
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಕೊಲೆ ಪ್ರಕರಣದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇವರ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಚಿನ್ ಎನ್ನುವ ಆರೋಪಿಯನ್ನು ಇದಾಗಲೇ ಬಂಧಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ ಕೆಲವೊಂದು ವಿಷಯಗಳು ಬೆಳಕಿಗೆ ಬಂದಿದ್ದು, ಅದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಸಚಿನ್ ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಹಿಮಾನಿ ಅವರ ಕೊಲೆ ಭಾರಿ ಗಲಾಟೆ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಹಾಗೂ ಇದು ಮಾಧ್ಯಮಗಳಲ್ಲಿ ಸುದ್ದಿಯಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು 36 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
'ಹಿಮಾನಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಆರೋಪಿ ಸಚಿನ್ ಸುಮಾರು ಒಂದು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಹಿಮಾನಿ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಆತನಿಗೆ ಇದಾಗಲೇ ಮದುವೆಯಾಗಿದೆ. ಸಚಿನ್ ಹಿಮಾನಿ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಇಬ್ಬರೂ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ನಡೆಸುತ್ತಿದ್ದರು. ಫೆಬ್ರವರಿ 27 ರಂದು ರಾತ್ರಿ 9 ಗಂಟೆಗೆ ಆರೋಪಿ ಸಚಿನ್, ಹಿಮಾನಿಯ ಮನೆಗೆ ತಲುಪಿದ್ದ. ಅವನು ರಾತ್ರಿ ಆಕೆಯ ಮನೆಯಲ್ಲಿಯೇ ತಂಗಿದ್ದ. ಫೆಬ್ರವರಿ 28 ರಂದು, ಹಗಲಿನಲ್ಲಿ, ಹಿಮಾನಿ ಮತ್ತು ಸಚಿನ್ ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ಸಚಿನ್ ಹಿಮಾನಿಯ ಕೈಗಳನ್ನು ಅವರ ಸ್ಕಾರ್ಫ್‌ನಿಂದ ಕಟ್ಟಿ, ಮೊಬೈಲ್ ಚಾರ್ಜರ್‌ನ ವೈರ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ' ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಸಚಿನ್ , ಹಿಮಾನಿಯ ಮೃತ ದೇಹವನ್ನು ಅವರ ಮನೆಯಲ್ಲಿ ಇರಿಸಿದ್ದ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿದ್ದ. ಗಲಾಟೆಯ ಸಮಯದಲ್ಲಿ, ಆರೋಪಿಯ ಕೈಗೆ ಗಾಯಗಳಾಗಿದ್ದು, ರಕ್ತವು ಹೊದಿಕೆಯ ಮೇಲೆ ಬಿದ್ದಿದೆ. ಸಾಕ್ಷ್ಯಗಳನ್ನು ನಾಶಮಾಡಲು, ಆತ ಕ್ವಿಲ್ಟ್ ಕವರ್ ತೆಗೆದು ಮೃತ ದೇಹದೊಂದಿಗೆ ಸೂಟ್‌ಕೇಸ್‌ನಲ್ಲಿ ತುಂಬಿಸಿದ್ದಾನೆ. ಆಟೋದಲ್ಲಿ ಹೋಗಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಸೆದಿದ್ದಾನೆ. ನಂತರ, ಆರೋಪಿಗಳು ಮೃತ ಹಿಮಾನಿ ಧರಿಸಿದ್ದ ಉಂಗುರಗಳು, ಚಿನ್ನದ ಸರ, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಆಭರಣಗಳನ್ನು ಚೀಲದಲ್ಲಿ ಹಾಕಿ ಹಿಮಾನಿಯ ಸ್ಕೂಟಿಯನ್ನು ತೆಗೆದುಕೊಂಡು ಕನೌಂಡಾ ಗ್ರಾಮದಲ್ಲಿರುವ ತನ್ನ ಅಂಗಡಿಗೆ ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಂತರ, ಶವವನ್ನು ವಿಲೇವಾರಿ ಮಾಡಲು, ಆರೋಪಿಯು ರಾತ್ರಿ 10 ಗಂಟೆ ಸುಮಾರಿಗೆ ಮೃತ ಹಿಮಾನಿಯ ಮನೆಗೆ ಹಿಂತಿರುಗಿದ್ದ. ತನ್ನ ಸ್ಕೂಟರ್ ಅನ್ನು ಮನೆಯಲ್ಲಿ ನಿಲ್ಲಿಸಿದ ನಂತರ, ರಾತ್ರಿ 10-11 ಗಂಟೆ ಸುಮಾರಿಗೆ ಆಟೋ ಬಾಡಿಗೆಗೆ ಪಡೆದು ಸೂಟ್‌ಕೇಸ್‌ನಲ್ಲಿ ಶವದೊಂದಿಗೆ ದೆಹಲಿ ಬೈಪಾಸ್, ರೋಹ್ಟಕ್ ತಲುಪಿದ. ಅವನು ಅಲ್ಲಿಂದ ಬಸ್ ಹತ್ತಿ ಸಂಪ್ಲಾಗೆ ಹೋದನು. ಸಮಲ್ಖಾ ಬಸ್ ನಿಲ್ದಾಣದ ಬಳಿಯ ಪೊದೆಗಳಲ್ಲಿ ಸೂಟ್‌ಕೇಸ್‌ನಲ್ಲಿ ಇರಿಸಲಾಗಿದ್ದ ಶವವನ್ನು ಎಸೆದು ಪರಾರಿಯಾಗಿದ್ದಾನೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಯುವಕರೇ ಎಚ್ಚರ, ಎಚ್ಚರ... ಮೂತ್ರ ಶೇಖರಿಸಿಟ್ಟು ಗರ್ಭಿಣಿಯಾಗ್ತಾರೆ! ಹೊಸ ವಂಚನೆ ಬಗ್ಗೆ ಇವಳ ಬಾಯಲ್ಲೇ ಕೇಳಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ