
ಬೆಂಗಳೂರು (ಜು.09): ಯಲಹಂಕದ ಅನಂತಪುರ ಗ್ರಾಮದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಯುವತಿ ಸೇರಿ ಮೂವರು ಸವಾರರು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಸಂಜೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಅನಂತಪುರ ಗ್ರಾಮದ ಕೃತಿಯಾ ಹಾಗೂ ರಾಮಗೊಂಡನಹಳ್ಳಿಯ ಇಬ್ಬರು ಯುವಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಕೃತಿಕಾ ದ್ವಿಚಕ್ರ ವಾಹನದಲ್ಲಿ ಸಂಜೆ ರಾಮಗೊಂಡನಹಳ್ಳಿ ಕಡೆಯಿಂದ ಅನಂತಪುರದ ಕಡೆಗೆ ಬರುತ್ತಿದ್ದರು. ಇದೇ ವೇಳೆ ಇಬ್ಬರು ಯುವಕರಿದ್ದ ದ್ವಿಚಕ್ರ ವಾಹನ ಎದುರಿನಿಂದ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೃತಿಕಾ ಹಾಗೂ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರ ರಸ್ತೆಗೆ ಬಿದ್ದಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೇ ಕಂಟಕವಾದ ತರಕಾರಿ ಬೆಲೆ ಏರಿಕೆ: ಖರೀದಿಗೆ ಗ್ರಾಹಕರ ಹಿಂದೇಟು
ಅಪಘಾತದಲ್ಲಿ ಕೃತಿಕಾ ಸೇರಿ ಮೂವರು ಸವಾರರು ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಯುವಕರು ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಸಿಸಿಟಿವಿ ದೃಶ್ಯಾವಗಳಿಂದ ತಿಳಿದು ಬಂದಿದೆ. ಅಪಘಾತದ ವೇಳೆ ಕೃತಿಕಾ ಸೇರಿ ಮೂವರು ಸವಾರರು ಹೆಲ್ಮೆಟ್ ಧರಿಸಿಲ್ಲ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ತಪ್ಪಿಸಲು ಹೋಗಿ ದೇವರ ಚಪ್ಪರಕ್ಕೆ ವಾಹನ ಡಿಕ್ಕಿ: ಸೋಮವಾರಪೇಟೆ: ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಯಡವನಾಡು ಗ್ರಾಮದ ಉದ್ಭವ ಎಮ್ಮೆ ಬಸವಣ್ಣನ ಮೂರ್ತಿಗೆ ಅಳವಡಿಸಿದ್ದ ಚಪ್ಪರಕ್ಕೆ ಪಿಕ್‌ಅಪ್ ಡಿಕ್ಕಿ ಹೊಡೆದ ಪರಿಣಾಮ ಬಸವಣ್ಣನ ಮೂರ್ತಿಗೆ ಹಾನಿಯಾಗಿರುವ ಘಟನೆ ಶನಿವಾರ ಸಂಭವಿಸಿದೆ. ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಪಿಕ್‌ಅಪ್ ವಾಹನ ಎದುರಿಗೆ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ದಿಢೀರ್ ಆಗಿ ಉದ್ಭವ ಎಮ್ಮೆ ಬಸವಣ್ಣನ ಮೂರ್ತಿಗೆ ಅಳವಡಿಸಿದ್ದ ಚಪ್ಪರಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಬ್ರ್ಯಾಂಡ್ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ
ಚಪ್ಪರದ ಕಂಬಗಳು ಬಸವಣ್ಣನ ಮೂರ್ತಿಯ ಮೇಲೆ ಬಿದ್ದ ಪರಿಣಾಮ ಬಸವಪ್ಪನ ಮೂರ್ತಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ದೇವರ ಮೂರ್ತಿಯ ಕಡೆ ಪಿಕ್‌ಅಪ್ ವಾಹನ ತಿರುಗದೆ ನೇರವಾಗಿ ಕಾರಿಗೆ ಹೊಡೆದಿದ್ದರೆ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಬೇಕಿತ್ತು, ಅದನ್ನು ತಪ್ಪಿಸಲು ಹೋಗಿ ಎಮ್ಮೆ ಬಸವಣ್ಣನ ಮೂರ್ತಿಗೆ ಹಾನಿಯುಂಟಾಯಿತು. ಆದರೆ ವೇಗವಾಗಿ ಬಂದ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಹೋಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ