾರ ಒತ್ತಡವೂ ಕೂಡ ನಮ್ಮ ಮೇಲೆ ಇಲ್ಲ. ಯಾರೂ ಕೂಡ ನನ್ನ ಲೆವೆಲ್ ಗೆ ಮುಟ್ಟುವುದಕ್ಕೆ ಆಗುವುದಿಲ್ಲ. ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ. ಇರುವ ತಪ್ಪುಗಳನ್ನು ಸರಿಮಾಡುತ್ತೇವೆ. ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ತೇವೆ. ಈ ಕೇಸ್ ಅನ್ನು ಯಾವುದೇ ಕಾರಣಕ್ಕೂ ಲೂಸ್ ಮಾಡುವುದಿಲ್ಲ. ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ. ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದೇನೆ ಎಂದು ಹೇಳಿದ್ದಾರೆ. ನಾನು ಕೋಪ ಮಾಡಿಕೊಳ್ಳುತ್ತಿಲ್ಲ, ನಾವು ಹೇಳುವುದನ್ನು ಕೇಳಿ. ಯಾರೂ ಕೂಡ ಅನುಮಾನ ಪಡುವುದು ಬೇಕಿಲ್ಲ. ಕಾನೂನು ಪ್ರಕಾರ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ತೀವಿ. ದರ್ಶನ್ ಮೇಲೆ ಈ ವಿಚಾರಕ್ಕೆ ಪ್ರತ್ಯೇಕ ಕೇಸ್ ಮಾಡಬೇಕಾ ನೋಡುತ್ತೇವೆ. ಆತಿಥ್ಯ ಸಿಗದೇ ಇರುವ ಕಡೆ ದರ್ಶನ್ ಕಳಿಸಬೇಕಾ ಚರ್ಚೆ ಮಾಡೋಣ ಎಂದಿದ್ದಾರೆ.