
ಕೋಲ್ಕತಾ: ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಲ್ಕತ್ತಾ (ಐಐಎಂ-ಸಿ) ಕ್ಯಾಂಪಸ್‌ನಲ್ಲಿ ನಡೆದ ಅತ್ಯಾ*ರ ಘಟನೆಯ ಆರೋಪಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆ ಲೋಕಾಪುರ ಮೂಲದ ವಿದ್ಯಾರ್ಥಿ ಪರಮಾನಂದ ಟೋಪಣ್ಣವರಗೆ (ಪರಮಾನಂದ ಜೈನ್) ಶನಿವಾರ ಜಾಮೀನು ನೀಡಲಾಗಿದೆ.
ದೂರುದಾರ ಯುವತಿ ತನಿಕೆಗೆ ಅಸಹಕಾರ ತೋರುತ್ತಿದ್ದು, ಹೇಳಿಕೆ ನೀಡಲು ಆಗಮಿಸಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ. 2 ಬಾರಿ ಮ್ಯಾಜಿಸ್ಟ್ರೇಟ್ ಎದುರೂ ಹಾಜರಾಗಿಲ್ಲ. ಪೊಲೀಸರು ತನಿಖಾ ಉದ್ದೇಶಗಳಿಗಾಗಿ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತರಲಾಯಿತು.
ಹೀಗಾಗಿ ಅಲಿಪುರ ಸ್ಥಳೀಯ ಕೋರ್ಟು 50 ಸಾವಿರ ರು. ಬಾಂಡ್ ಪಡೆದು ಆರೋಪಿಗೆ ಜಾಮೀನು ನೀಡಿತು. ಈ ಅತ್ಯಾ*ರ ಘಟನೆ ಜು.11 ರಂದು ಐಐಎಂ-ಸಿ ಕ್ಯಾಂಪಸ್‌ನಲ್ಲಿ ನಡೆದಿತ್ತು.
15 ವರ್ಷದ ಹುಡುಗಿಯೊಬ್ಬಳ ಮೈಗೆ ಅಪರಿಚಿತರು ಬೆಂಕಿ ಹಚ್ಚಿ ಪರಾರಿ
ದೌರ್ಜನ್ಯವೆಸಗಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಒಡಿಶಾದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಲ್ಲೇ ಮೈಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದ ಘಟನೆ ತಣ್ಣಗಾಗುವ ಮೊದಲೇ, ಒಡಿಶಾದ ಪುರಿ ಜಿಲ್ಲೆಯಲ್ಲಿ 15 ವರ್ಷದ ಹುಡುಗಿಯೊಬ್ಬಳ ಮೈಗೆ ಅಪರಿಚಿತರು ಬೆಂಕಿ ಹಚ್ಚಿ ಪರಾರಿಯಾದ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.
ಸಂತ್ರಸ್ತೆಯ ದೇಹದ ಶೇ.70ರಷ್ಟು ಭಾಗ ಸುಟ್ಟುಹೋಗಿದ್ದು, ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿದ್ದೇನು?: ಪುರಿ ಜಿಲ್ಲೆಯ ಬಯಬರ್ ಗ್ರಾಮದ ನುಗೋಪಾಲಪುರ ಬಸ್ತಿಯ ಬಾಲಕಿ 8ನೇ ತರಗತಿ ಬಳಿಕ ಶಾಲೆ ಬಿಟ್ಟಿದ್ದಳು. ಆಕೆಯ ತಂದೆ ಸ್ಥಳೀಯ ವಾಹನ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕಿ ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ತನ್ನ ಗೆಳತಿಯ ಮನೆಗೆ ತೆರಳುತ್ತಿದ್ದಳು. ಆಗ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಆಕೆಯನ್ನು ಅಡ್ಡಗಟ್ಟಿ ಬೆದರಿಸಿ ಒತ್ತಾಯದಿಂದ ಭಾರ್ಗವಿ ನದಿ ದಡಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವಳ ದೇಹದ ಮೇಲೆ ಪೆಟ್ರೋಲ್ ಸಿಂಪಡಿಸಿ, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ