ಹಂಪಿ ಗ್ಯಾಂಗ್ ರೇಪ್: ₹100 ಕೇಳಿದ್ದಕ್ಕೆ ₹20ರ ನೋಟು ಕೊಟ್ಟವನ ಕಾಲುವೆಗೆ ನೂಕಿ, ಇಸ್ರೇಲಿ ಮಹಿಳೆ ಮೇಲೆ ಮುಗಿಬಿದ್ದಿದ್ದ ಕಾಮುಕರು!

Published : Mar 10, 2025, 08:55 AM ISTUpdated : Mar 10, 2025, 10:52 AM IST
ಹಂಪಿ ಗ್ಯಾಂಗ್ ರೇಪ್: ₹100 ಕೇಳಿದ್ದಕ್ಕೆ ₹20ರ ನೋಟು ಕೊಟ್ಟವನ ಕಾಲುವೆಗೆ ನೂಕಿ, ಇಸ್ರೇಲಿ ಮಹಿಳೆ ಮೇಲೆ ಮುಗಿಬಿದ್ದಿದ್ದ ಕಾಮುಕರು!

ಸಾರಾಂಶ

Hampi rape case: ಹಂಪಿ ಬಳಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಗಂಗಾವತಿಯ ಸಾಯಿನಗರದ ಶರಣು (23)ನನ್ನು ಗಂಗಾವತಿ ಪೊಲೀಸರು ಚೆನ್ನೈನ ರೈಲ್ವೆ ಸ್ಟೇಷನ್ ಬಳಿ ಬಂಧಿಸಿದ್ದಾರೆ.

ಗಂಗಾವತಿ (ಮಾ.10) : ಹಂಪಿ ಬಳಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಚೆನ್ನೈನಲ್ಲಿ ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಂಗಾವತಿಯ ಸಾಯಿನಗರದ ಶರಣು (23)ನನ್ನು ಗಂಗಾವತಿ ಪೊಲೀಸರು ಚೆನ್ನೈನ ರೈಲ್ವೆ ಸ್ಟೇಷನ್ ಬಳಿ ಬಂಧಿಸಿದ್ದು, ಗಂಗಾವತಿಗೆ ಕರೆ ತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರದ ಜಂಗ್ಲಿ ರಸ್ತೆ ಬಳಿಯ ತುಂಗಭದ್ರ ಎಡದಂಡೆ ಕಾಲುವೆ ಬಳಿ ಮಾರ್ಚ್‌ 6ರ ತಡರಾತ್ರಿಯಂದು ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲ್ ಮೂಲದ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಜೊತೆಗೆ, ಮೂವರು ಪುರುಷರ ಮೇಲೂ ಹಲ್ಲೆ ನಡೆಸಿ, ಅವರನ್ನು ಕಾಲುವೆಗೆ ತಳ್ಳಿದ್ದರು. ಆರೋಪಿಗಳಾದ ಗಂಗಾವತಿ ಸಾಯಿ ನಗರದ ಮಲ್ಲೇಶ್ ಮತ್ತು ಚೇತನ್‌ಸಾಯಿ ಎಂಬುವರನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಸಾಯಿನಗರದ ಶರಣು ತಲೆಮರೆಸಿಕೊಂಡು ಚೆನ್ನೈನಲ್ಲಿದ್ದ. ಮೊಬೈಲ್ ನೆಟ್‌ವರ್ಕ್‌ ಆಧರಿಸಿ ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಸಾಮೂಹಿಕ ಬಲತ್ಕಾರ: ಬೆಚ್ಚಿಬಿದ್ದ ಪ್ರವಾಸಿಗರು! 'ಮಹಿಳಾ ದಿನ' ಹೊತ್ತಲ್ಲಿ ಇದೆಂಥ ಕ್ರೌರ್ಯ?

ಬಂಧಿತ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ:

ಈ ಮಧ್ಯೆ, ಬಂಧಿತ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಮಧ್ಯೆ, ಪೊಲೀಸರು ಬಂಧಿತ ಇಬ್ಬರು ಆರೋಪಿಗಳನ್ನು ಸಾಣಾಪುರ ಬಳಿ ಘಟನಾ ಸ್ಥಳ ಕರೆದುಕೊಂಡು ಬಂದು, ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳಿಂದ ತಾವು ಮಾಡಿದ ಕೃತ್ಯದ ಬಗ್ಗೆ ವಿವರಣೆ ಪಡೆದ ಪೊಲೀಸರು, ಆರೋಪಿಗಳು ಹಲ್ಲೆಗೆ ಉಪಯೋಗಿಸಿರುವ ಕಲ್ಲು, ಕಟ್ಟಿಗೆ ಮತ್ತು ಮೂವರನ್ನು ಕಾಲುವೆಗೆ ತಳ್ಳಿರುವ ಬಗ್ಗೆ ವಿವರಣೆ ಪಡೆದರು. ಅಲ್ಲದೆ, ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ರೇಪ್ ಮಾಡಿರುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಅಹಿತಕರ ಘಟನೆಗೆ ರೆಸಾರ್ಟ್‌ ಮಾಲೀಕರೇ ಹೊಣೆ: ಪೊಲೀಸ್‌:

ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹನುಮನನಳ್ಳಿ, ಸಾಣಾಪುರ, ಆನೆಗೊಂದಿ ರೆಸಾರ್ಟ್‌ಗಳ ಮೇಲೆ ನಿಗಾ ವಹಿಸಿದ್ದು, ಎಲ್ಲ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ವಾಸ್ತವ್ಯ ಮಾಡಿರುವ ವಿದೇಶಿ ಪ್ರವಾಸಿಗರು ಹಾಗೂ ದೇಶಿ ಪ್ರವಾಸಿಗರ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಅಹಿತಕರ ಘಟನೆಗಳಿಗೆ ನೀವೇ ಹೊಣೆಗಾರರು ಎಂದು ಎಚ್ಚರಿಸಿದ್ದಾರೆ.

ಡ್ರಗ್ಸ್‌ ಮಾಫಿಯಾದ ಹಿಂದೆ ರಾಜಕೀಯ ಕೈವಾಡ: ರಡ್ಡಿ

ಸಾಣಾಪುರ ಭಾಗದಲ್ಲಿ ಇರುವ ಡ್ರಗ್ಸ್‌ ಮಾಫಿಯಾ ಹಿಂದೆ ಕೆಲ ರಾಜಕಾರಣಿಗಳು, ಅಧಿಕಾರಿಗಳ ಕೈವಾಡ ಕೂಡ ಇದೆ. ಅಲ್ಲಿ ಕೆಲವರು ಶಾಮೀಲಾಗಿ ಈ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಈ ಭಾಗದಲ್ಲಿನ ಅಕ್ರಮ ಹೊಂಸ್ಟೇಗಳನ್ನು ಬಂದ್ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಣಾಪುರದ ಅತ್ಯಾಚಾರ ಪ್ರಕರಣದಲ್ಲಿ ಡ್ರಗ್‌ ಮಾಫಿಯಾ ಜಾಲ ಕೂಡ ಕಾರಣವಾಗಿರಬಹುದು. ಹಂಪಿ ನೋಡಲು ಬರುವ ಹೆಸರಲ್ಲಿ ಈ ಥರ ಕೆಲಸ ಮಾಡಲಾಗುತ್ತಿದೆ. ಇಲ್ಲಿಗೆ ಬರೋರು ಅಂತಹ ಹೈ-ಫೈ ವಿದೇಶಿಗರಲ್ಲ, ಅವರು ಬರೋದೇ ಈ ಕೆಲಸಕ್ಕಾಗಿ; ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಜಾಲವಾಗಿದೆ. ಅದೊಂದು ವ್ಯವಸ್ಥೆಯಾಗಿದೆ, ಹೊರತು ಬೇರೇನೂ ಇಲ್ಲ ಎಂದರು.

ಗಂಗಾವತಿ ಭಾಗದಲ್ಲಿ ಅಷ್ಟೆ ಅಲ್ಲ, ಎಲ್ಲ ಟೂರಿಸ್ಟ್ ಪ್ಲೇಸ್‌ಗಳಲ್ಲೂ ಈ ಥರ ಕೆಲವು ಕಡೆ ಇದೆ. ಮೊದಲಿನಿಂದಲೂ ಈ ಪದ್ಧತಿಗಳು ನಡೆದುಕೊಂಡು ಬಂದಿವೆ. ನಾನು ಈ ಹಿಂದೆ ವಿಧಾನಸೌಧದಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೆ. ನನ್ನ ವಿರುದ್ಧವೇ ಕೆಲವರು ಸಿಕ್ಕಾಪಟ್ಟೆ ಮಾತನಾಡಿದರು. ಗಂಗಾವತಿ ಶಾಸಕರು ಕೂಡ ಮಾತನಾಡಿದರು. ಇದಕ್ಕೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಕಡಿವಾಣ ಹಾಕಬೇಕು. ನಾನು ಗೃಹ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಮಾತನಾಡುವೆ ಎಂದರು.

₹100 ಕೇಳಿದ್ದಕ್ಕೆ ₹20ರ ನೋಟು ಕೊಟ್ಟವನ ಕಾಲುವೆಗೆ ನೂಕಿ ಹತ್ಯೆ:

₹100ಗೆ ಬೇಡಿಕೆ ಇಟ್ಟರು, ತನ್ನ ಬಳಿ ಇದ್ದ ₹20ರ ನೋಟು ಕೊಟ್ಟ ಒಡಿಶಾದ ಬಿಬಾಸ್‌ (26) ನನ್ನು ಕಾಲುವೆಗೆ ನೂಕಿದರು. ಸಾಣಾಪುರ ಬಳಿ ನಡೆದ ಗ್ಯಾಂಗ್‌ರೇಪ್‌ ಹಾಗೂ ಹಲ್ಲೆ ಪ್ರಕರಣದಲ್ಲಿ ಬಂಧಿತರಾದವರು ನೀಡಿದ ಮಾಹಿತಿ ಈ ಸಂಗತಿ ಬಯಲಿಗೆಳೆದಿದೆ. ಹೋಂ ಸ್ಟೇನಲ್ಲಿ ಊಟ ಮಾಡಿದ ಬಳಿಕ ಮಾ.6ರಂದು ರಾತ್ರಿ ಸಾಣಾಪುರ ಕೆರೆ ಸಮೀಪದ ದುರುಗಮ್ಮ ಗುಡಿ ಸಮೀಪ ನಕ್ಷತ್ರ ನೋಡುತ್ತಾ, ಸಂಗೀತದ ಆಲಾಪನೆಗೆ ಪ್ರವಾಸಿಗರು ಹಾಗೂ ಸಂತ್ರಸ್ತೆ ಕುಳಿತಿದ್ದಾಗ ಮೂವರು ಬೈಕ್‌ನಲ್ಲಿ ಆಗಮಿಸಿ ಪೆಟ್ರೋಲ್‌ ಕೇಳಿದ್ದಾರೆ. 

ಇದನ್ನೂ ಓದಿ: ಹಂಪಿ ಬಳಿಯ ಹೋಮ್‌ಸ್ಟೇ ಮಾಲಕಿ ಮೇಲೆ ಅತ್ಯಾಚಾರ: ಪೊಲೀಸ್ ಸಬ್ ಡಿವಿಷನ್ ಸ್ಥಾಪನೆಗೆ ಜನಾರ್ಧನರೆಡ್ಡಿ ಆಗ್ರಹ!

ಇಲ್ಲಿ ಪೆಟ್ರೋಲ್‌ ಸಿಗುವುದಿಲ್ಲ ಎಂದು ಹೇಳುತ್ತಲೇ ₹100 ಕೇಳಿದ್ದಾರೆ. ನಮ್ಮ ಬಳಿ ಹಣ ಇಲ್ಲ ಎಂದು ಸಂತ್ರಸ್ತೆ ಹೇಳಿದಾಗ; ಒಡಿಶಾದ ಬಿಬಾಸ್‌ ತನ್ನ ಬಳಿ ಇದ್ದ ₹20 ನೋಟು ನೀಡಿದ್ದಾರೆ. ಹೀಗಿದ್ದರೂ ಅವರ ಜತೆಗೆ ಜಗಳ ಕಾಯ್ದು, ಕಲ್ಲುಗಳಿಂದ ತಲೆ ಮೇಲೆ ಹೊಡೆದಿದ್ದಾರೆ. ಬಿಬಾಸ್‌, ಅಮೆರಿಕ ಪ್ರಜೆ ಮತ್ತು ಮಹಾರಾಷ್ಟ್ರದ ನಾಸಿಕ್‌ ಮೂಲದ ವ್ಯಕ್ತಿಯನ್ನು ಕಾಲುವೆಗೆ ತಳ್ಳಿದ್ದಾರೆ. ಹೋಂ ಸ್ಟೇ ಮಾಲಕಿ ಹಾಗೂ ಇಸ್ರೇಲ್‌ನ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಜತೆಗೆ, ಎರಡು ಮೊಬೈಲ್‌ ಹಾಗೂ ಬ್ಯಾಗ್‌ನಲ್ಲಿದ್ದ ಹಣ ಕದ್ದೊಯ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು