Belagvai HESCOM Employee Suicide: ಗುತ್ತಿಗೆ ಆಧಾರದ ಮೇಲೆ ಹೆಸ್ಕಾಂ ಇಲಾಖೆಯಲ್ಲಿ ಲೈನ್‌ಮನ್ ಕೆಲಸ ನಿರ್ವಹಿಸುತ್ತಿದ್ದ ನೌಕರನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿ (ಸೆ. 13): ಗುತ್ತಿಗೆ ಆಧಾರದ ಮೇಲೆ ಹೆಸ್ಕಾಂ (HESCOM)ಇಲಾಖೆಯಲ್ಲಿ ಲೈನ್‌ಮನ್ ಕೆಲಸ ನಿರ್ವಹಿಸುತ್ತಿದ್ದ ನೌಕರನೊಬ್ಬ ಹೆಸ್ಕಾಂ ಇಲಾಖೆಯ ಆವರಣದಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ವಿಜಯಪುರ ಜಿಲ್ಲೆಯ ಮಂಜುನಾಥ ಗಂಗಪ್ಪ ಮುತ್ತಗಿ (31) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆ ನೌಕರ. ಈತ ವಿದ್ಯುತ್ ಕಂಬಗಳನ್ನು ನಿಲ್ಲಿಸುವ ಯಂತ್ರವೊಂದಕ್ಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಲೈನ್ ಮ್ಯಾನ್ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದೆ. ತನ್ನ ಸಹೋದ್ಯೋಗಿ ಹಾಗೂ ಹಿರಿಯ ಅಧಿಕಾರಿಯ ಕಿರುಕುಳ ತನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದು ಲೈನ್ ಮ್ಯಾನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಸಹೋದ್ಯೋಗಿ ಬಸವರಾಜ್ ಹಾಗೂ ನಜೀರ್ ಡಾಲಾಯತ್ ತನ್ನ ಸಾವಿಗೆ ಕಾರಣ ಎಂದಿರುವ ಮಂಜು, ಕೆಲಸದ ಸಮಯಲ್ಲಿ ಕಿರುಕುಳ ಹಾಗೂ ಭೇದಭಾವ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಶರಣಾಗುತ್ತಿರುವುದಾಗಿ ಬರೆದಿದ್ದಾನೆ. ಯಾರ ಮನಿಸಿಗಾದರೂ ಬೇಜಾರಾಗಿದ್ರೆ ಐ ಆಮ್ ಸಾರಿ ಅಂತ ಡೆತ್ ನೋಟಿನಲ್ಲಿ ಉಲ್ಲೇಖ ಮಾಡಲಾಗಿದೆ.
ನೇಣು ಹಾಕೋದನ್ನ ತಪ್ಪಿಸೋದು ಬಿಟ್ಟು ವಿಡಿಯೋ ಮಾಡಿದ ಭೂಪರು: ಮಾನವೀಯತೆ ಮರೆತು ಬಿಟ್ರಾ ಜನ?
ಸೋಮವಾರ ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಾಗ ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈತನ ಸಾವಿನ ಬಗ್ಗೆ ಅನೇಕ ರೀತಿಯ ಅನುಮಾನಗಳು ಕೇಳಿ ಬರುತ್ತಿವೆ. ಸ್ಥಳಕ್ಕೆ ಅಥಣಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೊದಲ ಹಂತದಲ್ಲಿ ಆತನ ಮೊಬೈಲ್‌ನಲ್ಲಿ ಇಬ್ಬರು ಹಿರಿಯ ಸಹೋದ್ಯೋಗಿಗಳ ಹೆಸರು ಸೂಚಿಸಿದ್ದು, ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಆತ್ಮೀಯರಿಗೆ ಮಾಹಿತಿ ಹಂಚಿಕೊಂಡಿದ್ದಾನೆ. ಅವರನ್ನು ಕೂಡ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ?: ನೌಕರನ ಪತ್ನಿ ಕೂಡ ಹೆಸ್ಕಾಂ ಅಧಿಕಾರಿಗಳ ಕಿರುಕುಳದಿಂದ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಸಂದೇಹದ ಮೇಲೆ ದೂರು ನೀಡಿದ್ದು, ಅಥಣಿ ಪಿಎಸ್‌ಐ ಶಿವಶಂಕರ ಮುಕರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನೂರಾರು ಕೋಟಿ ರು. ಭ್ರಷ್ಟಾಚಾರ ಹಗರಣ ಎದುರಿಸುತ್ತಿರುವ ಅಥಣಿ ಹೆಸ್ಕಾಂ ಕಚೇರಿಯಲ್ಲಿ 20ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಅಮಾನತುಗೊಂಡು ಪ್ರಭಾರ ಅಧಿಕಾರಿಗಳಿಂದ ಆಡಳಿತ ಸೇವೆ ಮುಂದುವರೆದಿತ್ತು.
ಇಂತಹ ಸಂದರ್ಭದಲ್ಲಿ ಗುತ್ತಿಗೆ ಆಧಾರದ ಮೇಲಿನ ನೌಕರನೋರ್ವ ಕಚೇರಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲವು ಸಂದೇಹಗಳಿಗೆ ಎಡೆಮಾಡಿದೆ. ಇಲಾಖೆಯಲ್ಲಿನ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇನ್ನುಳಿದ ನೌಕರರಲ್ಲಿ ಆತಂಕ ಮೂಡಿಸಿದೆ